Advertisement

ಖಾತ್ರಿಯಿಂದ ಕೂಲಿಕಾರರ ಸಂಕಷ್ಟ ದೂರ

10:12 AM Apr 21, 2022 | Team Udayavani |

ಕಾರವಾರ: ಬೇಸಿಗೆ ಸಮಯದಲ್ಲಿ ಕೆಲಸದ ಅಭಾವದಿಂದ ಕೂಲಿಕಾರರು ಸಂಕಷ್ಟದ ದಿನಗಳನ್ನ ಕಳೆಯುತ್ತಿರುತ್ತಾರೆ. ಇದೇ ಕಾರಣಕ್ಕಾಗಿ ಅಸಂಘಟಿತ ಕೂಲಿಕಾರರಿಗೆ ಬೇಸಿಗೆ ಅವಧಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯೋಣ ಬಾ ಅಭಿಯಾನದಡಿ ಕೆಲಸ ನೀಡಲಾಗುತ್ತಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ವಡ್ಡರ್‌ ಹೇಳಿದರು.

Advertisement

ಮುಂಡಗೋಡ ತಾಲೂಕಿನ ಮಳಗಿಯಲ್ಲಿ ದುಡಿಯೋಣ ಬಾ ಅಭಿಯಾನದಡಿ ಸುಮಾರು 34 ಕೂಲಿಕಾರರ ಸೇರಿ ಕಾಲುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಶೇಷ ಅಂದ್ರೆ ಈ ಕೆಲಸದಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅದರಲ್ಲೂ ವಿಶೇಷವಾಗಿ 60 ವರ್ಷ ಮೇಲ್ಪಟ್ಟವರು 7 ಜನ ಹಾಗೂ 5 ವಿಧವೆಯರು, ಇಬ್ಬರು ವಿಕಲಚೇತನರು ಕೆಲಸದಲ್ಲಿ ತೊಡಗಿದ್ದಾರೆ. ನರೇಗಾ ಯೋಜನೆಯಡಿ ಸುಮಾರು ಎರಡು ಕಿಮೀ ವ್ಯಾಪ್ತಿಯಲ್ಲಿ 1ಮೀ ಅಗಲ ಹಾಗೂ 1ಮೀ ಆಳ ಅಳತೆಯಲ್ಲಿ ಕಾಲುವೆ ನಿರ್ಮಿಸಲಾಗುತ್ತಿದೆ. ಸುಮಾರು 3ಲಕ್ಷ ವೆಚ್ಚದಲ್ಲಿ ಕಳೆದ 24 ದಿನದಿಂದ ನಡೆಯುತ್ತಿರುವ ಕಾಲುವೆ ನಿರ್ಮಾಣ ಕಾಮಗಾರಿಯಲ್ಲಿ ಇವರೆಗೆ ಅಂದಾಜು 850 ಮಾನವದಿನಗಳನ್ನು ಸೃಜಿಸಲಾಗಿದೆ ಎಂದರು.

ಕಾಲುವೆ ನಿರ್ಮಾಣ ರೈತರ ಬಹಳ ದಿನಗಳ ಬೇಡಿಕೆಯಾಗಿತ್ತು. ಪ್ರತಿ ಮಳೆಗಾಲದಲ್ಲಿಯೂ ಸುತ್ತಲಿನ ಹೊಲದಲ್ಲಿ ನೀರು ತುಂಬಿ ಬೆಳೆಹಾನಿಯಾಗುತ್ತಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಕೃಷಿ ಹಾಗೂ ಅರಣ್ಯ ಇಲಾಖೆ ತಾಂತ್ರಿಕ ಸಹಾಯಕ ಅಭಿಯಂತರರಾದ ಬಸವರಾಜ ಪಾಟೀಲ ಹೇಳುವಂತೆ ಮಳೆಗಾಲ ಸಮೀಪಿಸುತ್ತಿರುವುದರಿಂದ ಏಪ್ರಿಲ್‌, ಮೇ, ಜೂನ್‌ ತಿಂಗಳಲ್ಲಿ ಕಾಲುವೆ ನಿರ್ಮಾಣ, ಟ್ರೆಂಚ್‌, ಕೆರೆ ನಿರ್ಮಾಣ ಕಾಮಗಾರಿಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುತ್ತದೆ. ಇಲ್ಲಿನ ಕೂಲಿಕಾರರು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಮುಂದಾಗುತ್ತಾರೆ ಎನ್ನುತ್ತಿದ್ದಾರೆ. ತಾಲೂಕು ಪಂಚಾಯತ್‌ ಮುಂಡಗೋಡ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next