ಬಸವಕಲ್ಯಾಣ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ದಮನ ಮಾಡಲು ಹೊರಟಿರುವ ಬಿಜೆಪಿ ಜೊತೆಗೆ ಕೈ ಜೋಡಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಉಪಚುನಾವಣೆ ಹಿನ್ನೆಲೆಯಲ್ಲಿ ನಗರದ ಅಕ್ಕಮಹಾದೇವಿ ಕಾಲೇಜಿನ ಆವರಣದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡ ಜೆಡಿಎಸ್ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪಶ್ಚಿಮ ಬಂಗಾಳದಲ್ಲಿ ಬಡವರ ಪರವಾಗಿ ಹೋರಾಟ ಮಾಡುವ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅವರನ್ನು ಕಡಿವಾಣ ಹಾಕುವ ಕೆಲಸ ಮಾಡಿದ್ದಾರೆ.
ಇದೇ ರೀತಿ ಪ್ರತಿಯೊಂದು ಕಡೆ ಅಧಿ ಕಾರ ವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ರೈತರಿಗೆ ಎರಡು ಪಟ್ಟು ಲಾಭ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಇಂದು ಪೆಟ್ರೋಲ್, ಡೀಸೆಲ್ ಹಾಗೂ ರೈತರ ಸಾಮಗ್ರಿಗಳ ಬೆಲೆ ದುಬಾರಿ ಮಾಡಿರುವ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು.
ನಾಡಿನ ಜನತೆಯನ್ನು ಉಪವಾಸ ಇಟ್ಟು ಅಭಿವೃದ್ಧಿ ಹೆಸರಿನಲ್ಲಿ ಸಾಲ ಮಾಡಿರುವ ಬಿಜೆಪಿ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಕೊರೊನಾ ಸಮಯದಲ್ಲಿ ಮೆಕ್ಯಾನಿಕ್, ಸವಿತಾ ಸಮಾಜ ಮತ್ತು ಮಡಿವಾಳ ಸಮಾಜ ಸೇರಿದಂತೆ ವಿವಿಧ ಸಮಾಜಗಳಿಗೆ ಪ್ರತಿ ತಿಂಗಳು 5 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿತ್ತು, ಆದರೆ, ಒಂದು ವರ್ಷ ಕಳೆಯುತ್ತ ಬಂದರೂ ಯಾವುದೇ ಹಣ ನೀಡಿಲ್ಲ. ಬದಲಾಗಿ ಘೋಷಣೆಯಾಗಿ ಉಳಿದಿದೆ ಎಂದು ಲೇವಡಿ ಮಾಡಿದರು. ಜಾತಿಗೊಂದು ಹೆಸರಿಗೆ ಪ್ರಾಧಿಕಾರ ಘೋಷಣೆ, ಸರ್ಕಾರ ಬಳಿ ಹಣ ಇಲ್ಲ. ತಾತ್ಕಾಲಿಕ ನಿಮಗೆ ಖುಷಿ ಪಡಿಸಲು ದಾರಿ ತಪ್ಪಿಸುತ್ತವೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಏ.2ರಿಂದ 15 ವರೆಗೆ ಬಸವಕಲ್ಯಾಣದ ಕ್ಷೇತ್ರದಲ್ಲಿ ಉಳಿದಕೊಳ್ಳುತ್ತೇನೆ ಎಂದರು.
ಇದಕ್ಕೂ ಮುಂಚೆ ಮಾಜಿ ಸಚಿವ ಹಾಗೂ ಶಾಸಕ ಬಂಡೆಪ್ಪಾ ಖಾಶೆಂಪೂರ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶಕುಮಾರ ಪಾಟೀಲ ಸೋಲಪುರೆ, ತಾಲೂಕು ಅಧ್ಯಕ್ಷ ಶಬ್ಬೀರ್ ಪಾಶಾ, ಜಿಪಂ.ಆನಂದ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು