Advertisement

ಪತ್ರಿಕೆ ಹಾಕುವ ಹುಡುಗನಿಗೆ ಸೇನೆ ಸೇರುವ ತವಕ

01:40 AM May 02, 2019 | Sriram |

ಕುಂದಾಪುರ: ಚಳಿ, ಮಳೆ, ಗಾಳಿ ಎನ್ನದೆ ದಿನಂಪ್ರತಿ ನಸುಕಿನಲ್ಲಿ ಎದ್ದು ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದ ಸುಜನ್‌ ಆಚಾರ್ಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 530 ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಅವರ ಮುಂದಿನ ಗುರಿ ಭಾರತೀಯ ಸೇನೆ ಸೇರುವುದು.

Advertisement

ಇಲ್ಲಿನ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಸುಜನ್‌, ಸಂಸ್ಕೃತದಲ್ಲಿ 99, ಭೌತಶಾಸ್ತ್ರದಲ್ಲಿ 97, ಅಂಕಗಣಿತದಲ್ಲಿ 93 ಅಂಕ ಪಡೆದಿದ್ದಾರೆ.

ಕುಂಭಾಶಿ ವಿನಾಯಕ ನಗರದ ಜನಾರ್ದನ ಆಚಾರ್ಯ- ಕುಸುಮಾ ದಂಪತಿಯ ಮೂವರು ಗಂಡು ಮಕ್ಕಳ ಪೈಕಿ ಸುಜನ್‌ ಎರಡನೆಯವರು. ಎಸೆಸೆಲ್ಸಿಯಲ್ಲಿ 567 ಅಂಕ ಗಳಿಸಿದ್ದರು. 9ನೇ ತರಗತಿಯಲ್ಲಿದ್ದಾಗಲೇ ಪತ್ರಿಕೆ ಹಾಕುವ ಕೈಂಕರ್ಯ ಆರಂಭಿಸಿದ್ದರು. ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿರುವ ಅಣ್ಣ, ಸರಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ತಮ್ಮ – ಇಬ್ಬರಿಗೂ ಸುಜನ್‌ ತನ್ನ ಸಂಪಾದನೆಯಿಂದ ಪಾಕೆಟ್‌ ಮನಿ ನೀಡುವುದುಂಟು.

ಸಂಪಾದನೆ
ತಂದೆಯೊಬ್ಬರ ದುಡಿಮೆಯಿಂದ ಸಂಸಾರ ಸರಿದೂಗಿಸುವುದು ಕಷ್ಟ ಎಂದರಿತು, ರಜಾ ದಿನಗಳಲ್ಲಿ ಸುಜನ್‌ ಬಟ್ಟೆ ಮಳಿಗೆಯಲ್ಲಿಯೂ ದುಡಿಯುತ್ತಾರೆ. ಸಂಪಾದನೆ ಅವರ ವಿದ್ಯಾಭ್ಯಾಸಕ್ಕೆ ಮಾತ್ರವಲ್ಲದೆ ಮನೆ

ಖರ್ಚಿಗೂ ನೆರವಾಗುತ್ತದೆ. ಸರಕಾರಿ ಶಾಲಾ ಕಾಲೇಜು ವಿದ್ಯಾಭ್ಯಾಸವಾದ ಕಾರಣ ಫೀಸು ಹೆಚ್ಚಿರುವುದಿದಿಲ್ಲ. ಇತರ ಖರ್ಚಿಗೆ ನನ್ನ ಸಣ್ಣ ಸಂಪಾದನೆ ಸಾಲುತ್ತದೆ. ಪತ್ರಿಕೆ ಹಾಕುವ ಉದ್ಯೋಗದಲ್ಲಿ ನನಗೆ ಕೀಳರಿಮೆ ಇಲ್ಲ. ಬೆಳಗ್ಗೆ ಬೇಗ ಹಾಸಿಗೆ ಬಿಡಬೇಕೆಂಬ ಉದಾಸೀನವೂ ಇಲ್ಲ ಎನ್ನುತ್ತಾರೆ ಸುಜನ್‌.

Advertisement

ಓದಿಗೆ ಸಮಯ ಪತ್ರಿಕೆ ಹಾಕುವುದು, ಬಟ್ಟೆ ಮಳಿಗೆ ದುಡಿಮೆಯ ನಡುವೆ ಓದಲು ಸಮಯವೆಲ್ಲಿ ಎಂಬ ಪ್ರಶ್ನೆಗೆ ಸುಜನ್‌ ನಗುತ್ತಾರೆ. ಸಂಜೆಯ ಸಮಯವನ್ನು ಸದುಪ
ಯೋಗ ಮಾಡುತ್ತೇನೆ. ಅದೇ ಸಾಕಾಗುತ್ತದೆ. ಜತೆಗೆ ಮನೆ ಮತ್ತು ಕಾಲೇಜಿನಲ್ಲಿ ನನ್ನ ಪರಿ ಸ್ಥಿತಿಗೆ ತಕ್ಕಂತೆ ಉತ್ತಮ ಪ್ರೋತ್ಸಾಹ ದೊರೆತಿದೆ ಎನ್ನುತ್ತಾರೆ. ಇವರ ತಂದೆ ಚಿನ್ನದ ಕೆಲಸ ಮಾಡುತ್ತಾರೆ. ತಾಯಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದು, ಮಕ್ಕಳ ಕಲಿಕೆಗೆ ಪ್ರೇರಣೆಯಾಗಿದ್ದಾರೆ. ಈಗ ಬಿಎಸ್‌ಸಿಗೆ ಸೇರುತ್ತಿದ್ದೇನೆ, ಆದರೆ ಸೇನೆ ಸೇರಲೇಬೇಕು. ಅಕ್ಟೋಬರ್‌ನಲ್ಲಿ ಸೇನಾ ಸೇರ್ಪಡೆಗೆ ಪರೀಕ್ಷೆ ನಡೆಯಲಿದೆ. ಅಲ್ಲಿಯವರೆಗೆ ಕಾಲೇಜು ವಿದ್ಯಾಭ್ಯಾಸ ಎನ್ನುತ್ತಾರೆ ಸುಜನ್‌.

ಅಂಕ ಗಳಿಕೆಗೆ ಇಡೀ ದಿನ ಓದುತ್ತಾ ಕೂರಬೇಕಿಲ್ಲ. ಸಮಯದ ಸದುಪಯೋಗ ಮಾಡಬೇಕು ಅಷ್ಟೇ.
-ಸುಜನ್‌ ಆಚಾರ್ಯ

ಮಾಹಿತಿ ಕೊಡಿ
ನಿಮ್ಮ ಪರಿಸರದಲ್ಲೂ ಇಂತಹ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿದ್ದಲ್ಲಿ 8095192817 ನಂಬರ್‌ಗೆ ವಾಟ್ಸಪ್‌ ಮಾಡಿ. ನಾವು ಅವರನ್ನು ಮಾತನಾಡಿಸಿ ಸಾಧನೆ ಕುರಿತು ಈ ಅಂಕಣದಲ್ಲಿ ಪ್ರಕಟಿಸುತ್ತೇವೆ.
– ಸಂಪಾದಕ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next