ಕಲಬುರಗಿ: ಒಬ್ಬ ತಾಯಿ ತನ್ನ ಮಗುವಿಗೆ ನಡಿಗೆ ಕಲಿಸಿ, ಅದು ಸ್ವತಂತ್ರವಾಗಿ ನಡೆಯುವುದು ನೋಡಿ ಹೇಗೆ ಖುಷಿ ಪಡುತ್ತಾಳ್ಳೋ ಹಾಗೆ, ಶಿಕ್ಷಕರಾದವರು ಮಕ್ಕಳನ್ನು ತಿದ್ದಿ ನಡೆಸಬೇಕು ಎಂದು ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು. ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಶಿಕ್ಷಕರಿಗಾಗಿ ಯುವ ಬ್ರಿಗೇಡ್ ಆಯೋಜಿಸಿದ್ದ “ಪ್ರೇರಣಾ ಪ್ರವಾಹ’ ಕಾರ್ಯಾಗಾರದಲ್ಲಿ “ಶಿಕ್ಷಕ-ಮನೋವಿಜ್ಞಾನಿ’ ಎಂಬ ವಿಷಯ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಉತ್ತಮನಾಗುವುದಕ್ಕೂ, ಕೆಟ್ಟವನಾಗುವುದಕ್ಕೂ ಶಿಕ್ಷಕನನ್ನೇ ಕಾರಣ ಮಾಡಲಾಗುತ್ತದೆ. ಹೀಗಾಗಿ ಕಲಿಸುವಾಗಲೇ ಮಕ್ಕಳಿಗೆ ಗುಣಮಟ್ಟ ಹಾಗೂ ಕ್ರಿಯಶೀಲ ಮನೋಭಾವದಿಂದ ಶಿಕ್ಷಕ ಕಲಿಸಬೇಕು. ಬರೀ ಪಠ್ಯ ಬೋಧನೆಯಷ್ಟೇ ಮಾಡದೇ ಮಕ್ಕಳ ಮೆದುಳಿನ ವಿಚಾರವನ್ನು ಬೆಳೆಸುವ ಕೆಲಸ ಶಿಕ್ಷಕ ಮಾಡಬೇಕು ಎಂದು ಹೇಳಿದರು.
ನಾನು ಶಿಕ್ಷಕ. ನಾನು ಹೇಳಿದ್ದನ್ನೇ ಮಕ್ಕಳು ಕೇಳಬೇಕೆಂಬ ಸೊಕ್ಕು ಹೊಂದಿರಬಾರದು. ಹಾಗೆ, ಜ್ಞಾನವನ್ನು ವ್ಯವಹರಿಕವಾಗಿ ನೋಡಬಾರದು. ಕಲಿಸುವ ಶಿಕ್ಷಕನಿಗೆ ಅಲಸ್ಯತನ ಇರಬಾರದು, ಉತ್ಸಾಹ ಇರಬೇಕು. ಮಕ್ಕಳಿಗೆ ಖುಷಿಯಿಂದ ಕಲಿಸಬೇಕೆಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಜಯಸಿಂಹ ಮಾತನಾಡಿ “ಸದಾ ಉತ್ಸಾಹ ಕಾಪಾಡಿಕೊಳ್ಳುವ ಮಾರ್ಗ ಕುರಿತು ಮಾತನಾಡಿ, ಶಾಲೆಯಲ್ಲಿ ಒಬ್ಬ ಶಿಕ್ಷಕ ತಪ್ಪು ಮಾಡಿದರೆ, ಇಡೀ ಶಾಲೆ, ಶಿಕ್ಷಕರಿಗೆ ಕೆಟ್ಟ ಹೆಸರು ಬರುತ್ತದೆ. ಉತ್ತಮ ಶಿಕ್ಷಕನಾಗಿ ಉತ್ಸಾಹ ತುಂಬಿಕೊಳ್ಳಬೇಕು ಎಂದರು.
“ಪ್ರಾಚೀನ ಭಾರತದ ಸಾಧನೆಗಳು’ ವಿಷಯದ ಬಗ್ಗೆ ಕಿರಣ ಹೆಗ್ಗದ್ದೆ ಮಾತನಾಡಿದರು. ಶಿಕ್ಷಕರೊಂದಿಗೆ ಚರ್ಚೆಯಲ್ಲಿ ಪತ್ರಕರ್ತ ರವೀಂದ್ರ ದೇಶಮುಖ ಪಾಲ್ಗೊಂಡರು. ಕೊನೆಯಲ್ಲಿ “ಹೊಸ ಶಿಕ್ಷಣ ನೀತಿಗೆ ಸಜ್ಜಾಗೋಣ’ ಕುರಿತು ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.
ಇದಕ್ಕೂ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಪ್ರಾಸ್ತಾವಿಕವಾಗಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ವಿಶ್ವನಾಥ ಕಟ್ಟಿಮನಿ, ಮಲ್ಲಯ್ಯ ಗುತ್ತೇದಾರ, ನಿತೀನ್ ಗುತ್ತೇದಾರ, ಅನೀಲಕುಮಾರ ತಂಬಾಕೆ, ಪ್ರಭು ಪಾಟೀಲ್, ಮಲ್ಲಿಕಾರ್ಜುನ, ಕಿರಣ, ಸುರೇಶ ಇತರರು ಹಾಜರಿದ್ದರು.