ಕೆಲ ತಿಂಗಳ ಹಿಂದಷ್ಟೇ “ಅಮ್ಮನ ಮನೆ’, “ತ್ರಯಂಬಕಂ’ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ರಾಘವೇಂದ್ರ ರಾಜಕುಮಾರ್ ಈಗ ಮತ್ತೊಂದು ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಂದಹಾಗೆ, ರಾಘಣ್ಣ ಅಭಿನಯಿಸುತ್ತಿರುವ ಹೊಸಚಿತ್ರದ ಹೆಸರು “ಶ್ರೀ’. ಇನ್ನು ಈ ಚಿತ್ರದ ಶೀರ್ಷಿಕೆಗೆ “ತಸ್ಮೈ ಶ್ರೀ ಗುರುವೇ ನಮಃ’ ಎನ್ನುವ ಅಡಿಬರಹವಿದ್ದು, ಶಿಕ್ಷಣ, ಗುರುಕುಲ, ಜೀವನ ಮೌಲ್ಯಗಳ ಸುತ್ತ ನಡೆಯುವ ಚಿತ್ರದ ಕಥೆ ಸಾಗುತ್ತದೆಯಂತೆ.
ಕಿರುತೆರೆಯ “ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಖ್ಯಾತಿಯ ನಟ ಚಂದು ಗೌಡ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ರಾಘವೇಂದ್ರ ರಾಜಕುಮಾರ್ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ನವನಟಿ ಅನೂಪಾ ಸತೀಶ್ ನಾಯಕಿಯಾಗಿದ್ದು, ಹಿರಿಯ ನಟರಾದ ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಮಾಸ್ಟರ್ ನೀಲ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕೆಲಕಾಲ ವಾಹಿನಿಗಳಲ್ಲಿ ನಿರೂಪಕಿಯಾಗಿ, ಪತ್ರಕರ್ತೆಯಾಗಿ ಕೆಲಸ ಮಾಡಿದ ಅನುಭವವಿರುವ ಅದಿತಿ ಮಹದೇವ್ ಈ ಚಿತ್ರದ ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ. ಚಿತ್ರದ ಕಥಾ ಹಂದರದ ಬಗ್ಗೆ ಮಾತನಾಡುವ ಅದಿತಿ, “ಇದೊಂದು ಸಾಮಾಜಿಕ ಮೌಲ್ಯಗಳನ್ನು ಹೇಳುವ ಚಿತ್ರ. ತುಂಟ ಹುಡುಗನೊಬ್ಬನಿಗೆ ಒಳ್ಳೆಯ ವಾತಾವರಣದಲ್ಲಿ ಶಿಕ್ಷಣ ಸಿಕ್ಕರೆ ಆತ ಹೇಗೆ ಬೆಳೆದು ಸಮಾಜಕ್ಕೆ ಮಾದರಿಯಾಗುತ್ತಾನೆ.
ಗುರುವಿನ ಮಹತ್ವವೇನು ಅನ್ನೋದೆ ಚಿತ್ರದ ಕಥೆಯ ಒಂದು ಎಳೆ. ಚಿತ್ರದ ಕಥೆ ಸಿದ್ದಪಡಿಸುವ ವೇಳೆಯಲ್ಲಿ ಹಲವು ಬಾರಿ ಸಿದ್ಧಗಂಗಾ ಮಠಕ್ಕೆ ಭೇಟಿಕೊಟ್ಟು, ಅಲ್ಲಿ ಮಕ್ಕಳ ಜೊತೆ ಸಮಯ ಕಳೆದು, ಗುರುಗಳ ಜತೆಗಿನ ಒಡನಾಟವನ್ನು ತಿಳಿದು ಈ ಚಿತ್ರ ಮಾಡುತ್ತಿದ್ದೇವೆ. ಶ್ರೀ ಶಿವಕುಮಾರ ಸ್ವಾಮಿಗಳು ಬದುಕಿದ್ದಾಗಲೇ, ಮಠದಲ್ಲಿ ವಿದ್ಯಾರ್ಥಿಗಳು ಮತ್ತು ಶಿಷ್ಯರೊಂದಿಗೆ ಅವರ ಓಡಾಟದ ಕೆಲ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಚಿತ್ರದ ಉಳಿದ ಭಾಗದ ಚಿತ್ರೀಕರಣವನ್ನು ಮೂರು ಹಂತಗಳಲ್ಲಿ ತುಮಕೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುವ ಯೋಚನೆಯಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು. “ಆರ್. ಸ್ವಾಧೀನ್ ಕುಮಾರ್ ಚಿತ್ರಾಲಯ’ ಬ್ಯಾನರ್‌ನಲ್ಲಿ ವಿತರಕ ಆರ್. ಸ್ವಾಧೀನ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ನಿರ್ದೇಶಕ ಎ.ಪಿ ಅರ್ಜುನ್, ಬಹದ್ದೂರ್ ಚೇತನ್, ಮುರಳೀಧರ ಹಾಲಪ್ಪ ಮೊದಲಾದವರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.