ಹುಬ್ಬಳ್ಳಿ: ಮಾಧ್ಯಮಗಳೊಂದಿಗೆ ಯಾವುದೇ ವಿಚಾರ ವಿನಿಮಯ ಮಾಡದೆ ಮಾಧ್ಯಮಗಳನ್ನು ದೂರ ಮಾಡುತ್ತಿದ್ದ ತಮ್ಮ “ಗುಜರಾತ್ ಮಾದರಿ’ಯನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಜಾರಿಗೊಳಿಸಿದ್ದಾರೆ ಎಂದು ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ಹೇಳಿದರು.
ಇಲ್ಲಿನ ಡಾ| ಕೆ.ಎಸ್. ಶರ್ಮಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ರವಿವಾರ ನಡೆದ ದಿ| ಎಂಬಾರ್ ಭಾಷ್ಯಾಚಾರ್ಯರ 32ನೇ ವಾರ್ಷಿಕ ಶ್ರದ್ಧಾ ಸಮರ್ಪಣಾ ದಿನ ಹಾಗೂ ಶ್ರೀಮತಿ ಪದ್ಮಾಬಾಯಿ ಪೋತ್ನಿಸ್ ವರ ಶ್ರದ್ಧಾಂಜಲಿ ಸಭೆ ಅಂಗವಾಗಿ ಆಯೋಜಿಸಿದ್ದ ಭಾರತದಲ್ಲಿ ಪ್ರಜಾಪ್ರಭುತ್ವದ ಭವಿಷ್ಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಪ್ರಧಾನಿಗಳು ವಿದೇಶ ಪ್ರವಾಸ ಮಾಡುವಾಗ ಮಾಧ್ಯಮ ಪ್ರತಿನಿಧಿಗಳ ತಂಡದೊಂದಿಗೆ ತೆರಳುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತ ಸರಕಾರಿ ಮಾಧ್ಯಮದ ಅಧಿಕಾರಿಗಳನ್ನು ಮಾತ್ರ ಕರೆದ್ಯೊಯುವ ಮೂಲಕ ಮಾಧ್ಯಮದವರನ್ನು ದೂರ ಇರಿಸಿದ್ದಾರೆ.
ದೇಶದ ಪ್ರಜೆಗಳಿಗೆ ಪ್ರಜಾಸತ್ತೆ ಜನಕ್ಕೆ ಉಪಯೋಗ ಆಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ ಎಂದರು. ಇಂದು ಮಾಧ್ಯಮ ರಂಗವೂ ಉದ್ಯಮವಾಗಿ ಬಿಟ್ಟಿದೆ. ಮಾಧ್ಯಮರಂಗಕ್ಕೆ ಇರಬೇಕಾದ ಆದರ್ಶಗಳು ಮಾಯವಾಗಿವೆ. ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ಕೈಗೊಂಬೆಯಾಗಿರುವುದು ದುರಂತ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಶಾಸನ ರಚನೆಯಲ್ಲಿ ಮೇಲ್ಮನೆ ಪಾತ್ರ ಕುರಿತಾಗಿ ಮಾತನಾಡಿ, ಅನೇಕ ಮಸೂದೆಗಳು ಚರ್ಚೆ ಆಗದೆಯೇ ಬಹುಮತದ ಆಧಾರದಲ್ಲಿ ಅಂಗೀಕಾರವಾಗುತ್ತಿವೆ. ಪ್ರಜೆಗಳಿಗೆ ರಾಜಕೀಯ ಪ್ರಜ್ಞೆ ಕೊರತೆ ಹಾಗೂ ಭ್ರಷ್ಟಾಚಾರ ಪ್ರಜಾಪ್ರಭುತ್ವದ ದೊಡ್ಡ ದೋಷಗಳಾಗಿವೆ.
ಪ್ರಾದೇಶಿಕ ಪಕ್ಷಗಳು ನಿರ್ಮಿಸುವ ತೊಡಕುಗಳು ನಿವಾರಿಸಬೇಕಿದೆ. ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಲು ಶಿಕ್ಷಕರೇ ಅಭ್ಯರ್ಥಿಯಾಗಬೇಕೆಂಬ ನಿಯಮವಿಲ್ಲ. ಇಂತಹ ದೋಷ ತಿದ್ದುಪಡಿ ಆಗಬೇಕಿದೆ ಎಂದರು. ಹಿರಿಯ ಶಿಕ್ಷಣ ತಜ್ಞ ಬಿ.ಎಫ್. ವಿಜಾಪುರ ಅವರು
-ದಿ| ಎಂಬಾರ್ ಭಾಷ್ಯಾಚಾರ್ಯರು ಸ್ವಾತಂತ್ರ್ಯ ಹೋರಾಟಕ್ಕೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆ ಕುರಿತು ವಿವರಿಸಿದರು. ವೈದ್ಯಾಧಿಕಾರಿ ಡಾ| ಸೋಮಶೇಖರ ಹುದ್ದಾರ ಮಾತನಾಡಿದರು. ಡಾ| ಕೆ.ಎಸ್.ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ರವೀಂದ್ರ ಶಿರೋಳ್ಕರ ನಿರೂಪಿಸಿದರು. ಸಂಜಯ ತ್ರಾಸದ ವಂದಿಸಿದರು.