ಮಡಿಕೇರಿ: ಒಂದು ರಾಷ್ಟ್ರ, ಒಂದೇ ತೆರಿಗೆ, ಒಂದು ಮಾರುಕಟ್ಟೆ ಮೂಲಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಒಳಿತಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ರಮೇಶ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ ವತಿಯಿಂದ ಸ್ಥಳೀಯ ಸಂಸ್ಥೆಗಳಾದ ನಗರಸಭೆ ಮತ್ತು ಪಟ್ಟಣ ಪಂಚಾಯತ್‌ಗಳ ಎಂಜಿನಿಯರ್‌ಗಳು ಹಾಗೂ ಲೆಕ್ಕ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಿನ ಬಳಕೆಯ ಪದಾರ್ಥಗಳು ತೆರಿಗೆ ವಿನಾಯಿತಿ ಪಡೆಯಲಿವೆ. ಬಡ ಮತ್ತು ಸಾಮಾನ್ಯ ನಾಗರಿಕರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸಾಕಷ್ಟು ಲಾಭಗಳು ದೊರೆಯಲಿವೆ. ಸಣ್ಣ ವ್ಯಾಪಾರಿಗಳು ಹಂತ ಹಂತವಾಗಿ ಬೆಳೆಯಲು ಅವಕಾಶ ಇದೆ ಎಂದು ಅವರು ಹೇಳಿದರು.
ನೋಂದಣಿ, ಕರ ಪಾವತಿ, ರಿಟರ್ನ್ ಸಲ್ಲಿಕೆ ಮತ್ತು ತೆರಿಗೆಗಳ ಮರು ಸಂದಾಯಕ್ಕೆ ಸಾಮಾನ್ಯ ಪ್ರಕ್ರಿಯೆಗಳು ನಡೆಯಲಿವೆ. ಸಂಘಟಿತ ಸಾಮಾನ್ಯ ಮಾರುಕಟ್ಟೆ ಸೃಷ್ಟಿಯಾಗಲಿದೆ. ಉತ್ಪಾದನಾ ಕೇಂದ್ರ ಜಾಲ ವಿಸ್ತರಿಸಲಿದೆ. ಹೂಡಿಕೆಗಳು ಮತ್ತು ರಫ್ತು ಚೈತನ್ಯ ವರ್ಧಕವಾಗಲಿದೆ ಎಂದು ರಮೇಶ್ ಅವರು ತಿಳಿಸಿದರು.
ಸರಕು ಮತ್ತು ಸೇವೆಗಳಿಗೆ ವಿಧಿಸಲಾಗುತ್ತಿರುವ ಭಿನ್ನ ತೆರಿಗೆ ಕಡಿತಗೊಳಿಸಿ, ವ್ಯವಸ್ಥೆ ಸರಳೀಕರಣವಾಗಲಿದೆ. ತೆರಿಗೆ ಪದ್ಧತಿಯಲ್ಲಿ ನಿರ್ದಿಷ್ಟತೆ ಖಚಿತಪಡಿಸಲು ಸರಕು ಮತ್ತು ಸೇವೆಗಳನ್ನು ವರ್ಗೀಕರಿಸುವ ನಿಟ್ಟಿನಲ್ಲಿ ಜಿಎಸ್‌ಟಿ ವ್ಯವಸ್ಥೆ ಅನುಕೂಲವಾಗಲಿದೆ ಎಂದು ರಮೇಶ್ ಅವರು ಹೇಳಿದರು.
ಸರಕು ಮತ್ತು ಸೇವೆಗಳ ಚಲನವಲನಗಳು ಸ್ವಾತಂತ್ರ್ಯಗೊಳ್ಳಲಿದ್ದು, ಸ್ಪರ್ಧಾತ್ಮಕ ಹೆಚ್ಚಳ ಉಂಟಾ ಗುವುದರಿಂದ ಗ್ರಾಹಕರಿಗೆ ಲಾಭವಾಗಲಿದೆ. ದೇಶಾ ದ್ಯಂತ ಇರುವ ಉತ್ಪಾದಕರು ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಅವರು ವಿವರಿಸಿದರು.
ಜಿಎಸ್‌ಟಿ ಜಾರಿಯಾಗುವುದರಿಂದ ವಸ್ತುಗಳ ಬೆಲೆ ಕಡಿಮೆಯಾಗುವುದರ ಜೊತೆಗೆ ರಫ್ತಿಗೆ ಸಹಕಾರಿಯಾಗಲಿದೆ. ಅಂತರ ರಾಜ್ಯ ಮತ್ತು ಅಂತರ ರಾಷ್ಟ್ರೀಯ ವಹಿವಾಟು ಬೆಳವಣಿಗೆಗೆ ಜಿಎಸ್‌ಟಿ ಬಹು ಉಪಯುಕ್ತವಾಗಲಿದೆ. ಯಾವುದೇ ಅಡೆತಡೆ ಇಲ್ಲದೆ ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂದರು.