Advertisement

ಜಿಎಸ್‌ಟಿ ಪರಿಹಾರ ಇನ್ನೆರಡು ವರ್ಷ ಮುಂದುವರಿಯಲಿ

12:15 AM Jun 30, 2022 | Team Udayavani |

2017ರಲ್ಲಿ ಜಿಎಸ್‌ಟಿ ಜಾರಿಯಾದ ದಿನದಿಂದ 5 ವರ್ಷಗಳವರೆಗೆ ರಾಜ್ಯಗಳಿಗೆ ಆಗುವ ನಷ್ಟವನ್ನು ತುಂಬಿಕೊಡುವ ಸಲುವಾಗಿ ಕೇಂದ್ರ ಸರಕಾರ ಪರಿಹಾರ ನೀಡುವ ವಾಗ್ಧಾನ ನೀಡಿ ಅದನ್ನು ಮುಂದುವರಿಸಿಕೊಂಡು ಬಂದಿತ್ತು. ಇದೇ ಗುರುವಾರ(ಜೂ.30)ಕ್ಕೆ ಈ ಪರಿಹಾರ ಅವಧಿ ಕೊನೆಗೊಳ್ಳಲಿದ್ದು, ಚಂಡೀಗಢದಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸಭೆ ಮುಗಿಸಲಾಗಿದ್ದು, ರಾಜ್ಯ ಸರಕಾರಗಳ ಪಾಲಿಗೆ ನಿರಾಶೆಯ ಸಂಗತಿಯಾಗಿದೆ.

Advertisement

ಒಂದು ದೇಶ, ಒಂದು ತೆರಿಗೆ ಮಾದರಿಯಲ್ಲಿ ಜಾರಿಗೆ ತರಲಾಗಿದ್ದ ಜಿಎಸ್ಟಿಯಿಂದಾಗಿ ತೆರಿಗೆ ಸೋರಿಕೆ ತಡೆಗಟ್ಟಬಹುದು ಎಂದೇ ಭಾವಿಸಲಾ ಗಿತ್ತು. ಆದರೆ ಜಾರಿಯಾದ ಎರಡೇ ವರ್ಷದಲ್ಲಿ ಕೊರೊನಾ ಮಹಾಮಾರಿ ಕಾಣಿಸಿಕೊಂಡು ರಾಜ್ಯಗಳು ಮತ್ತು ಕೇಂದ್ರದ ಪಾಲಿನ ತೆರಿಗೆ ಸಂಗ್ರಹ ತೀವ್ರತರದಲ್ಲಿ ಇಳಿಕೆಯಾಗಿತ್ತು. ಅದರಲ್ಲೂ 2020 ಮತ್ತು 2021ರಲ್ಲಿಯಂತೂ ಕೊರೊನಾ ಎಲ್ಲ ವಲಯಗಳ ಮೇಲೆ ಆಘಾತಕಾರಿ ಪರಿಣಾಮ ಬೀರಿದ್ದರಿಂದ ತೆರಿಗೆ ಸಂಗ್ರಹವಾಗಿಯೇ ಇರಲಿಲ್ಲ. ಹೀಗಾಗಿ ರಾಜ್ಯ ಸರಕಾರಗಳು ಸಂಪನ್ಮೂಲ ಕೊರತೆಯಿಂದಾಗಿ ನರಳುತ್ತಿವೆ ಎಂಬುದು ಎಲ್ಲ ಆರ್ಥಿಕ ತಜ್ಞರು ಒಪ್ಪಿಕೊಂಡಿರುವ ಸತ್ಯ.

ಈ ಹಿನ್ನೆಲೆಯಲ್ಲಿಯೇ ಚಂಡೀಗಢ‌ದಲ್ಲಿ ನಡೆದ ಸಭೆಯಲ್ಲಿ 16 ರಾಜ್ಯಗಳು ಈ ಬಗ್ಗೆ ಪ್ರಸ್ತಾವಿಸಿವೆ. ಜಿಎಸ್‌ಟಿ ಪರಿಹಾರವನ್ನು ಇನ್ನೆರಡು ವರ್ಷ ಮುಂದುವರಿಸಿದರೆ ಸಹಾಯಕವಾಗುತ್ತದೆ ಎಂದು ಹೇಳಿವೆ. ಅಲ್ಲದೆ ಬುಧವಾರವಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಭೆಯಲ್ಲಿ ಜಿಎಸ್‌ಟಿ ಪರಿಹಾರ ನೀಡುವುದು ಮುಂದು ವರಿಯಬಹುದು ಎಂದಿ¨ªಾರೆ. ಈ ವರ್ಷಾರಂಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದ್ದ ಬಸವರಾಜ ಬೊಮ್ಮಾಯಿ ಅವರು ಕಡೇ ಪಕ್ಷ 2025-26ನೇ ಸಾಲಿನ ವರೆಗಾದರೂ ವಿಸ್ತರಿಸಿ ಎಂದು ಮನವಿ ಮಾಡಿದ್ದರು.

ಆದರೆ ರಾಜ್ಯಗಳ ಒತ್ತಾಸೆಯ ಹೊರತಾಗಿಯೂ ಪ್ರಸ್ತುತ ನಡೆದ ಸಭೆಯಲ್ಲಿ ಜಿಎಸ್ಟಿ ಪರಿಹಾರ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಈ ಬಗ್ಗೆ ಚರ್ಚೆ ನಡೆದರೂ ಆಗಸ್ಟ್‌ನಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದು ಕೆಲವು ರಾಜ್ಯಗಳ ವಿತ್ತ ಸಚಿವರ ಮಾತಾಗಿತ್ತು. ವಿಶೇಷವೆಂದರೆ ಗುರುವಾರಕ್ಕೆ ಕೇಂದ್ರ ಸರಕಾರದ ಐದು ವರ್ಷಗಳ ಪರಿಹಾರ ಅವಧಿ ಮುಗಿಯಲಿದ್ದು, ಅನಂತರದ ಪರಿಸ್ಥಿತಿ ಏನು ಎಂಬ ಬಗ್ಗೆ ಯಾರಿಗೂ ಖಚಿತವಾಗಿಲ್ಲ.

ಹೀಗಾಗಿ ಕೇಂದ್ರ ಸರಕಾರ ರಾಜ್ಯಗಳ ಹಿತಾಸಕ್ತಿ ಗಮನಿಸಿಕೊಂಡು ಕನಿಷ್ಠ ಪಕ್ಷ ಮುಂದಿನ ಎರಡು ವರ್ಷಗಳವರೆಗಾದರೂ ಜಿಎಸ್ಟಿ ಪರಿಹಾರವನ್ನು ವಿಸ್ತರಿಸಬೇಕು. ಒಂದು ವೇಳೆ ಮಧ್ಯಾಂತರದಲ್ಲಿ ಕೊರೊನಾ ಬರದೇ ಹೋಗಿದ್ದರೆ ರಾಜ್ಯಗಳು ವಿಸ್ತರಿಸಿ ಎಂದು ಕೇಳುತ್ತಿರಲಿಲ್ಲ. ಆದರೆ ಕೊರೊನಾ ಸಂಕಷ್ಟದಲ್ಲಿ ಮಿಂದೆದ್ದ ರಾಜ್ಯಗಳು ಸಲ್ಲಿಸಿರುವ ಬೇಡಿಕೆಯಲ್ಲಿ ನ್ಯಾಯವಿದೆ ಎಂಬುದನ್ನು ವಿತ್ತ ತಜ್ಞರು ಒಪ್ಪುತ್ತಾರೆ.

Advertisement

ಇನ್ನು ಜಿಎಸ್‌ಟಿ ದರ ಬದಲಾವಣೆ ವಿಚಾರದಲ್ಲೂ ಕೆಲವೊಂದು ಬದಲಾವಣೆಗಳನ್ನು ತರಲಾಗಿದ್ದು, ಜನಸಾಮಾನ್ಯರು ಬಳಕೆ ಮಾಡುವ ವಸ್ತುಗಳ ದರದಲ್ಲಿ ಏರಿಳಿಕೆ ಮಾಡಲಾಗಿದೆ. ಆದರೆ ಕ್ಯಾಸಿನೋ, ಆನ್‌ಲೈನ್‌ ಗೇಮಿಂಗ್‌ ಮತ್ತು ಲಾಟರಿ ಕುರಿತ ನಿರ್ಧಾರವನ್ನು ಮುಂದೂಡಿಕೆ ಮಾಡಲಾಗಿದೆ. ಆದ್ಯತೆ ಮೇರೆಗೆ ಈ ಮೂರರ ಕುರಿತಂತೆ ಈಗ ನಿರ್ಧರಿಸಿ, ಅಗತ್ಯ ವಸ್ತುಗಳ ಕುರಿತಂತೆ ಅನಂತರದ ಸಭೆಯಲ್ಲಿ ನಿರ್ಧಾರ ಮಾಡಬಹುದಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next