ಉಳ್ಳಾಲ: ತೌಡುಗೋಳಿ ವರ್ಕಾಡಿಯ ಮನೆಯಲ್ಲಿ ಸಂಜೆ ನಡೆಯಬೇಕಾಗಿದ್ದ ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಹಣ್ಣು ಖರೀದಿಗೆಂದು ತೆರಳಿದ್ದ ವರನೇ ನಾಪತ್ತೆಯಾಗಿದ್ದು ಜೂ.1ರಂದು ನಡೆಯಲಿದ್ದ ಮದುವೆಯನ್ನು ರದ್ದು ಮಾಡಿದ್ದು, ವರ ನಾಪತ್ತೆಯ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತೌಡುಗೋಳಿ- ವರ್ಕಾಡಿ ದೇವಂದ ಪಡ್ಪುವಿನ ಉದ್ಯಮಿಯೊಬ್ಬರ ಪುತ್ರ ಕಿಶನ್ ಶೆಟ್ಟಿ (28) ನಾಪತ್ತೆಯಾದ ವರ. ಜೂ. 1ರ ಗುರುವಾರ ಕಿಶನ್ ಶೆಟ್ಟಿ ಅವರಿಗೆ ಉಪ್ಪಳ ಮೂಲದ ಯುವತಿಯೊಂದಿಗೆ ವಿವಾಹ ನಿಗದಿಯಾಗಿತ್ತು. ವಧುವಿನ ಮನೆಯಲ್ಲಿ ಅದಾಗಲೇ ಮೆಹಂದಿ ಶಾಸ್ತ್ರ ಮುಗಿದಿದ್ದು ವರನ
ಮನೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಮೆಹಂದಿ ಶಾಸ್ತ್ರಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ ಹಣ್ಣು ತರಲೆಂದು ವರ ಸ್ಕೂಟರ್ ಏರಿ ಮನೆಯಿಂದ ಹೊರಟಿದ್ದ. ಆಬಳಿಕ ದೇರಳಕಟ್ಟೆ ತಲುಪುತ್ತಿದ್ದಂತೆಯೇ ಪೊಲೀಸ್ ಮೂಲಗಳ ಪ್ರಕಾರ ಸುಮಾರು ಅರ್ಧ ತಾಸು ಯಾರಲ್ಲಿಯೋ ಫೋನಲ್ಲಿ ಮಾತನಾಡಿದ್ದನಂತೆ. ಆ ಬಳಿಕ ನಾಪತ್ತೆಯಾದ ವರ ಇನ್ನೂ ಮನೆಗೆ ಬಂದಿಲ್ಲ.
ಎರಡೂ ಕುಟುಂಬ ಆರ್ಥಿಕವಾಗಿ ಸ್ಥಿತಿವಂತರಾಗಿದ್ದು, ಕಿಶನ್ ಯುವತಿಯೊಬ್ಬಳನ್ನು ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ನಾಪತ್ತೆಯಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಕಿಶನ್‌ನ ಹುಡುಕಾಟ ಮುಂದುವರಿದಿದೆ.