Advertisement

ಜನಮನ ಸೆಳೆಯುತ್ತಿರುವ ಹಸುರು ಭವನ

01:00 AM Feb 25, 2019 | Harsha Rao |

ಕಾಸರಗೋಡು: ಹರಿತ ಕೇರಳ ಮಿಷನ್‌ ನಿರ್ಮಿಸಿರುವ ಹಸುರು ಭವನ ಸೌಂದರ್ಯ ಮತ್ತು ಪರಿಸರ ಪ್ರೇಮದ ಕುರಿತು ಜಾಗೃತಿ ಮೂಡಿಸುವ ಮೂಲಕ ಜನತೆಯ ಗಮನ ಸೆಳೆಯತ್ತಿದೆ. 

Advertisement

ಉತ್ಪನ್ನಗಳ ಪ್ರದರ್ಶನ
ರಾಜ್ಯ ಸರಕಾರ ಒಂದು ಸಾವಿರ ದಿನಗಳನ್ನು ಪೂರೈಸಿದ ಸಂಭ್ರಮಾಚರಣೆ ಅಂಗವಾಗಿ ಕಾಂಞಂಗಾಡ್‌ ಅಲಾಮಿಪಳ್ಳಿ ಬಸ್‌ ನಿಲ್ದಾಣ ಆವರಣದಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಉತ್ಪನ್ನ ಪ್ರದರ್ಶನ ಮಳಿಗೆಗಳ ಸಾಲಿನಲ್ಲಿ ಸೇರಿದ ಈ ಹಸುರು ಮನೆ ವಿಶೇಷತೆಯಿಂದ ಕೂಡಿದೆ.

ಹಳೆಯ ಕಾಲದ ಮನೆಗಳನ್ನು ನೆನಪಿಸುವ ರೀತಿ ಈ ಹಸುರು ಭವನ ನಿರ್ಮಾಣಗೊಂಡಿದೆ. ತ್ಯಾಜ್ಯ ಸಂಸ್ಕರಣೆ, ಸೌರಶಕ್ತಿ ಬಳಕೆ, ಜಲಸಂರಕ್ಷಣೆ  ಇತ್ಯಾದಿಗಳಿಗೆ ಆದ್ಯತೆ ನೀಡಿ ಮನೆ ನಿರ್ಮಾಣವಾಗಿದೆ. 

ಜನ ವಾಸಿಸುವ ಮನೆಯನ್ನು ಯಾವ ರೀತಿ ಪ್ರಕೃತಿ ಸ್ನೇಹಿ ಕೇಂದ್ರವಾಗಿಸಬಹುದು ಎಂದು ಪ್ರಾಯೋಗಿಕವಾಗಿ ತೋರುವ ಯತ್ನದಲ್ಲಿ ಹರಿತ ಕೇರಳ ಮಿಷನ್‌ ಯಶಸ್ವಿಯಾಗಿದೆ.

ಪ್ರಕೃತಿಗೆ ಪೂರಕವಾದ ಸಾಮಗ್ರಿಗಳಿಂದಲೇ ಮನೆಯ ನಿರ್ಮಾಣವಾಗಿದೆ. ಅಡುಗೆ ಮನೆಯ ತ್ಯಾಜ್ಯ ಸಂಸ್ಕರಣೆಗೆ ಕಿಚನ್‌ ಬಿನ್‌ಗಳು, ಬಯೋಗ್ಯಾಸ್‌ ಬಳಸಿ ಅಡುಗೆ ಸಿದ್ಧಪಡಿಸುವ ಸೌಲಭ್ಯಗಳು, ಸೌರಶಕ್ತಿ ಬಳಸಿ ಬೆಳಕಿನ ವ್ಯವಸ್ಥೆ, ಮನೆಗೆ ಬೇಕಾದ ತರಕಾರಿಗಳನ್ನು ಹಿತ್ತಿಲಲ್ಲೇ ಬೆಳೆಯುವ ವಿಧಾನ, ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸದೇ ಇರುವುದು, ಮಳೆ ನೀರು ಸಂಗ್ರಹಿಸಿ ಬಾವಿಗೆ ನೀರನ್ನು ರೀಚಾರ್ಜ್‌ ಮಾಡುವುದು ಇತ್ಯಾದಿ ಜನಾಕರ್ಷಣೆ ವಿಚಾರಗಳಿವೆ.

Advertisement

ಪ್ರಕೃತಿಸ್ನೇಹಿ
ಬೇಡಡ್ಕ, ಕಿನಾನೂರು-ಕರಿಂದಳಂ ಪಂಚಾಯತ್‌ನಲ್ಲಿ ಕೃಷಿಕರು ಬೆಳೆದು, ಬ್ರಾಂಡ್‌ ಆಗಿಸಿದ ವಿಶೇಷ ರೀತಿಯ ಅಕ್ಕಿ ಪ್ರದರ್ಶನ, ಪ್ಲಾಸ್ಟಿಕ್‌ ಗ್ರೋಬ್ಯಾಗ್‌ಗಳ ಬದಲಿಗೆ ಕುಟುಂಬಶ್ರೀ ಕಾರ್ಯಕರ್ತರು ಹಾಳೆಯಿಂದ  ತಯಾರಿಸಿದ ಬ್ಯಾಗ್‌ಗಳು, ಹಳೆಯ ಕೊಡೆ, ಬಟ್ಟೆಗಳಿಂದ ಹಸುರು ಕ್ರಿಯಾ ಸೇನೆ ಸದಸ್ಯರು ಸಿದ್ಧಪಡಿಸಿರುವ ಚೀಲಗಳು ಇಲ್ಲಿ ಪ್ರದರ್ಶನದಲ್ಲಿವೆ. 

ಜನಜಾಗೃತಿ
ಹರಿತ ಕೇರಳ ಮಿಷನ್‌ ಜಿಲ್ಲೆಯಲ್ಲಿ ನಡೆಸಿದ ಚಟುವಟಿಕೆಗಳ ನೂರಾರು ಚಿತ್ರಗಳ ಪ್ರದರ್ಶನ, ರಾಜ್ಯ ಮಟ್ಟದಲ್ಲಿ ಜಾರಿಗೊಳಿಸಿದ ಯೋಜನೆಗಳ ಮಾಹಿತಿ ಇತ್ಯಾದಿ ಪ್ರದರ್ಶನ ಇಲ್ಲಿವೆ. ಜತೆಗೆ ಕಿರು ಹೊತ್ತಗೆಯ ಮೂಲಕ ಜನಜಾಗೃತಿ ಮಾಹಿತಿಯನ್ನೂ ಹಂಚಲಾಗುತ್ತಿದೆ.

ಉದ್ಘಾಟನೆ  
ಕಾಂಞಂಗಾಡ್‌ ಅಲಾಮಿಪಳ್ಳಿ ಬಸ್‌ ನಿಲ್ದಾಣ ಆವರಣದಲ್ಲಿ ರಾಜ್ಯ  ಸರಕಾರದ    ಒಂದು ಸಾವಿರ ದಿನಗಳನ್ನು   ಪೂರೈಸಿದ ಅಂಗವಾಗಿ  ನಡೆಯುತ್ತಿರುವ ವಿವಿಧ ಇಲಾಖೆಗಳ ಉತ್ಪನ್ನಗಳ ಪ್ರದರ್ಶನ ಮಳಿಗೆಗಳ ಅಂಗವಾಗಿ ಸ್ಥಾಪಿಸಿದ  ಹರಿತ ಕೇರಳ ಮಿಷನ್‌ನ ಹಸುರು ಭವನ ಉದ್ಘಾಟನೆಗೊಂಡಿತು.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಹಸುರು ಮನೆಯನ್ನು ಉದ್ಘಾಟಿಸಿದರು. 

ಹರಿತ ಕೇರಳ ಮಿಷನ್‌ ಜಿಲ್ಲಾ ಸಂಚಾಲಕ ಎಂ.ಪಿ. ಸುಬ್ರಹ್ಮಣ್ಯನ್‌, ಕೆ.ಅಮೃತ ರಾಘವನ್‌, ಎಲಿಝಬೆತ್‌ ಮ್ಯಾಥ್ಯೂ, ಪಿ. ಅಶ್ವಿ‌ನ್‌, ಗೀತು, ಕೆ. ಬಾಲನ್‌, ಸ್ನೇಹಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next