Advertisement

ಹನಿ ಹನಿ ಸೇರಿ ಮಹಾ ಸಾಗರ

02:08 AM May 25, 2019 | sudhir |

ಮಣಿಪಾಲ: ಮೋದಿ ಹೆಸರಲ್ಲಿ ಏನು ಬೇಕಾದರೂ ಓಡುತ್ತದೆ ಎಂಬುದಕ್ಕೆ ಈ ಚುನಾವಣೆ ಮತ್ತೂಂದು ಉದಾಹರಣೆ. 2014ಕ್ಕಿಂತಲೂ ಈ ಬಾರಿ ಮತದಾರ ಹೆಚ್ಚಿನ ಮತ ನೀಡಿ ಪ್ರಧಾನಿ ಮೋದಿ ಮತ್ತು ಅವರ ಪಕ್ಷ ಬಿಜೆಪಿಯನ್ನು ಗೆಲ್ಲಿಸಿದ್ದಾನೆ. ಇನ್ನೊಂದು ಪಕ್ಷದ ಹಂಗಿನಲ್ಲಿರಲು ಅವಕಾಶ ನೀಡಬೇಡಿ, ಸಂಪೂರ್ಣ ಬಹುಮತ ನೀಡಿ, ಆದರೂ ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ ಎಂಬ ಮೋದಿ ಮತ್ತು ಅಮಿತ್‌ ಶಾ ಅವರ ಮಾತುಗಳನ್ನು ಮನ್ನಿಸಿದ್ದಾನೆ.

Advertisement

ದಕ್ಷಿಣ ಭಾರತದ ತಮಿಳುನಾಡು, ಆಂಧ್ರ, ಕೇರಳ ಬಿಟ್ಟರೆ ಬಹುತೇಕ ಕಡೆ  ಬಿಜೆಪಿ ಅಥವಾ ಅದರ ಅಂಗ ಪಕ್ಷಗಳು ಗೆದ್ದಿವೆ. ಈ ಹಿನ್ನೆಲೆಯಲ್ಲಿ ಗೆಲುವಿನ ರಹಸ್ಯವನ್ನು ಬಿಚ್ಚಿಡುವ ಪ್ರಯತ್ನ ಇಲ್ಲಿದೆ.

ಒಳಹರಿವು
ದೇಶದ ಮತದಾರನ ಮನಸ್ಸಿನ ಆಳ ಅರಿಯದೇ ಹೋಗಿದ್ದುದು ಪ್ರತಿಪಕ್ಷಗಳು ಮಾಡಿದ ದೊಡ್ಡ ತಪ್ಪು-ಇದು ಬಹುತೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆ ಈ ಬಗ್ಗೆ ದಿನವಿಡೀ ಚರ್ಚೆ ನಡೆಸಿ ತಜ್ಞರೆಲ್ಲರೂ, ದೇಶವ್ಯಾಪಿಯಾಗಿ ಮೋದಿ ಪರವಾಗಿ ಹರಿಯುತ್ತಿದ್ದ ಅಂಡರ್‌ ಕರೆಂಟ್‌ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಯಾರ ಕಣ್ಣಿಗೂ ಕಾಣದೇ, ಯಾರ ಒತ್ತಡಕ್ಕೂ ಒಳಗಾಗದೇ ತಾವೇ ಮೋದಿಗಾಗಿ ಮತ ಹಾಕಬೇಕು ಎಂದು ನಿರ್ಧರಿಸಿರುವ ಹಾಗೆ ಕಾಣಿಸುತ್ತಿದೆ ಎಂದೂ ಹೇಳುತ್ತಿದ್ದಾರೆ. ಹೌದು, ಈ ಫ‌ಲಿತಾಂಶ ನೋಡಿದಾಗ, ಈ ಒಳಹರಿವಿನ ಬಗ್ಗೆ ಗೊತ್ತಾಗದಿರದು. ಉದಾಹರಣೆಗೆ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ 22 ಸ್ಥಾನಗಳಲ್ಲಿ ಗೆದ್ದೇ ತೀರುತ್ತೇವೆ ಎಂದಿದ್ದರು. ಆದರೆ, ಒಳಹರಿವು 25 ಕ್ಕೆ ಹಿಗ್ಗಿಸಿದೆ. ಇದು ಒಂದು ರೀತಿಯಲ್ಲಿ ರಾಜ್ಯದ ಬಿಜೆಪಿ ನಾಯಕರಿಗೇ ದಿಗ್ಭ್ರಮೆ ಮೂಡಿಸಿದೆ.

“ಮೋದಿ ಭಕ್ತರು’
ಇದು ದೇಶದ ಬಹುತೇಕ ಪತ್ರಕರ್ತರು, ವಿಚಾರವಾದಿಗಳು ಎನ್ನಿಸಿಕೊಂಡವರು, ಮೋದಿ ಪರವಾಗಿ ಮಾತನಾಡುವವರನ್ನು ಅಥವಾ ಮೋದಿ ಸಮರ್ಥಿಸಿಕೊಳ್ಳುವವರನ್ನು ಛೇಡಿಸುತ್ತಿದ್ದ ಪರಿ. ಆದರೆ, ಈ ವ್ಯಂಗ್ಯವನ್ನೇ ಸವಾಲಾಗಿ ತೆಗೆದುಕೊಂಡ ಇವರು ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದರು ಎಂದರೆ ತಪ್ಪಾಗಲಾರದು. ಮೋದಿ ಅವರನ್ನು ಆರಾಧಿಸುವ ಈ ವರ್ಗ, ಕಾಂಗ್ರೆಸ್‌ ಹಾಗೂ ಇತರೆ ಪಕ್ಷಗಳ ಕುರಿತ ಅಸಹನೆಯನ್ನು ಎಲ್ಲೆಡೆಗೂ ಹಬ್ಬಿಸಿದೆ. ಮೋದಿ ಕುರಿತಂತೆ ಇವರ ಟೀಕೆಗಳಿಗೆ ತಕ್ಕ ಉತ್ತರ ನೀಡುತ್ತಾ, ಮೋದಿಯ ಮೇಲೆ ಜನರಿಗೆ ಇನ್ನಷ್ಟು ನಂಬಿಕೆ ಬರುವಂತೆ ಮಾಡುವಲ್ಲಿಯೂ ಶಕ್ತರಾಗಿದ್ದಾರೆ.

ಎಲ್‌ಪಿಜಿ-ಉಜ್ವಲ
“ಮೋದಿ ದೊಡ್ಡ ಯೋಜನೆಗಳನ್ನು ಮಾಡಲೇ ಇಲ್ಲ’. ಚುನಾವಣೆಗೂ ಮುನ್ನ ಇಂಥ ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೆ ಕಾರಣ, ಹಿಂದಿನ ಯುಪಿಎ ಸರಕಾರದಲ್ಲಿ ಘೋಷಣೆಯಾಗಿದ್ದ ಆಹಾರ ಹಕ್ಕು, ಕಡ್ಡಾಯ ಶಿಕ್ಷಣದ ಹಕ್ಕು, ನರೇಗಾದಂಥ ಯೋಜನೆಗಳೇ ಕಾರಣವಾಗಿದ್ದವು. ಆದರೆ, ಮೋದಿ ಅವರ ಅಧಿಕಾರಾವಧಿಯಲ್ಲಿ ಪ್ರಕಟಗೊಂಡ ಎರಡು ದೊಡ್ಡ ಯೋಜನೆಗಳು ಎಂದರೆ, ರೈತರಿಗೆ ವಾರ್ಷಿಕ 6 ಸಾವಿರ ಸಹಾಯಧನ ಮತ್ತು ಆಯುಷ್ಮಾನ್‌ ಭಾರತ್‌ ಯೋಜನೆಯಷ್ಟೇ. ಇದಕ್ಕೆ ಬದಲಾಗಿ ಸಣ್ಣಪುಟ್ಟ ಯೋಜನೆಗಳನ್ನೇ ಪ್ರಕಟಿಸಿಕೊಂಡು ಅವುಗಳ ಜಾರಿಯಲ್ಲಿ ವಹಿಸಿದ ಎಚ್ಚರ ಹಾಗೂ ತ್ವರಿತಗತಿಯಲ್ಲಿ ಸಾಗಿದ ಕಾಮಗಾರಿ, ಯೋಜನೆಗಳೂ ಜನರ ಮನಸ್ಸಿನಲ್ಲಿ ಕೆಲಸವಾಗುತ್ತಿದೆ ಎಂಬ ಅಭಿಪ್ರಾಯ ಮೂಡಲು ಕಾರಣವಾದವು. ಬಡವರಿಗೆ ಸಿಲಿಂಡರ್‌ ತಲುಪಿಸಲು ಉಜ್ವಲ ಯೋಜನೆ ತಂದು ದಶಕಗಳಿಂದಲೂ ಕೇವಲ ಹೊಗೆಯನ್ನೇ ಕುಡಿದು ಜೀವಿಸುತ್ತಿದ್ದ ಮಹಿಳೆಯರಿಗೆ ಸಮಾಧಾನ ತಂದರು.

Advertisement

ಮೋದಿ ಸರಕಾರದ ಎಲ್ಲಾ ಯೋಜನೆಗಳಲ್ಲಿ ಹೆಚ್ಚು ಲಾಭವಾಗಿದ್ದು ಈ ಉಜ್ವಲ ಯೋಜನೆಯಿಂದ ಎನ್ನುತ್ತಾರೆ ಕೆಲವು ವಿಶ್ಲೇಷಕರು.

“ಚೌಕಿದಾರ್‌’‌
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಚೌಕಿದಾರ್‌ ಚೋರ್‌ ಹೈ ಎಂಬ ಬೈಗುಳ ಮೋದಿ ಅವರಿಗೆ ನಷ್ಟಕ್ಕಿಂತ ಲಾಭವನ್ನೇ ಹೆಚ್ಚಾಗಿ ತಂದುಕೊಟ್ಟಿದೆ. ರಫೇಲ್‌ ವಹಿವಾಟು ಸಂಬಂಧ ಮೋದಿ ಅವರನ್ನು ಚೌಕಿದಾರ್‌ ಚೋರ್‌ ಹೈ ಎಂದು ಪದ ಹುಟ್ಟು ಹಾಕಿದ ಕಾಂಗ್ರೆಸ್‌, ಈಗ ಪಶ್ಚಾತ್ತಾಪ ಪಡುವಂತಾಗಿದೆ. ಅದರಲ್ಲೇ ಸುಪ್ರೀಂಕೋರ್ಟ್‌ ಚೌಕಿದಾರ್‌ ಚೋರ್‌ ಹೈ ಎಂದು ಹೇಳಿದೆ ಎಂದು ರಾಹುಲ್‌ ಗಾಂಧಿ ಹೇಳಿ, ಕಡೆಗೆ ಕ್ಷಮೆ ಕೇಳಿದ ಮೇಲಂತೂ ಇದು ಇನ್ನಷ್ಟು ಲಾಭ ತಂದಿತು ಮೋದಿ ಬಳಗಕ್ಕೆ. ಮೋದಿ ಅವರು ಸ್ವಂತಕ್ಕೇನೂ ಮಾಡಿಕೊಳ್ಳುವುದಿಲ್ಲ, ಅವರು ಯಾರಿಗಾಗಿ ಭ್ರಷ್ಟಾಚಾರ ಮಾಡುತ್ತಾರೆ ಎಂಬ ಸಾಮಾನ್ಯ ಜನರಲ್ಲಿನ ನಿಲುವೂ ಸಹ ಮೋದಿ ಪರ ಕೆಲಸ ಮಾಡಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಮೇರಾ ಬೂತ್‌
ಮೋದಿ ಚುನಾವಣೆಗಾಗಿ ಒಂದು ತಿಂಗಳಲ್ಲೋ ಅಥವಾ ಈ ವರ್ಷದ ಆರಂಭದಲ್ಲೋ ಸಿದ್ಧತೆ ಮಾಡಿಕೊಳ್ಳಲಿಲ್ಲ. ಇದಕ್ಕೆ ಬದಲಾಗಿ ತುಂಬಾ ವೃತ್ತಿಪರವಾಗಿ ಕೆಲಸ ಮಾಡಿದರು. ವರ್ಷದ ಹಿಂದೆಯೇ ಎಲ್ಲ ಬಿಜೆಪಿ ಮತಗಟ್ಟೆಗಳ ಏಜೆಂಟರ ಜತೆಗೆ ನೇರ ವೀಡಿಯೋ ಸಂವಾದ ನಡೆಸಿ ಅವರು ಪಕ್ಷಕಟ್ಟುತ್ತಿರುವ ಕಡೆಗಳಲ್ಲಿ ಆಗಬೇಕಾದ ಕೆಲಸಗಳನ್ನು ಪ್ರಸ್ತಾವಿಸಿದರು.

ಆಯಾಯ ಪ್ರದೇಶಗಳ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಅರಿತು ಹುರಿದುಂಬಿಸಿದ್ದಕ್ಕೆ ದೊಡ್ಡ ಬೂತ್‌ ಯೋಧರ ಪಡೆ ಸೃಷ್ಟಿಯಾಯಿತು.

ಸಹಾಯಧನ
ರಾಹುಲ್‌ ಗಾಂಧಿ ಅವರು ನ್ಯಾಯ್‌ ಯೋಜನೆ ಘೋಷಿಸಿದರೂ, ಇದರ ಜಾರಿ ಹೇಗೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ಅಲ್ಲದೇ, ಇದಕ್ಕೆ ಹಣ ಎಲ್ಲಿಂದ ತರಲಾಗುತ್ತದೆ ಎಂಬ ಬಗ್ಗೆಯೂ ವಿವರಣೆ ನೀಡಲಿಲ್ಲ. ವಿಶೇಷವೆಂದರೆ, ಕಾಂಗ್ರೆಸ್‌ ರಾಜ್ಯಗಳಲ್ಲಿನ ಸರ್ಕಾರಗಳು ರೈತರ ಸಾಲ ಮನ್ನಾ ಘೋಷಿಸಿ, ರೈತರ ಅಕೌಂಟ್‌ಗಳಿಗೆ ಸರಿಯಾಗಿ ಹಣ ಹಾಕದೇ ಹೆಸರು ಕೆಡಿಸಿಕೊಂಡಿದ್ದವು. ಇದರ ನಡುವೆಯೇ ನ್ಯಾಯ ಕೊಡುತ್ತೇವೆ ಎಂಬುದಕ್ಕೆ ಬಲ ಬರಲಿಲ್ಲ. ಆದರೆ, ಮೋದಿ ಅವರು ರೈತರ ಅಕೌಂಟ್‌ಗಳಿಗೆ ವರ್ಷದಲ್ಲಿ ಮೂರು ಬಾರಿ ಮಾಸಿಕ 2 ಸಾವಿರ ಹಣ ಹಾಕುತ್ತೇನೆ ಎಂದು ಘೋಷಿಸಿ, ಮೊದಲ ಕಂತನ್ನು ಹಾಕಿಸಿದ್ದನ್ನು ಹೆಚ್ಚು ಜನ ನಂಬಿದರು ಎಂಬುದು ವಿಶ್ಲೇಷಕರ ಮತ್ತೂಂದು ಉಲ್ಲೇಖ.

ರಾಷ್ಟ್ರೀಯ ಭದ್ರತೆ
ಭದ್ರತೆ ವಿಚಾರವೂ ರಾಜಕೀಯಗೊಂಡಿದ್ದು ಮೋದಿ ಅವರ ಪಾಲಿಗೆ ಹೆಚ್ಚು ಲಾಭ ತಂದುಕೊಟ್ಟಿದೆ. ಪುಲ್ವಾಮಾ ದಾಳಿ, ಸರ್ಜಿಕಲ್‌ ಸ್ಟ್ರೈಕ್‌ಗಳ ಮೇಲಿನ ವಿಪಕ್ಷಗಳ ಅನುಮಾನ ಜನರಲ್ಲಿ ಸಿಟ್ಟು ಬರಲು ಕಾರಣವಾಗಿದ್ದವು. ಭದ್ರತೆ ವಿಚಾರದಲ್ಲಿ ಮೋದಿ ಸರ್ಕಾರ ಕ್ರಮ ತೆಗೆದುಕೊಂಡಿದ್ದರೂ, ಪ್ರತಿಪಕ್ಷಗಳು ದೇಶದ ಮರ್ಯಾದೆ ತೆಗೆಯುತ್ತಿವೆ ಎಂಬ ಭಾವನೆ ಜನರಲ್ಲಿ ಮೂಡತೊಡಗಿತ್ತು. ಅಲ್ಲದೆ, ಪಾಕಿಸ್ಥಾನಕ್ಕೆ ತಿರುಗೇಟು ನೀಡಬಲ್ಲ ಶಕ್ತಿ ಮೋದಿ ಅವರಿಗಷ್ಟೇ ಇರುವುದು ಎಂದೂ ಬಿಜೆಪಿ ಬಿಂಬಿಸಿತ್ತು. ಇವೆಲ್ಲವೂ ಕೇಸರಿ ಪಾಳಯಕ್ಕೆ ಲಾಭವಾಗಿ ಪರಿವರ್ತನೆಯಾದವು.

Advertisement

Udayavani is now on Telegram. Click here to join our channel and stay updated with the latest news.

Next