ಹುಮನಾಬಾದ: ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಹುಮನಾಬಾದ ಪಟ್ಟಣದ ಹೆಜ್ಜೆಗುರುತುಗಳೂ ಕಾಣುತ್ತವೆ. ನಿಜಾಮನ ದೌರ್ಜನ್ಯದಿಂದ ಈ ಭಾಗ ಮುಕ್ತಗೊಳಿಸುವುದಕ್ಕಾಗಿ ಯಾರ್ಯಾರು ಎಷ್ಟೆಲ್ಲ ಸಂಕಷ್ಟ ಅನುಭವಿಸಿ, ಹುತಾತ್ಮರಾದರು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
ಕರ್ನಾಟಕದ ಬೀದರ, ಕಲಬುರಗಿ, ರಾಯಚೂರು ಸೇರಿ ಮೂರು ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ಉಸ್ಮಾನಾಬಾದ, ಲಾತೂರ, ಜಾಲ್ನಾ, ಬೀಡ್, ನಳದುರ್ಗ 5 ಜಿಲ್ಲೆ ಹಾಗೂ ಆಂಧ್ರ ಪ್ರದೇಶದ 8 ಜಿಲ್ಲೆಗಳು ನಿಜಾಮನ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದವು. ಈ ವ್ಯಾಪ್ತಿಯಲ್ಲಿ 2,250 ಗ್ರಾಮ, 100 ತಹಶೀಲ್ದಾರ್ ಕಚೇರಿ ಇದ್ದವು.
ನಿಜಾಮನ ಆಡಳಿತದಿಂದ ಮುಕ್ತಿ ಪಡೆಯಲು ಈ ಭಾಗದ ತಾಲೂಕಿನ ಹಳ್ಳಿಖೇಡ(ಬಿ)ದ ಭಾಯಿ ಶಾಮಲಾಲ್ ಮತ್ತು ಭಾಯಿ ಬನ್ಸಿಲಾಲ್, ವಿದ್ಯಾಧರ ಗುರೂಜಿ, ವಿಶ್ವನಾಥರೆಡ್ಡಿ ಮುದ್ನಾಳ, ಪಂ| ಶಿವಚಂದ್ರ ನೆಲೋಗಿ, ಬಸವರಾಜ ಉಮ್ಮರ್ಗೆ, ಶಂಕ್ರೆಪ್ಪ ಚಿದ್ರಿ, ಭೀಮಣ್ಣ ಖಂಡ್ರೆ, ರಾಮಚಂದ್ರ ಆರ್ಯ, ಲಕ್ಷ್ಮಣರಾವ್ ಆರ್ಯ, ನರೇಂದ್ರ ಜಿ, ವಿನಾಯಕರಾವ್ ವಿದ್ಯಾಲಂಕಾರ ಇನ್ನೂ ಅನೇಕರು ಹೋರಾಟ ನಡೆಸಿ ಕೆಲವರು ಪ್ರಾಣ ಕಳೆದುಕೊಂಡರೆ ಕೆಲವರು ಕಾರಾಗೃಹ ವಾಸ ಅನುಭವಿಸಿದ್ದಾರೆ.
ಮಾಜಿ ಸಂಸದ ದಿ.ರಾಮಚಂದ್ರ ಆರ್ಯ ಅವರ ಸಾಹಸದ ಕೃತ್ಯವನ್ನು ಸ್ಮರಿಸದಿರಲು ಆಗದು. ಗೌರವಾನ್ವಿತ ಮನೆತನದ ಮಹಿಳೆಯೊಬ್ಬರು ಪಟ್ಟಣದ ಪರ್ವತ ಮಲ್ಲಣ್ಣ (ಬಸವಣ್ಣನ) ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಬರುತ್ತಿರುವುದನ್ನು ನೋಡಿದ ರಜಕಾರರ ಗುಂಪು ನಡು ಬೀದಿಯಲ್ಲೇ ಮಾನಹರಣಕ್ಕೆ ಮುಂದಾಗುತ್ತದೆ. ಅದೇ ವೇಳೆ ಅಲ್ಲಿಂದ ತೆರಳುತ್ತಿದ್ದ ರಾಮಚಂದ್ರ ಆರ್ಯ ಎಂಬ ತರುಣ ಜೀವದ ಹಂಗು ತೊರೆದು ಮಹಿಳೆಯನ್ನು ರಕ್ಷಿಸುತ್ತಾನೆ. ಇವರ ಮೇಲೆ ಮಾರಣಾಂತಿಕ ಹಲ್ಲೆಗೈದು ಸತ್ತನೆಂದು ಭಾವಿಸಿ, ರಜಾಕಾರರು ಅಲ್ಲಿಂದ ತೆರಳುತ್ತಾರೆ. ಅವರು ತೆರಳಿದ ನಂತರ ಬದುಕುಳಿದ ಆರ್ಯ 2004ರ ವರೆಗೂ ಜೀವಿತವಿದ್ದು, ನಾಲ್ಕೈದು ಬಾರಿ ಸೋಲಿಲ್ಲದ ಸರದಾರರಂತೆ ಸಂಸದರಾಗಿ ಆಯ್ಕೆಗೊಂಡು ಇತಿಹಾಸ ಸೃಷ್ಟಿಸಿದರು.
1938ರ ಘಟನೆ ಸ್ಮರಣೀಯ: ಪಟ್ಟಣದಲ್ಲಿ ಹೋಳಿ ಆಚರಣೆ ಸಂದರ್ಭ. ಪಟ್ಟಣದ ಈಗಿನ ಲಕ್ಷ್ಮೀವೆಂಟೇಶ್ವರ ದೇವಸ್ಥಾನ ಅಂದಿನ ಆರ್ಯ ಸಮಾಜಿಗಳ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಆರ್ಯ ಸಮಾಜದ ಪ್ರಮುಖರಾದ ಶಿವಚಂದ್ರ ನೆಲ್ಲೊಗಿ, ಲಕ್ಷ್ಮಣರಾವ್, ಮಾಣಿಕರಾವ್ ಭಂಡಾರಿ ಅನೇಕರು ಭಗವಾ ಧ್ವಜ ಹಿಡಿದು ಮೆರವಣಿಗೆ ನಡೆಸುತ್ತಿದ್ದ ಪ್ರಸಂಗ ಅದು. ಬಸವೇಶ್ವರ ವೃತ್ತದಿಂದ ಭಗವಾ ಧ್ವಜಹಿಡಿದು ಬಪ್ಪಣ್ಣ ಓಣಿಯ ಮೂಲಕ ಜೈಘೋಷ ಹೇಳುತ್ತ ಹೊರಡುತ್ತಿದ್ದಾಗ ಎದುರಾದ ರಜಾಕಾರರು ಎಲ್ಲರನ್ನೂ ಘೇರಾವ್ ಹಾಕಿ ಪಂ. ಶಿವಚಂದ್ರ ನೆಲ್ಲೊಗಿ, ನರಸಿಂಗರಾವ್ ಲಕ್ಷ್ಮಣರಾವ್, ರಾವಜಿರಾವ್ ಅವರನ್ನು ಬಲಿತೆಗೆದುಕೊಳ್ಳುತ್ತಾರೆ.
ನರೇಂದ್ರಜಿ ನೇತೃತ್ವದ ತಂಡ ಅಂದಿನ ಗೃಹ ಸಚಿವ ಸರ್ದಾರ ವಲ್ಲಭಭಾಯಿ ಪಟೇಲ ಅವರ ಮೊರೆ ಹೋದಾಗ ನಡೆಸಲಾದ ಕಾರ್ಯಚರಣೆ ನಂತರ ನಿಜಾಮ ಸರ್ದಾರ ವಲ್ಲಭಭಾಯಿ ಪಟೇಲ ಅವರಿಗೆ ಶರಣಾಗುವ ಮೂಲಕ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಗುತ್ತಾನೆ.
•ಶಶಿಕಾಂತ ಕೆ.ಭಗೋಜಿ