Advertisement

ತನ್ನಿಮಿತ್ತ: ಮಹಾನ್‌ ಚೇತನ ಶಾಸ್ತ್ರೀಜಿ

12:46 AM Oct 02, 2020 | mahesh |

1964ರಲ್ಲಿ ನೆಹರೂ ಅನಂತರ ಯಾರು? ಎಂಬ ಪ್ರಶ್ನೆ ಉದ್ಭವಿಸಿದಾಗ, ಕಾಂಗ್ರೆಸ್‌ ವರಿಷ್ಠ ಮಂಡಳಿಯ ಮಂದೆ ಪ್ರಸ್ತಾವಿತವಾದ ಹೆಸರು ಮೊರಾರ್ಜಿ ದೇಸಾಯಿ. ಆದರೆ ಒಂದೆಡೆ ದಿಟ್ಟ ನಿಲುವಿನ, ನಿಷ್ಠುರ ವ್ಯಕ್ತಿತ್ವದ ಇವರ ಆಯ್ಕೆಯನ್ನು ಇಷ್ಟಪಡದ ಹೈಕಮಾಂಡ್‌, ಇನ್ನೊಂದೆಡೆ ರಾಜ ಕೀಯದಲ್ಲಿ ಇನ್ನೂ ಪಳಗಿರದ ಇಂದಿರಾರನ್ನೂ ಆಯ್ಕೆ ಮಾಡುವಂತಿರಲಿಲ್ಲ. ಈ ಮಧ್ಯೆ ಒಮ್ಮತದ ಸಮ್ಮತಿಯ ಮೊಹರು ಪ್ರಧಾನಿ ಪಟ್ಟಕ್ಕೆ ದೊರಕಿದುದು ಸರಳತೆಯ ಸಾಕಾರಮೂರ್ತಿ, ಭ್ರಷ್ಟತೆಯ ಸೋಂಕೇ ಇಲ್ಲದ ಅಪ್ಪಟ ದೇಶೀಯ ಚಿಂತನೆಯ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೆ.

Advertisement

ಪ್ರಧಾನಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಳಿಕ ತಮ್ಮ ಪ್ರಥಮ ಬಾನುಲಿ ಭಾಷಣದಲ್ಲೇ ತಾಯ್ನಾಡಿನ ಭವಿಷ್ಯದ ಪಥವನ್ನು ಸ್ಪಷ್ಟವಾಗಿ ಶಾಸ್ತ್ರೀಜಿ ಪ್ರತಿಫ‌ಲಿಸಿದರು. ಎಡ-ಬಲ ಪಂಥೀಯತೆಗೆ ಅತೀತವಾಗಿ ಸ್ವಾತಂತ್ರ್ಯ ಮತ್ತು ಸಮೃದ್ಧಿಯ ಸಮಾಜವಾದೀ ಚಿಂತನೆಯ ಆಧಾರದಲ್ಲಿ ವಿಶ್ವಶಾಂತಿಯ ಹಾಗೂ ಅಂತಾರಾಷ್ಟ್ರೀಯ ಮೈತ್ರಿಯ ನೆಲೆಯಲ್ಲಿ ನವ ಭಾರತವನ್ನು ಕಟ್ಟುವ ಕನಸನ್ನು ಬಿತ್ತರಿಸಿದರು. 1964 ಜೂನ್‌ 9 ರಂದು ವಿಶಾಲ ರಾಷ್ಟ್ರವೊಂದನ್ನು ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಮುನ್ನಡೆಸುವ ಅಗಾಧ ಹೊಣೆಗಾ ರಿಕೆಯನ್ನು ಹೆಗಲಿಗೇರಿಸಿಕೊಂಡ ಶಾಸ್ತ್ರೀಜಿ ಸಮಗ್ರ ಭಾರತದ ಹೊಸ ಭರವಸೆಯ ನಂದಾದೀಪ ಎನಿಸಿದರು. ಆದರೆ ಈ ಬೆಳಕಿನ ಕುಡಿ 1996ರ ಜನವರಿ 11 ರಂದು ದೂರದ ರಷ್ಯಾದ ತಾಷ್ಕ್ಟ್‌ನಲ್ಲಿ ಥಟ್ಟನೆ ಆರಿ ಹೋದುದು ಕರಾಳ ಇತಿಹಾಸ! 1965ರ ಭಾರತ-ಪಾಕಿಸ್ಥಾನ ಸಮರದ ವಿಜಯೋ ತ್ಸಾಹದ ಪರ್ವ ಕಾಲದಲ್ಲಿಯೇ ಹೊಸದಿಲ್ಲಿಯ “ವಿಜಯಘಾಟ್‌’ನಲ್ಲಿ ಚಿರಶಾಂತಿ ಪಡೆದ ಅವರು ಇಂದಿಗೂ ಕೀರ್ತಿಶೇಷರು, ಅಮರರು. Ship has reached the shore; Alas, captain is no more’ -ಎಂಬುದಾಗಿ ಲಿಪ್‌ಮೆನ್‌ ಅಮೆರಿಕ ಏಕತೆಯ ಹೋರಾಟದಲ್ಲಿ ಜಯ ಸಾಧಿಸಿ, ಕಾಣದಲೋಕಕ್ಕೆ ತೆರಳಿದ ಲಿಂಕನ್‌ನ ಬಗೆಗೆ ಬರೆದ ಸಾಲುಗಳು ಇಲ್ಲಿ ನೆನಪಿಗೆ ಬರುತ್ತವೆ.

ಉತ್ತರ ಪ್ರದೇಶದ ಮೊಗಲ್‌ಸರಾಯ್‌ಯಲ್ಲಿ ಲಾಲ್‌ ಬಹದ್ದೂರ್‌ 1904ರ ಅಕ್ಟೋಬರ್‌ 2ರಂದು ಜನಿಸಿದರು. ಲಾಲ್‌ ಬಹದ್ದೂರ್‌ ಬಡತನದ ಸಂಗಾತಿಯಾಗಿ, ತನ್ನ ಒಂದೂವರೇ ವರ್ಷದ ಶೈಶವದಲ್ಲೇ ತಂದೆಯನ್ನು ಕಳೆದು ಕೊಂಡು ತಾಯಿಯ ಆರೈಕೆಯಲ್ಲಿ ಬೆಳೆದರು. ಅವರಿಗೆ 11ನೇ ವಯಸ್ಸಿನಲ್ಲಿಯೇ ಗಾಂಧೀಜಿ ಯವರ ಚಳವಳಿಯ ಬಗೆಗೆ ಕುತೂಹಲ ಮೂಡಲಾರಂಭಿಸಿತ್ತು. ವಿದ್ಯಾಭ್ಯಾಸದ ದಿನಗ ಳಲ್ಲೇ ಸ್ವಾತಂತ್ರ್ಯ ಹೋರಾಟದ ಪ್ರೇರಣೆ ಅಂತರಾಳದಲ್ಲಿ ಮೊಳೆಯಲಾರಂಭಿಸಿತು. 1928 ರಲ್ಲಿ ಲಲಿತಾ ದೇವಿಯನ್ನು ವಿವಾಹವಾದರೂ ಕೌಟುಂಬಿಕ ಬದುಕಿನಿಂದ ಹೆಚ್ಚಾಗಿ, ಸ್ವಾತಂತ್ರ್ಯ ಹೋರಾಟದ ಕಿಚ್ಚು ಇವರ ವೈಮನವನ್ನು ಆವರಿ ಸಿತು. ಗಾಂಧೀಜಿಯವರ ದಂಡಿಯಾತ್ರೆ, ಕ್ವಿಟ್‌ ಇಂಡಿಯಾ ಚಳವಳಿ ಇವೆಲ್ಲವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟದ ವಿವಿಧ ಮಜಲುಗಳಲ್ಲಿ ಸಂಘಟಿತರಾಗಿ ದೇಶಪ್ರೇಮವನ್ನು ತೋರ್ಪ ಡಿಸಿದರು. ತತ್ಪಲವಾಗಿ ಬ್ರಿಟೀಷ್‌ ಶಾಹಿತ್ವದಿಂದ 9 ವರ್ಷ ಸೆರೆಮನೆ ವಾಸವನ್ನೂ ಅನುಭವಿಸಿದರು.

ಶಾಸ್ತ್ರಿ ಅವರ ಸಂಘಟನ ಚಾತುರ್ಯ, ಸರಳ ಸಜ್ಜನಿಕೆಯ ನಾಯಕತ್ವ.. ಈ ಎಲ್ಲ ಗುಣಗಳಿಂದಾಗಿ 1951ರಲ್ಲಿ ಹೊಸದಿಲ್ಲಿ ಇವರನ್ನೂ ಕೈಬೀಸಿ ಕರೆಯಿತು. ಪಂಡಿತ್‌ ನೆಹರೂ ಅವರ ಸಚಿವ ಸಂಪುಟದಲ್ಲಿ ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆ, ಸಾರಿಗೆ ಮತ್ತು ಸಂಪರ್ಕ ಹಾಗೂ ಗೃಹ ಸಚಿವರಾಗಿ ಮಿಂಚಿದರು. ಶಾಸ್ತ್ರೀಜಿ ರೈಲ್ವೇ ಸಚಿವರಾಗಿದ್ದ ಸಂದರ್ಭ ರೈಲು ದುರಂತವೊಂದು ಅಚಾನಕ್‌ ಆಗಿ ಸಂಭವಿಸಿದಾಗ ಯಾರೂ ಒತ್ತಾಯಿಸದಿದ್ದರೂ ನೈತಿಕ ಹೊಣೆ ಹೊತ್ತು, ರಾಜೀನಾಮೆ ನೀಡಿದರು. ಶಾಸ್ತ್ರೀಜಿಯ ರಾಜೀನಾಮೆ ಪತ್ರವನ್ನು ಭಾರವಾದ ಮನಸ್ಸಿನಿಂದ ಸ್ವೀಕರಿಸುತ್ತಿದ್ದೇನೆ ಎಂದು ಪ್ರಧಾನಿ ನೆಹರೂ ಸಂಸತ್ತಿನಲ್ಲಿ ಗದ್ಗದಿತರಾಗಿ ನುಡಿದಿದ್ದರು.

1965 ಭಾರತ-ಪಾಕಿಸ್ಥಾನ ಯುದ್ಧ ಆರಂಭ ಗೊಂಡ ಕ್ಲಿಷ್ಟ ಪರಿಸ್ಥಿತಿಯನ್ನು ಅವರು ನಿಭಾಯಿಸಿದ ಪರಿ ಇಂದಿಗೂ ನಮ್ಮ ಮನಪಟಲದಲ್ಲಿದೆ. ಆಹಾರ ಅಭಾವ, ಆರ್ಥಿಕ ಸಂಕಷ್ಟದ ದಿನಗಳವು. “ಸೋಮವಾರದ ರಾತ್ರಿಯ ಊಟವನ್ನು ರಾಷ್ಟ್ರಕ್ಕಾಗಿ ತ್ಯಾಗ ಮಾಡಿ’ ಎಂದು ಕರೆ ನೀಡಿದಾಗ ದೊರೆತ ಪ್ರತಿಸ್ಪಂದನದಲ್ಲಿ ಲಕ್ಷಾಂತರ ಟನ್‌ ಗೋಧಿ, ಅಕ್ಕಿ ವಿದೇಶದಿಂದ ಆಮದು ಆಗುವುದು ಉಳಿಯಿತು. “ಜೈ ಜವಾನ್‌, ಜೈ ಕಿಸಾನ್‌’ ವೀರ ಘೋಷಣೆಯ ಜತೆಗೇ ಗುಜರಾತಿನ ಕಛ… ಆಫ್ ರಣ್‌ದಿಂದ್‌ ಕಾಶ್ಮೀರದ ಹಾಜೀಪೀರ್‌ವರೆಗೆ ತ್ರಿವರ್ಣ ಧ್ವಜದ, ವೀರ ಯೋಧರ ಗರ್ಜನೆ ಮಾರ್ದನಿಸಿತು. ಇಡೀ ರಾಷ್ಟ್ರವೇ ಒಂದಾಗಿ ಶಾಸ್ತ್ರೀಜಿ ನಾಯಕತ್ವದಲ್ಲಿ ಪ್ರಚಂಡ ವಿಜಯದ ಪಥಗಾಮಿಯಾಯಿತು. “ಸಣ್ಣ ಗಾತ್ರದ, ದುರ್ಬಲ ನಾಯಕ’ ಎಂಬ ಪಾಕಿಸ್ಥಾನದ ಮಿಲಿಟರಿ ಸರ್ವಾಧಿಕಾರಿ ಅಯೂಬ್‌ ಖಾನ್‌ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಆತ ಶಾಸ್ತ್ರೀಜಿ ಮುಂದೆ ಮಂಡಿಯೂರಬೇಕಾಗಿ ಬಂದುದು ಇತಿಹಾಸ. ಲಾಲ್‌ ಬಹದ್ದೂರ್‌ ಶಾಸ್ತ್ರಿ ಇನ್ನಷ್ಟು ವರ್ಷ ಬದುಕಿ ದ್ದರೆ ಭಾರತದ ಬದುಕನ್ನೇ ಇನ್ನಷ್ಟು ಎತ್ತರಕ್ಕೆ ಏರಿಸು ತ್ತಿದ್ದರು. ಆದರೆ ವಿಧಿ ಶಾಸ್ತ್ರೀಜಿಯವರನ್ನು ಕಾಣದ ಲೋಕಕ್ಕೆ ಬರ ಸೆಳೆದರೂ ಆ ಪುಟ್ಟ ಗಾತ್ರದ ಹಿರಿಯ ಜೀವದ ಹೆಜ್ಜೆಗಳು ಮಾತ್ರ ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿವೆ.

Advertisement

ಡಾ| ಪಿ.ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next