ಬೆಂಗಳೂರು: ಶುಕ್ರವಾರ ಮಧ್ಯಾಹ್ನ 1.30ಕ್ಕೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಕ್ತಾಯಗೊಳಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ನೀಡಿದ್ದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಶುಕ್ರವಾರ ಮಧ್ಯಾಹ್ನ ಮತ್ತೂಂದು ಪತ್ರ ಬರೆದು, ಶುಕ್ರವಾರ ದಿನದಂತ್ಯದೊಳಗೆ ಬಹುಮತ ಸಾಬೀತು ಪ್ರಕ್ರಿಯೆ ಮುಗಿಸುವಂತೆ ಆದೇಶ ನೀಡಿದ್ದಾರೆ.
“ನಿಮ್ಮ ಪತ್ರದ ಸಾರಾಂಶ ವಿಶ್ವಾಸಮತ ಯಾಚನೆ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ಸೂಚಿಸುತ್ತದೆ. ನೀವು ಸದನದ ಬಹುಮತವನ್ನು ಕಳೆದುಕೊಂಡಿದ್ದೀರಾ ಎಂದು ನಾನು ಈಗಾಗಲೇ ನನ್ನ ಭಾವನೆ ವ್ಯಕ್ತಪಡಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಸಾಬೀತು ಪಡಿಸುವುದು ಸದನದ ವಿಶ್ವಾಸ ಗಳಿಸುವ ಒಂದು ಪ್ರಕ್ರಿಯೆ. ಈ ಬಗ್ಗೆ ವಿವರವಾದ ಚರ್ಚೆ ನಡೆಸುವುದು ಕಾಲಹರಣ ಮಾಡುವಂತೆ ಭಾಸವಾಗುತ್ತದೆ.
ಈ ಮಧ್ಯೆ, ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಸದನದ ವಿಶ್ವಾಸಮತಯಾಚನೆ ಪ್ರಕ್ರಿಯೆ ವಿಳಂಬ ಮಾಡಿದರೆ, ಶಾಸಕರ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ಅದೇ ಕಾರಣಕ್ಕೆ ಶುಕ್ರವಾರ ಮಧ್ಯಾಹ್ನ 1.30 ಗಂಟೆಯೊಳಗೆ ಬಹುಮತ ಸಾಬೀತು ಪಡೆಸುವಂತೆ ಬಯಸಿದ್ದೆ.
ಸದ್ಯದ ಸಂದಿಗ್ಧ ವಾತಾವರಣದಲ್ಲಿ ರಾಜ್ಯದ ಬೆಳವಣಿಗೆಗಳ ಬಗ್ಗೆ ಬೇಸರವಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ದಿನದಂತ್ಯದೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಕ್ತಾಯಗೊಳಿಸಿ ಬಹುಮತ ಸಾಬೀತು ಪಡಿಸುವಂತೆ’ ರಾಜ್ಯಪಾಲರು ತಮ್ಮ ಎರಡನೇ ಪತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ರಾಜ್ಯಪಾಲರ ಮುಂದಿರುವ ಆಯ್ಕೆ: ಶುಕ್ರವಾರವೇ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿಗೆ ರಾಜ್ಯಪಾಲರು ನಿರ್ದೇಶನ ನೀಡಿದರೂ, ಆದೇಶ ಪಾಲನೆಯಾಗದಿರುವುದರಿಂದ ರಾಜ್ಯಪಾಲರು ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಈ ನಡುವೆ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿಗಳು ಅನಗತ್ಯ ಕಾಲಹರಣ ಮಾಡುತ್ತಿರುವುದನ್ನೇ ಅಸ್ತ್ರವಾಗಿಟ್ಟುಕೊಂಡು ಸದನವನ್ನು ಅಮಾನತ್ತಿನಲ್ಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನೇರವಾಗಿ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಲು ಶಿಫಾರಸು ಮಾಡಿದರೆ, ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಉಲ್ಲಂಘನೆಯಾಗುತ್ತದೆ ಎನ್ನುವ ಕಾರಣಕ್ಕೆ ರಾಜ್ಯಪಾಲರು ಸರ್ಕಾರ ವಿಶ್ವಾಸಮತ ಕಳೆದುಕೊಂಡಿದೆ ಎಂದು ಅಮಾನತ್ತಿನಲ್ಲಿಡಲು ಅವಕಾಶವಿದೆ. ಅದರಂತೆ ಹಾಲಿ ಸರ್ಕಾರವನ್ನು ಅಮಾನತು ಮಾಡಿ, ಮುಂದೆ ಬೇರೆ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಬಹುದು.