Advertisement

ಸರ್ಕಾರದ ಯೋಜನೆಗಳು ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೂ ತಲುಪಿಸಬೇಕು

09:53 AM Mar 10, 2020 | sudhir |

ಬೆಂಗಳೂರು: ಸರ್ಕಾರದ ಯೋಜನೆಗಳು ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು.ಅದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ವರ್ಗ ಕೆಲಸ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕರೆನೀಡಿದರು.

Advertisement

ಜಯನಗರದ ಶಿವರಾತ್ರೀಶ್ವರ ಕೇಂದ್ರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜೆಎಸ್‌ಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ (ಜಸ್ಟಿಸ್‌)ಯಿಂದ ತರಬೇತಿ ಪಡೆದು ಕೇಂದ್ರೀಯ ನಾಗರೀಕ ಸೇವೆಗಳು ಮತ್ತು ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರ್ ಗ್ರೂಪ್‌ “ಎ’ ಮತ್ತು “ಬಿ’ ಶ್ರೇಣಿಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ಸರ್ಕಾರದ ಆಡಳಿತ ಸೂತ್ರ ಸುಸೂತ್ರವಾಗಿ ನಡೆಯುವಲ್ಲಿ ಅಧಿಕಾರಿ ವರ್ಗದವರ ಪಾತ್ರ ಹಿರಿದಾಗಿರುತ್ತದೆ. ಶ್ರೀಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಹೊಣೆಗಾರಿಕೆ ಕೂಡ ಅಧಿಕಾರಿಗಳ ಮೇಲಿರುತ್ತದೆ. ಆ ಹಿನ್ನೆಲೆಯಲ್ಲಿ ಆಡಳಿತ ವರ್ಗ ಸಮಾಜದ ಕಟ್ಟಡೆಯ ವ್ಯಕ್ತಿವರೆಗೂ ಸರ್ಕಾರದ ಯೋಜನೆಗಳನ್ನು ತಲುಪುವಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸೇವೆಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತಹ ವಿಚಾರವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸುತ್ತೂರು ಮಠ ಕ್ರಾಂತಿಕಾರ ಹೆಜ್ಜೆಯಿರಿಸಿ ದೇಶದ ತುಂಬೆಲ್ಲ ಮನೆ ಮಾತಾಗಿದೆ. ಆರೋಗ್ಯ ಕ್ಷೇತ್ರದಲ್ಲೂ ಹಲವು ಸಾಧನೆಗಳನ್ನು ಮಾಡಿದೆ ಎಂದು ಶ್ಲಾ ಸಿದರು.

ಜೆಎಸ್‌ಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯು ಕೇಂದ್ರ ಸೇವೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದಶನದ ಜತೆಗೆ ತರಬೇತಿಯನ್ನು ಕೂಡ ನೀಡುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಐಐಎಸ್‌ ಪರೀಕ್ಷೆಯಲ್ಲಿ ಟಾಪ್‌ ರ್‍ಯಾಂಕ್‌ ಪಡೆದಿರುವ ಉದಾಹರಣೆ ಇದೆ. ಈ ಶೈಕ್ಷಣಿಕೆ ಕಾರ್ಯ ಹೀಗೆ ಯಶಸ್ವಿಯಾಗಿ ಸಾಗಲಿ ಎಂದರು.

Advertisement

ಹುಡುಗನ ಮನೆಯಲ್ಲಿ ಎಷ್ಟು ಎಕರೆ ಜಮೀನಿದೆ:
ಸಚಿವ ಆರ್‌.ಅಶೋಕ ಮಾತನಾಡಿ, ವಿದ್ಯೆಗೆ ಎಲ್ಲವನ್ನೂ ಜಯಿಸುವ ದಿವ್ಯಶಕ್ತಿಗೆ ಇದೆ. ಆಸ್ತಿಗಿಂತ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಿಂದೆ ಹುಡುಗನಿಗೆ ಹುಡುಗಿ ಕೇಳಲು ಹೋದರೆ ಹುಡುಗನ ಮನೆಯಲ್ಲಿ ಎಷ್ಟು ಎಕರೆ ಜಮೀನಿದೆ ಎಂದು ಕೇಳುತ್ತಿದ್ದರು. ಆದರೆ ಇಂದು ಹುಡುಗ ಏನು ಉದ್ಯೋಗ ಮಾಡುತ್ತಿದ್ದಾನೆ ಎಂದು ಕೇಳುತ್ತಾರೆ. ವಿದ್ಯಾವಂತರಾದರೆ ಸಮಾಜದಲ್ಲಿ ಜಾತಿ, ಧರ್ಮ ಯಾವುದನ್ನೂ ನೋಡುವುದಿಲ್ಲ ಎಂದರು.

ಜೆಎಸ್‌ಎಸ್‌ ವಿದ್ಯಾಪೀಠದ ಶೈಕ್ಷಣಿಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜೆಎಸ್‌ಎಸ್‌ನ ವಿದ್ಯಾಪೀಠವು ದೇಶ-ವಿದೇಶಗಳಲ್ಲಿ ವಿದ್ಯಾದಾನ ಮಾಡಿ ಲಕ್ಷಾಂತರ ಯುವಕರು ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ. ಕಲಿಕೆ ವಿಚಾರದಲ್ಲಿ ಸಾಗರದಾಚೆಗೂ ಹೆಸರುವಾಸಿ ಆಗಿದೆ ಎಂದು ಹೇಳಿದರು.

ಕಾರ್ಯಾಂಗದ ಮೇಲೆ ಜವಾಬ್ದಾರಿ ಹೆಚ್ಚಿದೆ:
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ರಾಜಕೀಯ ವ್ಯಕ್ತಿಗಳ ಅಧಿಕಾರ ಕೇವಲ ಐದು ವರ್ಷ. ಆದರೆ ಆಡಳಿತ ವರ್ಗದವರು ನಿವೃತ್ತಿ ವರೆಗೂ ಅಧಿಕಾರದಲ್ಲಿ ಇರುತ್ತಾರೆ. ಆ ಹಿನ್ನೆಲೆಯಲ್ಲಿ ಸಿಕ್ಕ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದೇ ಜನರ ಕಲ್ಯಾಣಕ್ಕಾಗಿ ಮಿಡಿಯಿರಿ ಎಂದು ಮನವಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗದ ಸೇವೆ ಮಹತ್ವದ್ದಾಗಿದೆ. ಶಾಸಕಾಂಗದಲ್ಲಿ ರೂಪಿಸಿರುವ ಶಾಸನ, ಕಾಯ್ದೆಗಳನ್ನು ಜಾರಿ ಮಾಡುವ ಹೊಣೆಗಾರಿಕೆ ಕಾರ್ಯಾಂಗದ ಮೇಲಿರುತ್ತದೆ. ಇದನ್ನು ಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂಸದ ಪಿ.ಸಿ.ಮೋಹನ್‌, ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯಾ ರೆಡ್ಡಿ, ಮಾಜಿ ಮೇಯರ್‌ ಗಂಗಾಂಬಿಕೆ, ಜಸ್ಟಿಸ್‌ ತರಬೇತಿ ಕೇಂದ್ರದ ಗೌರವ ನಿರ್ದೇಶಕ ಎಂ.ಬಿ.ದ್ಯಾಬೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next