Advertisement

ಸರ್ಕಾರದ ಯೋಜನೆ ಪ್ರತಿಯೊಬ್ಬರಿಗೂ ತಲುಪಲಿ

07:29 AM Feb 20, 2019 | Team Udayavani |

ಚಿಕ್ಕಬಳ್ಳಾಪುರ: ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಮಹತ್ವಕಾಂಕ್ಷೆ ಹೊತ್ತು ಸರ್ಕಾರಗಳು ರೂಪಿಸುವ ಪ್ರತಿಯೊಂದು ಯೋಜನೆಗಳ ಹಾಗೂ ಕಾರ್ಯಕ್ರಮಗಳ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಆರತಿ ಹೇಳಿದರು. 

Advertisement

ನಗರದ ಸಾರ್ವಜನಿಕ ಬಸ್‌ ನಿಲ್ದಾಣದಲ್ಲಿ ಮಂಗಳವಾರ ರಾಜ್ಯ ಮೈತ್ರಿ ಸರ್ಕಾರದ ಏಳು ತಿಂಗಳಲ್ಲಿ ರೂಪಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪಕ್ಷಿನೋಟವನ್ನು ಜಿಲ್ಲೆಯ ರೈತಾಪಿ ಕೃಷಿ ಕೂಲಿಕಾರರಿಗೆ,  ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಅರಿವು ಮೂಡಿಸಲು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಮಾಹಿತಿ ಫ‌ಲಕಗಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಮಾನ್ಯರಿಗೆ ಅರಿವು: ಬಹಳಷ್ಟು ಸಂದರ್ಭಗಳಲ್ಲಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಇಲ್ಲದೇ ಸರ್ಕಾರದ ಉದ್ದೇಶಿತ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ವಸ್ತು ಪ್ರದರ್ಶನಗಳ ಮೂಲಕ ಜನ ಸಾಮಾನ್ಯರಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರೆ ಬಡ ಜನರಿಗೆ ಅನುಕೂಲವಾಗುತ್ತದೆ. ಜಿಲ್ಲೆಯ ಜನತೆ ಮೂರು ದಿನಗಳ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಮೂರು ದಿನ ಪ್ರದರ್ಶನ: ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಮಹತ್ವಕಾಂಕ್ಷೆಯನ್ನು ಹೊತ್ತು ವಾರ್ತಾ ಇಲಾಖೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಸ್ತು ಪ್ರದರ್ಶನದ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸುತ್ತಿದ್ದು, ಮಂಗಳವಾರದಿಂದ ಗುರುವಾರದವರೆಗೂ ಮೂರು ದಿನಗಳ ಕಾಲ ವಸ್ತು ಪ್ರದರ್ಶನ ಚಿಕ್ಕಬಳ್ಳಾಫ‌ುರದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಾರ್ತಾ ಅಧಿಕಾರಿ ಎಂ.ಜುಂಜಣ್ಣ ತಿಳಿಸಿದರು.

ನಗರಸಭೆಯ ಅಧ್ಯಕ್ಷ ಮುನಿಕೃಷ್ಣ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಆರ್‌, ಶಿವಣ್ಣರೆಡ್ಡಿ, ಪೌರಾಯುಕ್ತರಾದ ಉಮಾಕಾಂತ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕಿ ಮೈನಾಶ್ರೀ ಇದ್ದರು. 

Advertisement

ಛಾಯಾಚಿತ್ರಗಳ ಪ್ರದರ್ಶನ: ವಸ್ತು ಪ್ರದರ್ಶನದಲ್ಲಿ ರಾಜ್ಯ ಮೈತ್ರಿ ಸರ್ಕಾರ ಏಳು ತಿಂಗಳಲ್ಲಿ ರೂಪಿಸಿ ಅನುಷ್ಠಾನಗೊಳಿಸುತ್ತಿರುವ ಬಡವರ ಬಂಧು, ಹಸಿರು ಕರ್ನಾಟಕ, ಜನತಾದರ್ಶನ, ಋಣಮುಕ್ತ ಪರಿಹಾರ ಕಾಯ್ದೆ, ಬೆಳೆ ಸಮೀಕ್ಷೆ, ಶಾಲಾ ಕಾಲೇಜುಗಳಿಗೆ ಮೂಲ ಸೌಕರ್ಯ, ದಿಶಾ, ಬಡ್ಡಿರಹಿತ ಸಾಲ ನೀಡುವ ಕಾರ್ಯ ಯೋಜನೆ, ಕೈಗಾರಿಕಾ ಕ್ಲಸ್ಟರ್‌ ಯೋಜನೆ, ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಒದಗಿಸುವ ಆಕರ್ಷಕ ಛಾಯಾಚಿತ್ರಗಳ ಪ್ರದರ್ಶನ ವಸ್ತು ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next