Advertisement

ಕರಾವಳಿಗೆ 94ಡಿ ಸೌಲಭ್ಯಕ್ಕೆ ಸರಕಾರದ ಉದಾಸೀನ

09:38 PM Oct 20, 2020 | mahesh |

ಕುಂದಾಪುರ: ಸಿದ್ದರಾಮಯ್ಯ ನೇತೃತ್ವದ ಸರಕಾರ ಇದ್ದಾಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಮಹತ್ವಾಕಾಂಕ್ಷೆಯಿಂದ ಮಾಡಿದ 94 ಡಿ ಸೌಲಭ್ಯ ಕರಾವಳಿಗರ ಪಾಲಿಗೆ ಗಗನಕುಸುಮವಾಗಿದೆ.

Advertisement

ಏನಿದು 94 ಡಿ
2017 ಡಿ. 16ರಂದು ಆದೇಶವಾಗಿದ್ದು, ವಾಸಿಸುವವನೇ ಮನೆಯ ಒಡೆಯ ಉದ್ದೇಶದ 1964ರ ಕಲಂ 94 ಕರ್ನಾಟಕ ಭೂ ಕಂದಾಯ ಕಾಯ್ದೆಗೆ 94ಡಿ ತಿದ್ದುಪಡಿ ತರುವ ಮೂಲಕ ಸರಕಾರಿ ಒಡೆತನದ ಜಾಗವನ್ನೂ ಕಂದಾಯ ಗ್ರಾಮರಹಿತ ಜನವಸತಿಗಳಲ್ಲಿ ಹಾಲಿ ವಾಸವಿರುವವರಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿದೆ. ಕಂದಾಯ ಗ್ರಾಮವಲ್ಲದ ಅನಧಿಕೃತ ಬಡಾವಣೆಗಳಾದ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ, ವಡ್ಡರಹಟ್ಟಿ, ಕುರುಬರ ಹಟ್ಟಿ, ನಾಯಕರಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಕಾಲನಿಯಂತಹ ರಾಜ್ಯದ 58 ಸಾವಿರಕ್ಕೂ ಅಧಿಕ ಜನವಸತಿ ಪ್ರದೇಶಗಳ ಮನೆಗಳು ಸರಕಾರಿ ಭೂಮಿಯಾಗಿದ್ದಲ್ಲಿ ಈಗಾಗಲೇ ವಾಸಿಸುತ್ತಿರುವವರಿಗೆ ಷರತ್ತಿಗೆ ಒಳಪಟ್ಟು ವಿತರಿಸಲು, 1979ರ ಪೂರ್ವದಲ್ಲಿ ವಾಸಿಸುತ್ತಿರುವವರ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಮಂಜೂರಾತಿಯು 4 ಸಾವಿರ ಚ. ಅಡಿ ಮಿತಿಗೆ ಒಳಪಟ್ಟಿದೆ.

ಖಾರ್ವಿಕೇರಿಯಲ್ಲಿ
ಇಲ್ಲಿನ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯ 150ಕ್ಕೂ ಅಧಿಕ ಮಂದಿಗೆ ನಿವೇಶನವೇ ಇಲ್ಲ. ಈ ಕುರಿತು ಸಾಕಷ್ಟು ಹೋರಾಟಗಳಾಗಿವೆ. ಪುರಸಭೆಗೂ ಬೇಡಿಕೆ ಪಟ್ಟಿ ಮಂಡಿಸಲಾಗಿದೆ. ಆದರೆ ಬೇಡಿಕೆ ಈಡೇರಿಲ್ಲ. ಪುರಸಭಾ ವಾರ್ಡ್‌ ಸದಸ್ಯರಾಗಿದ್ದ ರವಿರಾಜ್‌ ಖಾರ್ವಿ, ಈಗಿನ ಸದಸ್ಯ ಚಂದ್ರಶೇಖರ್‌ ಖಾರ್ವಿ ನಿವೇಶನರಹಿತರ ಹೋರಾಟದ ಜತೆಗೆ ಅವರೂ ನೇತೃತ್ವ ವಹಿಸಿ ನಿವೇಶನ ದೊರಕಿಸಿಕೊಡಲು ಪ್ರಯತ್ನಿಸಿದ್ದರು.

ಡಿಸಿಯಿಂದ ಪತ್ರ
ಖಾರ್ವಿಕೇರಿಯಲ್ಲಿ ವಾಸಿಸುವವರಿಗೆ ಹಕ್ಕುಪತ್ರ ಇಲ್ಲದಿದ್ದರೂ ಅವರಿಗೆ ಈ ನಿಯಮದಡಿ ಭೂಮಿ ನೀಡಲು ಕಾನೂನಿನ ತೊಡಕಿದೆ. ಪುರಸಭೆ ವ್ಯಾಪ್ತಿ ಯಲ್ಲಿ 94ಸಿಸಿ ಅಸ್ತಿತ್ವದಲ್ಲಿರುವುದು. 94ಡಿಯಲ್ಲಿ ಮೀನುಗಾರ ಕುಟುಂಬಗಳಿಗೆ ನೀಡಲು ಅವಕಾಶ ಇಲ್ಲ. ತಾಂಡಾ ಪ್ರದೇಶ ಗುರುತಿಸಿ ನೋಟಿಫಿಕೇಶನ್‌ ಮಾಡಿದ ರಷ್ಟೇ ನಿವೇಶನ ಹಂಚಲು ಸಾಧ್ಯ. ಈ ಬದಲಾವಣೆ ಮಾಡಬೇಕು ಎಂದು ಉಡುಪಿ ಡಿಸಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಸರಕಾರದಿಂದ ಇದಕ್ಕೆ ಈವರೆಗೂ ಯಾವುದೇ ಸ್ಪಂದನ ದೊರೆತಿಲ್ಲ.

ಕರಾವಳಿಗಿಲ್ಲ
ನಿಯಮದಲ್ಲಿ ವಿವರಿಸಿದ ಮಾದರಿಯ ಪಂಗಡ ದ.ಕ., ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯದ ಕಾರಣ ಯಾವುದೇ ಹಕ್ಕುಪತ್ರ ವಿತರಣೆಯಾಗಿಲ್ಲ. ಜನಪ್ರತಿನಿಧಿಗಳು ಖುದ್ದು ಆಸಕ್ತಿ ವಹಿಸಿ ಈ ಕಾಯ್ದೆಯಲ್ಲಿ ಸ್ವಲ್ಪ ತಿದ್ದುಪಡಿಗೆ ಸೂಚಿಸುತ್ತಿದ್ದರೂ ಸಾವಿರಾರು ಮಂದಿಗೆ ಇದು ಪ್ರಯೋಜನಕ್ಕೆ ದೊರೆಯುತ್ತಿತ್ತು. ಕೃಷಿಕೂಲಿ ಕಾರ್ಮಿಕರು, ಮೀನುಗಾರ ಕುಟುಂಬದವರು, ಆದಿವಾಸಿಗಳು ಮೊದಲಾದವರನ್ನು ಸೇರಿಸುತ್ತಿದ್ದರೆ ಇಲ್ಲಿಯೂ ಅರ್ಹರ ಸಂಖ್ಯೆ ಇತ್ತು.

Advertisement

ಸಚಿವರ ಭರವಸೆ
ಈ ಹಿಂದಿನ ಎಸಿ ಭೂಬಾಲನ್‌ ಅವರು ಖಾರ್ವಿಕೇರಿ ಜನರಿಗೆ ಹಕ್ಕುಪತ್ರ ಕೊಡಿಸಬೇಕೆಂದು ಪ್ರಯತ್ನಿಸಿದರು. 127 ಮಂದಿ ಅರ್ಜಿ ನೀಡಿದ್ದು ಜಿಲ್ಲಾಧಿಕಾರಿಗೆ ಮುಂದಿನ ಕ್ರಮಕ್ಕೆ ಕಳುಹಿಸಿದ್ದರು. ಅಲ್ಲಿಂದ ಕಡತ ಎಸಿ ಕಚೇರಿಗೆ ಬಂದಿದ್ದು ಎಸಿ ಆಗಿರುವ ಕೆ. ರಾಜು ಅವರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ ಅವರಿಗೆ ರವಾನಿಸಿದ್ದರು. 8-10 ಮಾತ್ರ ಆಕ್ಷೇಪಣೆಗಳು ಬಂದಿದ್ದು ಇತರ ಅರ್ಜಿಗಳಿಗೆ ಸಮಸ್ಯೆಯಿರಲಿಲ್ಲ. ಖುದ್ದು ಕಂದಾಯ ಸಚಿವ ಆರ್‌. ಅಶೋಕ್‌ ಅವರು ಕೂಡ ಅಧಿಕಾರಿಗಳ ಬಳಿ ಈ ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದ್ದರು.

ಇಂದು ಸಭೆ
94ಡಿ ಸೌಲಭ್ಯವನ್ನು ಕರಾವಳಿ ಜಿಲ್ಲೆಗೆ ಒದಗಿಸಿಕೊಡಲು ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕಾಗುತ್ತದೆ. 10 ಮನೆಗಳಿಗಿಂತ ಹೆಚ್ಚು ಇರುವ ತಾಂಡಾದಂತಹ ಪ್ರದೇಶ ಈ ಭಾಗದಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಅ.21ರಂದು ಅಧಿಕಾರಿಗಳ ಸಭೆ ನಡೆಸುತ್ತೇನೆ. ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇನೆ. – ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ, ಮೀನುಗಾರಿಕ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next