ಕೂಡ್ಲಿಗಿ: ನುಡಿದಂತೆ ನಡೆದ ಸರ್ಕಾರ ಒಂದಿದ್ದರೆ, ಅದು ಕಾಂಗ್ರೆಸ್ ಸರ್ಕಾರ. ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಸರ್ಕಾರದ ಸಾಧನೆಗಳೇ ನಮಗೆ ಶ್ರೀರಕ್ಷೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೂಡ್ಲಿಗಿ ಕ್ಷೇತ್ರದ ಕಾನಾಹೊಸಹಳ್ಳಿ ಪಟ್ಟಣದ ಹೊರ ವಲಯದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ರಘು ಗುಜ್ಜಲ್ ಪರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಹಸಿವಿನಿಂದ ಬಳಲಬಾರದು ಎಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಯಿತು. ಅಲ್ಲದೇ, ಅನಿಲಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಜನತೆಗೆ ಸ್ಪಂದಿಸಲಾಗಿದೆ ಎಂದರು.
ಯುವಕರಿಗೆ ಆದ್ಯತೆ ನೀಡುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕೂಡ್ಲಿಗಿ ಕ್ಷೇತ್ರದಲ್ಲಿ ರಘು ಗುಜ್ಜಲ್ ಅವರಿಗೆ ಟಿಕೆಟ್ ನೀಡಿದ್ದು, ತಾವೆಲ್ಲರೂ ಅತಿ ಹೆಚ್ಚು ಮತ ಕೊಟ್ಟು ನಿಮ್ಮ ಯುವಕನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಲಂಚ ಪಡೆದು ಜೈಲಿಗೆ ಹೋದವರು. ಅಂತವರಿಗೆ ಮತ್ತೆ ಅಧಿಕಾರ ಕೊಟ್ಟರೆ ನಮ್ಮ ರಾಜ್ಯ ಅವನತಿಗೆ ಕಾರಣವಾಗುತ್ತದೆ.ಆದ್ದರಿಂದ ಈ ಬಾರಿಯೂ ಕಾಂಗ್ರೆಸ್ ಬೆಂಬಲಿಸಿದರೆ ನಾನೇ ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ನಿಮ್ಮ ಸೇವೆ ಮಾಡುವ ಅವಕಾಶ ಸಿಗಲಿದೆ ಎಂದರು. ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿದ್ದು, ಕೂಡ್ಲಿಗಿ ತಾಲೂಕು ಸೇರಿದಂತೆ ಬಯಲು ಸೀಮೆಯ ನಾಲ್ಕು ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿಲ್ಲ. ಬದಲಾಗಿ ಯಡಿಯೂರಪ್ಪ ಜೈಲು ಸೇರಿದರು ಎಂದು ವ್ಯಂಗ್ಯವಾಡಿದರು.
ಶಾಸಕ ಬಿ. ನಾಗೇಂದ್ರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಮತ್ತೂಂದು ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಆದ್ದರಿಂದ ಅಭಿವೃದ್ಧಿ ಪರವಾದ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಕೋರಿದರು.
ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಆರ್.ಮಂಜುನಾಥ, ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ್, ಜಿಪಂ ಸದಸೆ ಆಶಾ ತಿಪ್ಪೇಸ್ವಾಮಿ, ಎಸ್.ವೆಂಕಟೇಶ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗುಂಡುಮುಣುಗು ತಿಪ್ಪೇಸ್ವಾಮಿ, ರಾಬಕೊ ಹಾಲು ಒಕ್ಕೂಟದ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಳಿಗಿ ವೀರೇಂದ್ರ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ವೀರೇಶ್ ಬಾಬು, ಕುರಿ ಉಣ್ಣೆ ನಿಗಮದ ಅಧ್ಯಕ್ಷ ಕೃಷ್ಣ, ಜಿಲ್ಲಾ ಎಸ್ಟಿ ಮಹಿಳಾ ಘಟಕದ
ಅಧ್ಯಕ್ಷೆ ಜಿ.ನಾಗಮಣಿ, ಗ್ರಾಪಂ ಅಧ್ಯಕ್ಷ ಎಂ.ದುರುಗಪ್ಪ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು ಇದ್ದರು.
ಎತ್ತಿನ ಗಾಡಿಗಳ ಮೆರವಣಿಗೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಗ್ರಾಮದ ನೂತನ ಬಸ್ ನಿಲ್ದಾಣದಿಂದ ಆರಂಭವಾದ ಎತ್ತಿನ ಗಾಡಿಗಳ ಮೆರವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಘು ಗುಜ್ಜಲ್, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.
ಕಾದು ಕಾದು ಹೈರಾಣಾದ ಜನ ಸಂಜೆ 5 ಗಂಟೆಗೆ ಬರಬೇಕಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾತ್ರಿ 9ರ ಸುಮಾರಿಗೆ ಬಂದಿದ್ದರಿಂದ ಕಾರ್ಯಕ್ರಮದಲ್ಲಿ ಸೇರಿದ್ದ ಸಾವಿರಾರು ಜನ ಕಾದು ಕಾದು ಮನೆಗೆ ವಾಪಾಸಾದರು.