Advertisement

ಕೊಡಗಿನತ್ತ ಸರ್ಕಾರ ದೌಡು;ಇನ್ನೂ ನಿಂತಿಲ್ಲ ಗುಡ್ಡಗಳ ಕುಸಿತದ ಆತಂಕ

06:00 AM Aug 19, 2018 | Team Udayavani |

ಬೆಂಗಳೂರು/ಮಡಿಕೇರಿ: ಮಂಜಿನ ನಗರಿ, ಪ್ರವಾಸಿಗರ ಸ್ವರ್ಗ,ದಕ್ಷಿಣದ ಕಾಶ್ಮೀರ ಎಂದೆಲ್ಲಾ ಖ್ಯಾತಿ ಪಡೆದಿದ್ದ ಕೊಡಗು ವರುಣನ ಆರ್ಭಟಕ್ಕೆ ಅಕ್ಷರಶಃ ಮುಳುಗಿ ಹೋಗಿದ್ದು, ಮುಖ್ಯಮಂತ್ರಿ,ಮುಖ್ಯ ಕಾರ್ಯದರ್ಶಿ ಸಹಿತ ಇಡೀ ಸರ್ಕಾರವೇ ನೆರವಿಗೆ ಧಾವಿಸಿದೆ.

Advertisement

ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗಾಗಿ ಕೇಂದ್ರದ ರಕ್ಷಣಾ ಪಡೆಗಳು ಬಂದಿಳಿದು ಮಳೆಯಲ್ಲಿ ಸಿಲುಕಿರುವ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಕಾರ್ಯದಲ್ಲಿ ತೊಡಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಶನಿವಾರ ಉನ್ನತ ಮಟ್ಟದ ಸಭೆ ನಡೆಸಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಸೂಚನೆ ನೀಡಿ ಕೊಡಗಿಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿ ಮಳೆಯಿಂದ ಉಂಟಾಗಿರುವ ಅನಾಹುತ ವೀಕ್ಷಿಸಿದರು. ವಾಯುಪಡೆ ವಿಮಾನದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪಿರಿಯಾಪಟ್ಟಣ ಹೆಲಿಪ್ಯಾಡ್‌ನ‌ಲ್ಲಿ ಇಳಿದು ಮಡಿಕೇರಿಗೆ ರಸ್ತೆ ಮಾರ್ಗವಾಗಿ ತೆರಳಿ ಮಳೆ ಅನಾಹುತ ಖುದ್ದು ಪರಿಶೀಲಿಸಿದರು. ಈ ಮಧ್ಯೆ ಭೂಕುಸಿತದಲ್ಲಿ ಸಿಲುಕಿರುವ 60 ಮಂದಿ ರಕ್ಷಣೆಗೆ ಸಿಎಂ ಅವರು ಆಗಮಿಸಿದ್ದ ಹೆಲಿಕಾಪ್ಟರ್‌ ಅನ್ನು ಬಳಕೆ ಮಾಡುತ್ತಿರುವುದರಿಂದ ಭಾನುವಾರವೂ ಕುಮಾರಸ್ವಾಮಿ ಅವರು ಕೊಡಗಿನಲ್ಲೇ ಉಳಿಯಲಿದ್ದಾರೆ. ಹೀಗಾಗಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಪ್ರವಾಸ ರದ್ದು ಪಡಿಸಿದ್ದಾರೆ.

ವಾಡಿಕೆಗಿಂತ ಶೇ.43 ರಷ್ಟು ಮಳೆ ಹೆಚ್ಚಾಗಿರುವುದರಿಂದ ಇಡೀ ಜಿಲ್ಲೆ ಜಲಾವೃತಗೊಂಡಿದ್ದು, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ದಿನದ 24 ಗಂಟೆ ಸಹಾಯವಾಣಿ ಕೇಂದ್ರ ತೆರೆದು ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌  ನೇತೃತ್ವದಲ್ಲಿ ರಚನೆಯಾಗಿರುವ ವಿಶೇಷ ತಂಡ ಪ್ರತಿಕ್ಷಣದ ಮಾಹಿತಿ ಪಡೆಯುತ್ತಿದೆ.

ಈ ಮಧ್ಯೆ,ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆಯಿಂದ ಕೊಡಗಿಗೆ ನೆರವಿನ ಮಹಾಪೂರವೂ ಹರಿಯುತ್ತಿದೆ. ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿ  ನಿಧಿಗೆ ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯದಲ್ಲಿ ಮೈ ಮರೆತಿಲ್ಲ, ಪರಿಹಾರ ಕಾರ್ಯದಲ್ಲಿ ಕೈ ಚೆಲ್ಲಿ ಕುಳಿತಿಲ್ಲ. ಯುದೊœàಪಾದಿಯಲ್ಲಿ ಆಡಳಿತ ಯಂತ್ರ ಕೆಲಸ ಮಾಡುತ್ತಿದೆ. ರಕ್ಷಣಾ ಕಾರ್ಯದಲ್ಲಿ 948 ಜನ ತೊಡಗಿಸಿಕೊಂಡಿದ್ದಾರೆ. ಈವರೆಗೆ 3,500 ಜನರನ್ನು ರಕ್ಷಿಸಲಾಗಿದೆ. 31 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾನಿಯ ಬಗ್ಗೆ 3 ದಿನಗಳಲ್ಲಿ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾಹಿತಿ ಬಂದ ಮೇಲೆ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇನೆ. ಖುದ್ದು ನಾನೇ ಗೃಹ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಸಹ ಕೊಡಗಿನಲ್ಲೇ ಮೊಕ್ಕಾಂ ಹೂಡಿ ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸಿದ್ದಾರೆ.

ಮತ್ತೂಂದೆಡೆ ಬೆಂಗಳೂರು, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತ್ರಸ್ತರ ನಿಧಿ ಸ್ಥಾಪಿಸಿ ಪರಿಹಾರ ಸಾಮಗ್ರಿ ಸ್ವೀಕಾರ ಕೇಂದ್ರ ತೆರೆಯಲಾಗಿದ್ದು ಕೈಗಾರಿಕೆಗಳು,  ಉದ್ಯಮಿಗಳು, ಸಾರ್ವಜನಿಕರು ಆಹಾರ, ಉಡುಪು, ಕುಡಿಯುವ ನೀರು ನೀಡಬಹದು ಎಂದು  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಸರ್ಕಾರವಷ್ಟೇ ಅಲ್ಲದೆ ರಾಜಕೀಯ ಪಕ್ಷಗಳು. ಸಂಘ-ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಕೊಡಗು ಜನರಿಗೆ ನೆರವಾಗಲು ಸಾರ್ವಜನಿಕರಿಂದ ಆಹಾರ ಪದಾರ್ಥ, ಉಡುಪು ಸ್ವೀಕರಿಸಿ ರವಾನೆ ಮಾಡುತ್ತಿವೆ.ಇದೇ ವೇಳೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಮಳೆಯಿಂದ ತೊಂದರೆಗೊಳಗಾಗಿರುವ ಕೊಡಗು ಜಿಲ್ಲೆಗೆ ತೆರಳಿ ಸಂತ್ರಸ್ತರ ಅಹವಾಲು ಸ್ವೀಕರಿಸಲಿದ್ದಾರೆ.

ಹೆಚ್ಚುವರಿ 200 ಕೋಟಿ ರೂ. ಬಿಡುಗಡೆ
ಕೊಡಗು ಜಿಲ್ಲೆಗೆ ಈಗಾಗಲೇ 100 ಕೋಟಿ ರೂ. ವಿಶೇಷ ಪರಿಹಾರ ಘೋಷಣೆ ಮಾಡಲಾಗಿದ್ದು, ಅದರಲ್ಲಿ 31 ಕೋಟಿ ರೂ. ಹಣ ಬಿಡುಗಡೆ ಸಹ ಆಗಿದೆ. ಈಗ ಇನ್ನೂ 200 ಕೋಟಿ ರೂ. ಅವಶ್ಯಕತೆ ಇದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಇದನ್ನು ಪರಿಶೀಲಿಸಿ ಹಣ ಬಿಡುಗಡೆ ಮಾಡುವ ಅಧಿಕಾರವನ್ನು ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ನೀಡಲಾಗಿದೆ.

ಚುನಾವಣೆಗೆ ತಡೆ
ಭಾರಿ ಮಳೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ ಪಟ್ಟಣ ಪಂಚಾಯಿತಿಗಳಿಗೆ ಈ ತಿಂಗಳ 31ರಂದು ನಡೆಯಬೇಕಿದ್ದ ಸಾರ್ವತ್ರಿಕ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ತಡೆ ಹಿಡಿದಿದೆ. ಚುನಾವಣೆಯನ್ನು ಮುಂದೂಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರು. ಅದರಂತೆ, ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಚುನಾವಣೆಯನ್ನು ತಡೆ ಹಿಡಿಯಲಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಮಣ್ಣಿನಡಿ ಶವ ಪತ್ತೆ
ಸುಳ್ಯ:
ಜೋಡುಪಾಲದಲ್ಲಿ ಗುಡ್ಡ ಕುಸಿತದಿಂದ ಜನಜೀವನ ತತ್ತರಗೊಂಡಿದೆ. ಧಾರಾಕಾರವಾಗಿ ಹರಿದು ಬರುತ್ತಿರುವ ಕೆಸರು ನೀರಿನ ನಡುವೆ ರಕ್ಷಣಾ ಕಾರ್ಯ ಸಾಗಿದೆ. ಮಣ್ಣಿನಡಿ ಸಿಲುಕಿದ್ದ ಯುವತಿಯೊಬ್ಬರ ಶವ ಶನಿವಾರ ಪತ್ತೆಯಾಗಿದೆ. ಬಸಪ್ಪ ಎಂಬುವರ ಪುತ್ರಿ ಈಕೆ.

ಈ ಮಧ್ಯೆ, ರಾಷ್ಟ್ರೀಯ ವಿಪತ್ತು ಪಡೆ, ದ.ಕ. ಮತ್ತು ಕೊಡಗು ಪೊಲೀಸ್‌ ಪಡೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಶುಕ್ರವಾರ ರಾತ್ರಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಶನಿವಾರ ಮುಂಜಾನೆಯಿಂದ ಮುಂದುವರಿಯಿತು.

ಇನ್ನು ಕೊಡಗಿನಲ್ಲಿ ಮಳೆ ಶನಿವಾರ ಅಲ್ಪ ಕಡಿಮೆಯಾಗಿದ್ದರೂ ಗುಡ್ಡ ಕುಸಿತ ನಿಂತಿಲ್ಲ. ಸೋಮವಾರುಪೇಟೆ ಮುಕ್ಕೋಡ್ಲು ಸಮೀಪ ಇಕ್ಕೋಡ್ಲುವಿನಲ್ಲಿ ರಕ್ಷಣಾ ಕಾರ್ಯದಲ್ಲಿ ಸೈನಿಕರು ನಿರತರಾಗಿದ್ದಾಗಲೇ ಗುಡ್ಡ ಕುಸಿದು ಆತಂಕದ ಸ್ಥಿತಿ ನಿರ್ಮಾಣವಾಯಿತು. ಕೆಲವು ತಾಸುಗಳ ವರೆಗೆ ಸೈನಿಕರು ಸಂಪರ್ಕಕಕ್ಕೆ ಸಿಗದೆ ಅಲ್ಲಿ ಏನಾಯಿತೆಂದೇ ತಿಳಿಯಲಿಲ್ಲ. ಅನಂತರ ಅವರನ್ನು ಸಂಪರ್ಕಿಸಲಾಯಿತು.
ಅಂಗಲಾಚುತ್ತಿರುವ ಜನ: ಸೋಮವಾರಪೇಟೆ ಮುಕ್ಕೋಡ್ಲುವಿನ ಒಂದು ಗುಡ್ಡದ ತುದಿಯಲ್ಲಿ ಸುಮಾರು 60 ಮಂದಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿಗೆ ಶನಿವಾರ ಸಂಜೆಯವರೆಗೂ ರಕ್ಷಣಾ ಕಾರ್ಯಕರ್ತರಿಗೆ ತೆರಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಅತ್ತ ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್‌ ಜಾಮ್‌ ಆಗಿ ಜನ ಹರಸಾಹಸ ಪಟ್ಟರು. ಭಾರೀ ವಾಹನಗಳ ಓಡಾಟದ ಬಗ್ಗೆ ಆದ ಗೊಂದಲ ಇನ್ನಷ್ಟು ಟ್ರಾಫಿಕ್‌ ಜಾಮ್‌ಗೆ ಕಾರಣವಾಯಿತು. ಹೀಗಾಗಿ 5 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next