Advertisement

ಕೇರಳ ರಾಜ್ಯದ ಒತ್ತಡಕ್ಕೆ ಮಣಿಯದ ಸರ್ಕಾರ

08:15 AM Mar 07, 2018 | Team Udayavani |

ಬೆಂಗಳೂರು: ಬಂಡೀಪುರ ಹುಲಿ ಯೋಜನೆ ಪ್ರದೇಶದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸಬೇಕೆಂಬ ಕೇರಳದ ಒತ್ತಡಕ್ಕೆ ಮಣಿಯದ ರಾಜ್ಯ ಸರ್ಕಾರ, ಈಗಿರುವಂತೆ ಯಥಾಸ್ಥಿತಿ 
ಮುಂದುವರಿಸಲು ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ನಗರದಲ್ಲಿ ನಡೆದ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅರಣ್ಯಾಧಿಕಾರಿಗಳು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ.

Advertisement

ಸುಮಾರು ಎರಡು ಗಂಟೆ ಕಾಲ ನಡೆದ ಸಭೆಯಲ್ಲಿ ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸುವಂತೆ ಕೇರಳ ಸರ್ಕಾರದ ಅಧಿಕಾರಿಗಳು ವಿವಿಧ ಕಸರತ್ತು ನಡೆಸಿದರಾದರೂ ರಾಜ್ಯದ ಅಧಿಕಾರಿಗಳು
ಮಣಿಯಲಿಲ್ಲ. ಹೀಗಾಗಿ ಕೇರಳದ ಅಧಿಕಾರಿಗಳು ಸುಮ್ಮನಾಗಬೇಕಾಯಿತು. ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿದ ಬಳಿಕ ಪರ್ಯಾಯ ರಸ್ತೆ ಅಭಿವೃದ್ದಿಪಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದೀರಿ. ಅದರಂತೆ ಮೈಸೂರು-ಹುಣಸೂರು- ಗೋಣಿಕೊಪ್ಪ-ಕುಟ್ಟ ಮೂಲಕ ಕೇರಳಕ್ಕೆ ಪರ್ಯಾಯ ರಸ್ತೆ ಅಭಿವೃದ್ದಿಪಡಿಸಲಾಗಿದೆ. ಹೀಗಾಗಿ ಮತ್ತೆ ರಾತ್ರಿ ವಾಹನ ಸಂಚಾರ ಪುನಾರಂಭಿಸಲು ಸಾಧ್ಯವಿಲ್ಲ ಎಂದು ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಹೇಳಿದರು.

ತಜ್ಞರ ವರದಿಗೆ ತರಾಟೆ: ಆದರೆ, ಪರ್ಯಾಯ ರಸ್ತೆಯಿಂದಾಗಿ ವಾಹನಗಳು 80 ಕಿ.ಮೀ. ಹೆಚ್ಚು ದೂರ ಕ್ರಮಿಸ ಬೇಕಾಗಿದೆ. ಹೀಗಾಗಿ ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ವಾಪಸ್‌ ಪಡೆಯಬೇಕೆಂದು ವಾದಿಸಿದ ಕೇರಳದ ಅಧಿಕಾರಿಗಳು, ಈ ಕುರಿತು ಪ್ರೊ.ಈಶ ಎಂಬುವರು ಸಮೀಕ್ಷೆ ನಡೆಸಿದ್ದಾರೆ. ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರದಿಂದ ಪ್ರಾಣಿಗಳಿಗೆ ತೊಂದರೆ ಯಿಲ್ಲ ಎಂದು ಹೇಳಿದ್ದಾರೆ ಎಂದರು. ಇದರಿಂದ ಕೆರಳಿದ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜಯರಾಮ್‌ ಅವರು, ರಾಜ್ಯ ಅರಣ್ಯ ಇಲಾಖೆ ಅನುಮತಿ ಇಲ್ಲದೆ ರಾಜ್ಯದಲ್ಲಿ ಹೇಗೆ ಸಮೀಕ್ಷೆ ನಡೆಸಿದ್ದಾರೆ. ಇದು
ಕಾನೂನು ಬಾಹಿರ ಎಂದು ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ರಾತ್ರಿ ಸಂಚಾರ ನಿಷೇಧ ತೆರವು ಸಾಧ್ಯವಿಲ್ಲವೆಂಬ ರಾಜ್ಯ ಸರ್ಕಾರದ ನಿಲುವಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಸೇರಿ ಬಹುತೇಕ ಎಲ್ಲರೂ ಬೆಂಬಲ
ವ್ಯಕ್ತಪಡಿಸಿದರು. ಬಳಿಕವಷ್ಟೇ ಕೇರಳದ ಅಧಿಕಾರಿಗಳು ಸುಮ್ಮನಾದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌, ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್‌, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ
ಅರಣ್ಯ ಸಂರಕ್ಷಣಾಧಿಕಾರಿ ಜಯರಾಂ, ವನ್ಯಜೀವಿ ಮಂಡಳಿ ಸದಸ್ಯರು, ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು, ವೈನಾಡ್‌
ಜಿಲ್ಲಾಧಿಕಾರಿ ಅಂಬಾಡಿ ಮಾಧವ್‌, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಡಿಐಜಿ ಸಂಜಯ್‌ ಕುಮಾರ್‌, ಐಜಿ ಸೋಮಶೇಖರ್‌ ಮತ್ತಿತರರು ಇದ್ದರು.

ಸಭೆಗೆ ನುಗ್ಗಿದ ವಾಟಾಳ್‌ 
ಅಧಿಕಾರಿಗಳು ನಡೆಸುತ್ತಿದ್ದ ಸಭೆ ಮುಕ್ತಾಯವಾಗುವ ವೇಳೆ ಏಕಾಏಕಿ ಒಳನುಗ್ಗಿದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌, ಕೇರಳ ಲಾಬಿಗೆ ರಾಜ್ಯದ ಅಧಿಕಾರಿಗಳು ಮಣಿಯಬಾರದು ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಇನ್ನೊಂದೆಡೆ ಸುಮಾರು 50ಕ್ಕೂ ಹೆಚ್ಚು ಪರಿಸರವಾದಿಗಳು ಅರಣ್ಯ ಭವನದ ಎದುರು ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ
ವಾಹನ ಸಂಚಾರ ನಿಷೇಧ ತೆರವು ಗೊಳಿಸಬಾರದೆಂದು ಒತ್ತಾಯಿಸಿ ಧರಣಿ ನಡೆಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next