Advertisement

ಪಾಲುದಾರ ಪಕ್ಷಗಳ ನಾಯಕರಿಂದಲೇ ಸರ್ಕಾರ ಬಿತ್ತು

09:38 PM Aug 04, 2019 | Lakshmi GovindaRaj |

ಮೈಸೂರು: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಪತನ ಅಥವಾ ಮತ್ತೂಂದು ಸರ್ಕಾರದ ರಚನೆಗೆ ರಾಜೀನಾಮೆ ಕೊಟ್ಟಿರುವ 20 ಜನ ಶಾಸಕರುಗಳಾಗಲಿ, ಬಿಜೆಪಿಯಾಗಲಿ ಕಾರಣವಲ್ಲ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರೇ ನೇರ ಹೊಣೆಗಾರರು ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಅಡಗೂರು ಎಚ್‌.ವಿಶ್ವನಾಥ್‌ ದೂರಿದರು.

Advertisement

ರಾಜ್ಯದಲ್ಲಿ ನಡೆದ ರಾಜಕೀಯ ಘಟನಾವಳಿಗಳ ಹಿನ್ನೆಲೆಯಲ್ಲಿ ಕಳೆದ 33 ದಿನಗಳಿಂದ ಕರ್ನಾಟಕದಿಂದ ಹೊರಗಿದ್ದ ವಿಶ್ವನಾಥ್‌ ಅವರು ಭಾನುವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ರಾಜೀನಾಮೆ, ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದ ಅವರು, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕ್ಷಮೆ ಕೋರುತ್ತಲೇ, ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಸಾ.ರಾ.ಮಹೇಶ್‌ ವಿರುದ್ಧ ಕಿಡಿಕಾರಿದರು.

ನಾವ್ಯಾರು ಪದವಿಗಾಗಿ ಪದತ್ಯಾಗ ಮಾಡಿದವರಲ್ಲ. ಇದು ಆಪರೇಷನ್‌ ಕಮಲ ಅಲ್ಲ. ಮನಸ್ಸಿಗೆ ಘಾಸಿಯಾದಾಗ ಈ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕಾಯ್ತು. ಶಾಸಕರನ್ನು ಕಡೆಗಣಿಸಿ, ನಮ್ಮನ್ನು ಅಗೌರವದಿಂದ ನಡೆಸಿಕೊಳ್ಳಲಾಯಿತು. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರಲ್ಲಿ ಸಮನ್ವಯವೇ ಇಲ್ಲದೇ ಪರಸ್ಪರ ಸಂಶಯಕ್ಕೆ ಕಾರಣವಾಗಿದ್ದರು. ಪಾಲುದಾರ ಪಕ್ಷಗಳವರು ನಾಯಕರ ರೀತಿ ಇರಲಿಲ್ಲ. ಮಾಲೀಕರ ರೀತಿಯಲ್ಲಿದ್ದರು. ನಮ್ಮನ್ನು ಲಘುವಾಗಿ ಕಂಡ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ಪತನವಾಗಿದ್ದು ಎಂದರು.

ಹಣಕ್ಕೆ ಮಾರಿಕೊಂಡಿಲ್ಲ: ಮೂವರು ಮಂತ್ರಿಗಳು ಸೇರಿದಂತೆ ಆಳುವ ಪಕ್ಷದ 20 ಶಾಸಕರು ರಾಜೀನಾಮೆ ಕೊಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಇತಿಹಾಸ. ನಾವ್ಯಾರು ಅತೃಪ್ತರಲ್ಲ, ದುಡ್ಡಿಗಾಗಿ ಮಾರಿಕೊಂಡವರೂ ಅಲ್ಲ. ನೀವೇ ಅತೃಪ್ತರು. ಸಮ್ಮಿಶ್ರ ಸರ್ಕಾರದ ಕಾರ್ಯಭಾರದ ಬಗ್ಗೆ ರಾಜ್ಯದ ಜನರಿಗೆ ಅತೃಪ್ತಿ ಇದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಸಿದ್ದರಾಮಯ್ಯ ಶಿಷ್ಯರು ಪದೇ ಪದೆ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನಾವು ಒಪ್ಪಲ್ಲ. ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಅನ್ನುತ್ತಿದ್ದರು. ಇದೆಲ್ಲ ಕ್ರೋಢೀಕೃತವಾಗಿ ಸಮ್ಮಿಶ್ರ ಸರ್ಕಾರದ ಪತನವಾಯಿತು ಎಂದು ಹೇಳಿದರು.

ಸಾ.ರಾ. ಅಪ್ರಬುದ್ಧ: ಮಂತ್ರಿಯಾಗಿದ್ದ ಸಾ.ರಾ.ಮಹೇಶನಂತಹ ಅಪ್ರಬುದ್ಧ ದುಡ್ಡಿಗಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ ಅನ್ನುತ್ತಾನೆ. ರಾಜೀನಾಮೆ ಕೊಟ್ಟ 20 ಜನರೂ ದುಡ್ಡಿಗಾಗಿ ಮಾರಿಕೊಂಡವರಲ್ಲ. ಅವಮಾನ ಸಹಿಸಲಾರದೆ ಹೊರಬಂದೆವೇ ಹೊರತು ದುಡ್ಡಿಗಾಗಿ ಅಲ್ಲ. ಸಾವಿರಾರು ಕೋಟಿ ಮೊತ್ತದ ಆಸ್ತಿ ಘೋಷಿಸಿಕೊಂಡಿರುವ ಎಂ.ಟಿ.ಬಿ.ನಾಗರಾಜ್‌ ಅಂಥವರೂ ನಮ್ಮ ಜೊತೆಗಿದ್ದಾರೆ. ನಿಮ್ಮ ತಪ್ಪಿನಿಂದ ಸರ್ಕಾರ ಪತನವಾದರೆ, ಜನರನ್ನು ದಿಕ್ಕು ತಪ್ಪಿಸಲು ದುಡ್ಡಿನಿಂದ ಈ ಸರ್ಕಾರ ಪತನವಾಯಿತು ಎಂದು ಕತೆ ಕಟ್ಟುತ್ತೀರಿ ಎಂದು ಜರಿದರು.

Advertisement

ಕಾನೂನು ಉಲ್ಲಂಘನೆ: ತಮ್ಮನ್ನು ತಾವು ಸಂತ, ಮಹಾತ್ಮ ಎಂದು ಕೊಂಡಿರುವ ರಮೇಶ್‌ಕುಮಾರ್‌, ವಿಧಾನಸಭಾಧ್ಯಕ್ಷರಾಗಿ ಸದನದಲ್ಲಿ ಇಲ್ಲದ ನಮ್ಮ ಬಗ್ಗೆ ಮಾತನಾಡಲು ಅವಕಾಶ ನೀಡಿದ್ದೇ ತಪ್ಪು. ಸಂಪ್ರದಾಯ, ಕಾನೂನು ಎಲ್ಲವನ್ನೂ ಉಲ್ಲಂ ಸಿ ನಮ್ಮಗಳ ಬಗ್ಗೆ ಸದನದಲ್ಲಿ ಮಾತನಾಡಿದರು. ಅವನೇನೋ ವಿಶ್ವನಾಥ ಒಂದೆರಡು ಸಾರಿ ಗೆದ್ದಿದ್ದನಂತೆ ಎಂದು ಲಘುವಾಗಿ ಮಾತನಾಡಿದರು. ಸಂವಿಧಾನ ಉಲ್ಲಂ ಸುತ್ತ¤ಲೇ ಸಂವಿಧಾನ ರಕ್ಷಣೆ ಬಗ್ಗೆ ಭಾಷಣ ಮಾಡುತ್ತಾರೆ ಎಂದು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ನಡೆಯನ್ನು ಟೀಕಿಸಿದರು.

ವಿಷ ಉಣಿಸಿದ್ದು ಸಾ.ರಾ.: ಮಂಡ್ಯ ಜಿಲ್ಲೆಯ ಜನತೆ ವಿಷ ಉಣಿಸಿದರು ಎಂದು ಎಚ್‌.ಡಿ.ಕುಮಾರಸ್ವಾಮಿ ಮಾತನಾಡುತ್ತಾರೆ. ಆದರೆ, ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ಸಾ.ರಾ.ಮಹೇಶ್‌, ಆತ ಕಿವಿಯೂದಿದ್ದನ್ನು ಕೇಳಿ ಕುಮಾರಸ್ವಾಮಿ ಹಾಳಾದರು. ಕುಮಾರಸ್ವಾಮಿ ಒಳ್ಳೆಯ ನಾಯಕ, ಆದರೆ ಈ ಎಲ್ಲಾ ಬೆಳವಣಿಗೆಗಳಿಂದ ರೋಸಿ ಹೋಗಿದ್ದಾರೆ. ಬೇಸರದಿಂದ ಏನೇನೋ ಮಾತನಾಡುತ್ತಾರೆ ಎಂದರು.

ಚರ್ಚೆಗೆ ಸಿದ್ಧ – ವಿಶ್ವನಾಥ್‌ ಸವಾಲು: ಸಾರ್ವಜನಿಕ ಜೀವನದಲ್ಲಿರಬೇಕಾದ ನಡವಳಿಕೆ, ರಾಜಕೀಯ ಸಂಸ್ಕೃತಿಯೇ ಗೊತ್ತಿಲ್ಲದ ಸಾ.ರಾ.ಮಹೇಶ್‌, ನಂಬಿಸುವ ಸಲುವಾಗಿ ಸದನದಲ್ಲಿ ನಿಂತು ತಾಯಿ, ಮಕ್ಕಳ ಮೇಲೆ ಆಣೆ ಹಾಕುತ್ತಾನೆ. ಅವನಿಗೇನಾದರೂ ಚರಿತ್ರೆ ಇದೆಯಾ? ಒಬ್ಬ ಮಂತ್ರಿನಾ ನೀನು, ಥೂ ನಿನಗೆ ಎಂದು ವಿಶ್ವನಾತ್‌ ಜಾಡಿಸಿದರು.  26 ಕೋಟಿಗೆ ವಿಶ್ವನಾಥ್‌ ಸೇಲ್‌ ಆಗಿದ್ದಾರೆ ಎಂದು ಮೈಸೂರಿನ ಪತ್ರಕರ್ತನೊಬ್ಬನನ್ನು ಮುಂದಿಟ್ಟುಕೊಂಡು ಸುದ್ದಿ ಮಾಡಿಸಿದ್ದ, ನಾನಲ್ಲ ಮಾರಿಕೊಂಡದ್ದು ಆ ಪತ್ರಕರ್ತ, ಅವರ ಮೂಲಕವೇ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ವ್ಯಕ್ತಿತ್ವ ಹರಣಕ್ಕೆ ಮುಖ್ಯಮಂತ್ರಿಯಾಗಿದ್ದವರು ಯತ್ನಿಸಿದರು.

ರಾಜಕಾರಣ ನಂಬಿಕೆ ಮೇಲೆ ನಡೆಯುತ್ತೆ. ಬಹಳ ತೊಂದರೆಯಲ್ಲಿದ್ದೀನಿ ಅಂತಾ ಮುಖ್ಯಮಂತ್ರಿಯಾಗಿದ್ದವರ ಬಳಿ ಹತ್ತಾರು ಬಾರಿ ಹೇಳಿದ್ದೆ ಎಂದರು. ಸದನದಲ್ಲಿ ಮಾತನಾಡಿದರೆ ಕೇಳುವಂತಿಲ್ಲ ಎಂದು ಸಾ.ರಾ. ಮಹೇಶ್‌ ನಮ್ಮ ಬಗ್ಗೆ ಹಾಗೆಲ್ಲ ಮಾತನಾಡಿದ್ದಾನೆ. ಹೊರಗಡೆ ಬಂದು ಮಾತನಾಡಲಿ, ನಾನು ಸಾ.ರಾ.ಮಹೇಶ್‌ಗೆ ದೇವಸ್ಥಾನಕ್ಕೆ ಕರೆಯಲ್ಲ, ಬೆಂಗಳೂರು ಅಥವಾ ಮೈಸೂರಿನ ಪ್ರಸ್‌ಕ್ಲಬ್‌ಗ ಬಾ, ಚರ್ಚೆ ಮಾಡೋಣ, ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next