Advertisement

ಭೂಕಂಪ ಅನಾಹುತಕ್ಕೆ ಸರ್ಕಾರವೇ ಹೊಣೆ

10:18 AM Oct 10, 2021 | Team Udayavani |

ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಸುತ್ತಲಿನ ಗ್ರಾಮಗಳಲ್ಲಿ ಕಳೆದ ಆರು ವರ್ಷಗಳಿಂದ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ನಂತರ ಭೂಮಿ ಕಂಪಿಸುತ್ತಿದ್ದರೂ ಜನರ ಆತಂಕ ದೂರ ಮಾಡಲು ಸರ್ಕಾರ ಯತ್ನಿಸುತ್ತಿಲ್ಲ, ಒಂದು ವೇಳೆ ಅವಘಡ ಸಂಭವಿಸಿದರೇ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಶನಿವಾರ ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿ ಭೂಮಿ ಕಂಪಿಸುತ್ತಿರುವ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ, ಭೂ ಕಂಪನದಿಂದ ಮನೆಗಳು ಬಿದ್ದ ಸ್ಥಳ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಚಿಂಚೋಳಿ, ಕಾಳಗಿ ತಾಲೂಕಿನ ಚಿಂತಪಳ್ಳಿ, ಭಂಟನಳ್ಳಿ, ಭೂತಪುರ, ರುದನೂರ, ಬೆನಕನಳ್ಳಿ, ಕೊರವಿ, ಹಲಚೇರಾ, ತೇಗಲಮತಿ, ಹೊಸಳ್ಳಿ, ಗಡಿಕೇಶ್ವಾರ ಗ್ರಾಮಗಳಲ್ಲಿ ಶನಿವಾರ ಬೆಳಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್‌ ಮಾಪನದಲ್ಲಿ 3.2 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಸೇಡಂ, ಚಿಂಚೋಳಿ, ಕಾಳಗಿ ತಾಲೂಕಿನ ಗ್ರಾಮಗಳಲ್ಲಿ ಭೂಮಿ ಕಂಪಿಸಿತ್ತು. ಆಗ ರಿಕ್ಟರ್‌ ಮಾಪನದಲ್ಲಿ 3.9 ತೀವ್ರತೆ ದಾಖಲಾಗಿದೆ ಎಂದರು.

ಇದನ್ನೂ ಓದಿ: ಹೊಸ ಕಚೇರಿ ಕಟ್ಟಡ ಪೂರ್ಣಕ್ಕೆ ಗೋಯಲ್‌ ಸೂಚನೆ

ಗಡಿಕೇಶ್ವಾರ ಗ್ರಾಮದಲ್ಲಿ ಭೂಮಿ ಕಂಪಿಸುತ್ತಿರುವ ಬಗ್ಗೆ ಸೇಡಂ ಶಾಸಕರು, ಕಲಬುರಗಿ ಸಂಸದರು ರಾತ್ರಿ ಸಮಯದಲ್ಲಿ ಭೇಟಿ ನೀಡಿ ಹೋಗಿದ್ದಾರೆ. ಆದರೆ ಸರ್ಕಾರದಿಂದ ಸಿಸ್ಮೋಗ್ರಾಫರ್‌ (ಭೂಕಂಪನ ಮಾಪನ ಯಂತ್ರ) ಅಳವಡಿಸಲು ಕ್ರಮ ಕೈಕೊಂಡಿಲ್ಲ. ಮನೆಯಲ್ಲಿದ್ದರೆ ಭೂಕಂಪದ ಭಯ, ಹೊರಗಡೆ ಇದ್ದರೆ ಮಳೆಯ ಕಾಟ. ಇಂತಹ ಸಂಕಷ್ಟದಲ್ಲಿ ಜನರು ಬದುಕುತ್ತಿದ್ದಾರೆ. ಕಂದಾಯ ಸಚಿವ ಆರ್.ಅಶೋಕ ಅವರೊಡನೆ ಮಾತನಾಡಿ ಜನರಿಗೆ ಶೆಡ್‌ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ರುದನೂರ, ಗಡಿಕೇಶ್ವಾರ, ಚಿಂತಪಳ್ಳಿ, ಭಂಟನಳ್ಳಿ, ಹಲಚೇರಾ, ಹೊಸಳ್ಳಿ, ತೇಗಲತಿಪ್ಪಿ ಕೊರವಿ ಗ್ರಾಮಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಅನೇಕ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಭೂಮಿ ಕಂಪಿಸಿದರೆ ಮನೆಗಳು ಬೀಳುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಕೂಡಲೇ ಶೆಡ್‌ ನಿರ್ಮಿಸಬೇಕು ಎಂದರು. ಇದಕ್ಕೆ ಸಂಬಂಧಿಸಿದಂತೆ ಅ.11ರಂದು ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಬರುವ ಹೊಡೆಬೀರನಳ್ಳಿ ಗ್ರಾಮದ ಹತ್ತಿರ ಗ್ರಾಮಸ್ಥರು ನಡೆಸುತ್ತಿರುವ ರಸ್ತೆ ತಡೆ, ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.

ಮಸ್ತಾನ ಅಲಿ ಪಟ್ಟೇದಾರ, ಜಿಶಾನ ಅಲಿ, ಬಸವರಾಜ ಸಜ್ಜನ ಶೆಟ್ಟಿ, ರೇವಣಸಿದ್ಧಪ್ಪ ಅಣಕಲ್‌, ರಾಜಶೇಖರ ರೆಮ್ಮಣಿ, ಚಂದ್ರಶೇಖರಯ್ಯ ಕಂಬದ, ಶಿವಶರಣಪ್ಪ ಬಳಿ, ಖಾಜಾಪಟೇಲ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next