Advertisement

ಬರ ಎದುರಿಸಲು ಸರ್ಕಾರ ಸಿದ್ಧ: ಕಾಗೋಡು

01:02 PM Feb 17, 2017 | Team Udayavani |

ದಾವಣಗೆರೆ: ಮುಂದಿನ ಜೂನ್‌ ತಿಂಗಳವರೆಗೆ ಬರ ಪರಿಸ್ಥಿತಿ ಸಮರ್ಪಕವಾಗಿ ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಜೂನ್‌ ಹೊತ್ತಿಗೆ ಬರದ ಪರಿಣಾಮ ತೀವ್ರವಾಗಲಿದೆ. ರಾಜ್ಯ ಸರ್ಕಾರ ಕುಡಿಯುವ ನೀರು, ಗೋಶಾಲೆ ಸ್ಥಾಪನೆಗಾಗಿ ಎಲ್ಲಾ ಜಿಲ್ಲಾಡಳಿತಕ್ಕೆ ಸಾಕಷ್ಟು ಹಣ ನೀಡಿದ್ದು, ಯಾವುದಕ್ಕೂ ಹಣಕಾಸಿನ ಕೊರತೆ ಇಲ್ಲ ಎಂದರು. ಬರ ಪರಿಸ್ಥಿತಿ ನಿರ್ವಹಣೆಗೆ ಕುರಿತಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ 4,300 ಕೋಟಿಗೆ ಬೇಡಿಕೆ ಸಲ್ಲಿಸಿತ್ತು. 

ಕೇಂದ್ರ ಸರ್ಕಾರ 1,762 ಕೋಟಿಗೆ ಮಂಜೂರು ಮಾಡಿ, ಕೆಲ ದಿನಗಳ ಹಿಂದಷ್ಟೇ 450 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 39-40 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ನಷ್ಟ ಅನುಭವಿದ್ದಾರೆ. ಇನ್ನು 15 ದಿನಗಳಲ್ಲಿ ಎಲ್ಲರ ಖಾತೆಗೆ ಏಕಕಾಲಕ್ಕೆ ಬೆಳೆ ನಷ್ಟ ಪರಿಹಾರ ಜಮಾ ಮಾಡಲಾಗುವುದು. 15 ಲಕ್ಷ ರೈತರ ಬ್ಯಾಂಕ್‌ ಖಾತೆ ಎಲ್ಲ ದಾಖಲೆ ಸಮರ್ಪಕವಾಗಿವೆ. 

ಇನ್ನುಳಿದವರ ಬ್ಯಾಂಕ್‌ ಖಾತೆ ಮತ್ತಿತರ ಸಮಸ್ಯೆ ಇದ್ದು, ರೈತರ ಖಾತೆಗೆ ಹಣ ಜಮಾ ಮಾಡುವ ಮುನ್ನವೇ ಎಲ್ಲಾ ಸಮಸ್ಯೆ ಬಗೆಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಭಾರತದಂಥ ಪ್ರಜಾಸತ್ತಾತ್ಮಕ ದೇಶದಲ್ಲಿ ನಿಜಕ್ಕೂ ಒಂದು ವರ.

ಖಾತರಿ ಯೋಜನೆಯಲ್ಲಿ ನಾನೂ ಸೇರಿ ಶಾಮನೂರು ಶಿವಶಂಕರಪ್ಪ ನವರಂಥವರೂ ಕೆಲಸ ಮಾಡುವ ಅವಕಾಶ ಇದೆ. ಆದರೆ, ಜನರು ತಮ್ಮ ಮೂಲಭೂತ ಹಕ್ಕನ್ನು ಬಳಸಿಕೊಳ್ಳುತಿಲ್ಲ. ಸರ್ಕಾರಗಳು ಜಾಗೃತಿ ಮೂಡಿಸುವಂತಹ ಇಚ್ಛಾಶಕ್ತಿ ತೋರುತ್ತಿಲ್ಲ. ಹಾಗಾಗಿ ಅಪೂರ್ವ ಯೋಜನೆ ಸರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ ಎಂಬುದೇ ಬೇಸರದ ವಿಚಾರ ಎಂದು ತಿಳಿಸಿದರು. 

Advertisement

ರಾಜ್ಯದಲ್ಲಿ 50 ಲಕ್ಷಕ್ಕಿಂತಲೂ ಹೆಚ್ಚು ಜಾಬ್‌ಕಾರ್ಡ್‌ಗಳಿವೆ. ಒಬ್ಬರಿಗೆ 100 ದಿನ ಕೆಲಸ  ಕೊಟ್ಟಲ್ಲಿ ರಾಜ್ಯಕ್ಕೆ 20 ಸಾವಿರ ಕೋಟಿ ಹಣ ಖಾತರಿ ಯೋಜನೆಯಡಿ ಬರುತ್ತದೆ. ಆದರೆ, ನಮ್ಮ ಯೋಗ್ಯತೆಗೆ 3 ಸಾವಿರ ಕೋಟಿಯನ್ನೂ ದಾಟಿಲ್ಲ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ ನಲ್ಲಿ ಖಾತರಿ ಯೋಜಗೆಗೆ 45 ಸಾವಿರ ಕೋಟಿ ಅನುದಾನ ನೀಡಿದೆ. ಬರದ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಬರಲಿದೆ. 

8-9 ಸಾವಿರ ಕೋಟಿಯಷ್ಟು ಅನುದಾನವನ್ನು ಬಳಸಿಕೊಳ್ಳಬಹುದಾದ ಅವಕಾಶ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಇತರರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next