Advertisement

ವಾರ್ಡ್‌ಗಳ ಮರುವಿಂಗಡಣೆಗೆ ಸರ್ಕಾರ ಅಸ್ತು

12:39 AM Mar 04, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಪುನರ್‌ವಿಂಗಡಣೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅಧಿಸೂಚನೆಯಲ್ಲಿ ಹಲವು ವಾರ್ಡ್‌ ವ್ಯಾಪ್ತಿ ಹಾಗೂ ಸಂಖ್ಯೆಗಳಲ್ಲಿ ಬದಲಾವಣೆಯಾಗಿವೆ.

Advertisement

ಹಳೆ ಬೆಂಗಳೂರು ವ್ಯಾಪ್ತಿಯ ದಕ್ಷಿಣ, ಪಶ್ಚಿಮ, ಪೂರ್ವ ವಲಯದಲ್ಲಿದ್ದ 132 ವಾರ್ಡ್‌ಗಳ ಸಂಖ್ಯೆ ಈಗ 114 ಆಗಿವೆ. 5ಹೊಸ ವಲಯದಲ್ಲಿದ್ದ 66ವಾರ್ಡ್‌ಗಳ ಸಂಖ್ಯೆ ಈಗ 84 ಆಗಿದ್ದು, ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವಾರ್ಡ್‌ ಸೇರ್ಪಡೆಯಾಗಿವೆ. ಒಟ್ಟಾರೆ ವಾರ್ಡ್‌ ಸಂಖ್ಯೆ 198ರಷ್ಟೇ ಇದೆ.

2011ರ ಜನಗಣತಿ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ ಮರು ವಿಂಗಡಣೆ ಮಾಡಲಾಗಿದೆ. 2011ರಲ್ಲಿ ನಗರದಲ್ಲಿ ಒಟ್ಟು 84 ಲಕ್ಷ ಜನಸಂಖ್ಯೆ ಇದ್ದು, ಪ್ರತಿ ವಾರ್ಡ್‌ಗೆ ಸುಮಾರು 42 ಸಾವಿರ ಮಂದಿಯಂತೆ ಹಂಚಿಕೆ ಮಾಡಿ ವಾರ್ಡ್‌ ಮರು ವಿಂಗಡಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಿಗೆ ಬರುವ 28 ವಿಧಾನಸಭಾ ಕ್ಷೇತ್ರದ ಪೈಕಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.5ಕ್ಕಿಂತ ಹೆಚ್ಚು ಬದಲಾವಣೆ ಮಾಡದಂತೆ ಮರು ವಿಂಗಡನೆ ಮಾಡಲಾಗಿದೆ. ಆದರೆ, ಒಟ್ಟು ವಾರ್ಡ್‌ ಸಂಖ್ಯೆ198 ಮೀರದಂತೆ ಮಾಡಲಾಗಿದೆ. ಪದ್ಮನಾಭನಗರ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳ ವಾರ್ಡ್‌ ವ್ಯಾಪ್ತಿಯಲ್ಲಿ ಏರುಪೇರಾಗಿದೆ. ಯಲಹಂಕ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ 4ರಿಂದ 6ಕ್ಕೇರಿದೆ.

ಅದೇ ರೀತಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 9ರಿಂದ 11ಕ್ಕೆ, ಯಶವಂತಪುರ ಕ್ಷೇತ್ರದಲ್ಲಿ 5ರಿಂದ 7ಕ್ಕೆ, ಬೆಂಗಳೂರು ದಕ್ಷಿಣದಲ್ಲಿ 8ರಿಂದ 10ಕ್ಕೆ, ಬೊಮ್ಮನಹಳ್ಳಿಯಲ್ಲಿ 8ರಿಂದ 10ಕ್ಕೆ, ಕೆ.ಆರ್‌.ಪುರದಲ್ಲಿ 9ರಿಂದ 11ಕ್ಕೆ, ಮಹದೇವಪುರ ಕ್ಷೇತ್ರದಲ್ಲಿ 9ರಿಂದ 11ಕ್ಕೆ ಏರಿಕೆ ವಾರ್ಡ್‌ಗಳ ಸಂಖ್ಯೆ ಏರಿಕೆಯಾಗಿವೆ. ಆದರೆ, ಒಟ್ಟ ವಾರ್ಡ್‌ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Advertisement

198 ವಾರ್ಡ್‌ಗಳನ್ನು 2011ರ ಜನಗಣತಿ ಆಧಾರದ ಮೇಲೆ ವಾರ್ಡ್‌ ಪುನರ್‌ ವಿಂಗಡಿಸಿ, ಹಲವು ಹಳೆ ಕ್ಷೇತ್ರಗಳನ್ನು ಮಾರ್ಪಾಡು ಮಾಡಿ ಹೊಸ ಕ್ಷೇತ್ರಗಳನ್ನಾಗಿ ರೂಪಿಸಿ ಗೆಜೆಟ್‌ ಹೊರಡಿಸಿ ಅದರ ಪ್ರತಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ.

ಪ್ರಸ್ತುತ ಬಿಬಿಎಂಪಿ ಆಡಳಿತದ ಅವಧಿ ಸೆಪ್ಟೆಂಬರ್‌ಗೆ ಅಂತ್ಯವಾಗಲಿದ್ದು, ನಿಗದಿತ ಅವಧಿಯಲ್ಲಿ ಬಿಬಿ ಎಂಪಿಗೆ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ಹೀಗಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಕ್ಷೇತ್ರಗಳ ಪುನರ್‌ ವಿಂಗಡಣೆ, ಮೀಸಲಾತಿ ಪಟ್ಟಿ ಶೀಘ್ರ ಸಲ್ಲಿಸಲು ಸೂಚಿಸಿದ್ದು ಸರ್ಕಾರ ವಾರ್ಡ್‌ಗಳ ಪುನರ್‌ ವಿಂಗಡಣೆ ಪಟ್ಟಿ ಸಲ್ಲಿಸಿದೆ. ಅಲ್ಲದೇ, ಗೆಜೆಟ್‌ ಹೊರಡಿಸಿದ 15 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.

ಹೊಸ ವಾರ್ಡ್‌ಗಳು: ಬೆಟ್ಟಿಹಳ್ಳಿ, ಶೇಷಾದ್ರಿಪುರ, ಗರುಡಾಂಜನೇಯ ಸ್ವಾಮಿ ದೇವಸ್ಥಾನ, ಕೋಗಿಲು, ಅಮೃತಹಳ್ಳಿ, ರಾಮಚಂದ್ರಾಪುರ, ಚಿಕ್ಕಸಂದ್ರ, ಬಾಹುಬಲಿನಗರ, ಚಳ್ಳಕೆರೆ, ಆರ್‌.ಟಿ.ನಗರ, ಸುಂಕದಕಟ್ಟೆ, ಬ್ಯಾಡರಹಳ್ಳಿ, ಮಲ್ಲತ್‌ಹಳ್ಳಿ, ವೈಟ್‌ಫೀಲ್ಡ್‌, ಅಮರಜ್ಯೋತಿನಗರ, ಕೆಂಗುಂಟೆ, ಕಲ್ಯಾಣನಗರ, ನಾಗ ದೇವನಹಳ್ಳಿ, ದೊಡ್ಡಕನ್ನೇಳ್ಳಿ, ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯ, ಸುಬ್ರಮಣ್ಯಪುರ, ಚುಂಚನಘಟ್ಟ, ನಾಗನಾಥಪುರ, ದೇವರಚಿಕ್ಕನಹಳ್ಳಿ, ಕಾಳೇನ ಅಗ್ರಹಾರ.

ಕಾಣೆಯಾದ ವಾರ್ಡ್‌ಗಳು: ಅಟ್ಟೂರು, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರಹಳ್ಳಿ, ಜಯಚಾಮರಾಜೇಂದ್ರನಗರ, ಎಚ್‌ಎಂಟಿ, ಮಹಾಲಕ್ಷ್ಮೀಪುರ, ಜಯನಗರ, ಪ್ರಕಾಶ್‌ ನಗರ, ಸುಭಾಷ್‌ನಗರ, ಎಸ್‌ಕೆಗಾರ್ಡನ್‌, ಕಾಡುಮಲ್ಲೇಶ್ವರ, ಕಾಟನ್‌ಪೇಟೆ, ಜಯಮಹಲ್‌, ಸಂಪಂಗಿರಾಮನಗರ, ಅಗರಂ, ಕಾಮಾಕ್ಷಿಪಾಳ್ಯ, ಶಿವನಗರ, ಅಗ್ರಹಾರ ದಾಸರಹಳ್ಳಿ, ಮಾರೇನಹಳ್ಳಿ, ಮೂಡಲಪಾಳ್ಯ, ಸುಧಾಮನಗರ, ಸುಂಕೇನಹಳ್ಳಿ, ರಾಯಪುರ, ಕೆ.ಆರ್‌.ಮಾರುಕಟ್ಟೆ, ಆಡುಗೋಡಿ, ಗರುಡಾಚಾರಪಾಳ್ಯ, ಗಣೇಶಮಂದಿರ, ಪಟ್ಟಾಬಿರಾಮನಗರ, ಜೆ.ಪಿ.ನಗರ, ಬ್ಯಾಟರಾಯನಪುರ, ವಿಜಿನಾಪುರ, ಶಿವಾಜಿನಗರ, ಕೋಣನಕುಂಟೆ.

ಮಾಜಿ ಮೇಯರ್‌ಗಳಿಗೆ ವಾರ್ಡ್‌ ಇಲ್ಲ: ಪುನರ್‌ವಿಂಗಡನೆ ವೇಳೆ ಕಾಂಗ್ರೆಸ್‌ನ ಮಾಜಿ ಮೇಯರ್‌ಗಳಾದ ಗಂಗಾಂಬಿಕೆ ಹಾಗೂ ಜಿ.ಪದ್ಮಾವತಿ ಅವರು ಪ್ರತಿನಿಧಿಸುವ ಜಯನಗರ ಹಾಗೂ ಪ್ರಕಾಶ ನಗರ ವಾರ್ಡ್‌ಗಳೇ ಮಾಯವಾಗಿವೆ. ಇನ್ನು ಹಲವು ವಾರ್ಡ್‌ಗಳ ಹೆಸರು ಬದಲಾವಣೆ ಆಗಿದ್ದು, ಹೊಸ ವಾರ್ಡ್‌ಗಳು ಸೃಷ್ಟಿಯಾಗಿವೆ. ಹೀಗಾಗಿ ಮುಂದಿನ ಪಾಲಿಕೆ ಚುನಾವಣೆ ವೇಳೆ ಪರ್ಯಾಯ ವಾರ್ಡ್‌ ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.

ವಾರ್ಡ್‌ಗಳ ಸಂಖ್ಯೆ ಎಲ್ಲಿ ಏರಿಕೆ ಹಾಗೂ ಇಳಿಕೆ?: ಕೇಂದ್ರ ಭಾಗದ ವಲಯಗಳಾದ ದಕ್ಷಿಣ, ಪೂರ್ವ, ಪಶ್ಚಿಮ ವಲಯದ ವಾರ್ಡ್‌ಗಳ ಸಂಖ್ಯೆ132ರಿಂದ 114ಕ್ಕೆ ಇಳಿಕೆಯಾಗಿದೆ. ನಗರದ ಹೊರ-ಹೊಸ ವಲಯಗಳಾದ ಬೊಮ್ಮನಹಳ್ಳಿ, ಆರ್‌.ಆರ್‌.ನಗರ, ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯದ ವಾರ್ಡ್‌ಗಳ ಸಂಖ್ಯೆ 68 ರಿಂದ 84 ವಾರ್ಡ್‌ಗಳಿಗೆ ಏರಿಕೆಯಾಗಿದೆ.

ಅನುಕೂಲಕರ ಬದಲಾವಣೆ: ಈ ಹಿಂದೆ 2010ರಲ್ಲಿ ವಾರ್ಡ್‌ ಮರು ವಿಂಗಡನೆ ಮಾಡಲಾಗಿತ್ತು. 2010ರಲ್ಲೂ ಬಿಜೆಪಿ ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೇರಿಸಿ ಮರು ವಿಂಗಡನೆ ಮಾಡಿತ್ತು. ಈಗಲೂ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿಯೇ ವಾರ್ಡ್‌ ಮರು ವಿಂಗಡನೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಸತತವಾಗಿ ಗೆಲ್ಲುತ್ತಿರುವೆಡೆ ಉದ್ದೇಶಪೂರ್ವಕವಾಗಿ ಮಾರ್ಪಾಡು ಮಾಡಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ದೂರಿದ್ದಾರೆ.

ಟ್ವಿಸ್ಟ್‌ ಇದೆ : ಹೆಸರು ಹೇಳಲಿಚ್ಚಿಸದ ಪಾಲಿಕೆ ಆಡಳಿತ ಪಕ್ಷದ ಸದಸ್ಯರೊಬ್ಬರ ಪ್ರಕಾರ ವಾರ್ಡ್‌ಗಳ ಸಂಖ್ಯೆಯನ್ನು 2021ರ ಜನಗಣತಿಗೆ ಅನುಗುಣವಾಗಿ 198 ರಿಂದ 225ಕ್ಕೆ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಜತೆಗೆ ಒಂದು ವರ್ಷ ಚುನಾವಣೆ ಮುಂದೂಡಿಕೆ ಮಾಡುವುದಕ್ಕೂ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪಾಲಿಕೆ ಆದಾಯ ದೃಷ್ಟಿ, 110 ಹಳ್ಳಿಗಳ ಸೇರ್ಪಡೆ ಸೇರಿ ವಿವಿಧ ವಿಚಾರಗಳ ಬಗ್ಗೆ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು 1 ವರ್ಷ ಮುಂದೂಡುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

ಇಂದು ಅಂತಿಮ ತೀರ್ಪು: ಗೆಜೆಟ್‌ ಹೊರಡಿಸಿದ ಪ್ರತಿಯನ್ನು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಸಲ್ಲಿಸಿದೆ.ಚುನಾವಣಾ ಆಯೋಗ, ಬಿಬಿಎಂಪಿ ಸದಸ್ಯರು ನಿಗದಿತ ಅವಧಿಗೆ ಚುನಾವಣೆ ನಡೆಸುವಂತೆ ಸೂಚನೆ ನೀಡುವಂತೆ ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಂತಿಮ ತೀರ್ಪು ಬುಧವಾರ ಪ್ರಕಟವಾಗಲಿದೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮರು ವಿಂಗಡನೆ ಮಾಡಲಾಗಿದೆ.
-ಅಬ್ದುಲ್‌ ವಾಜಿದ್‌, ಬಿಬಿಎಂಪಿ ವಿರೋಧ ಪಕ್ಷದ ನಾಯಕ

ಜಯನಗರ ವಾರ್ಡ್‌ ಅನ್ನು ಸಿದ್ಧಾ ಪುರ ಹಾಗೂ ವಿವಿಪುರ ವಾರ್ಡ್‌ಗೆ ವಿಭಜನೆ ಮಾಡಲಾಗಿದೆ. ಉತ್ತಮ ಕೆಲಸ ಮಾಡಿದ್ದೇವೆ ಎಂಬ ವಿಶ್ವಾಸ ಇದೆ. ಯಾವುದೇ ವಾರ್ಡ್‌ನಿಂದ ಸ್ಪರ್ಧೆ ಮಾಡಿದರೂ ಜನ ನನ್ನ ಕೈ ಹಿಡಿಯಲಿದ್ದಾರೆ.
-ಗಂಗಾಂಬಿಕೆ, ಮಾಜಿ ಮೇಯರ್‌, ಜಯನಗರ ವಾರ್ಡ್‌

ರಾಜಕೀಯ ದ್ವೇಷದಿಂದ ಪ್ರಕಾಶನಗರ ವಾರ್ಡ್‌ ಹೊಡೆದು ಹಂಚಿಕೆ ಮಾಡಲಾಗಿದೆ.
-ಜಿ.ಪದ್ಮಾವತಿ, ಮಾಜಿ ಮೇಯರ್‌ ಪ್ರಕಾಶ್‌ನಗರ

Advertisement

Udayavani is now on Telegram. Click here to join our channel and stay updated with the latest news.

Next