Advertisement

ಸ್ಥಿರತೆಯ ಭರವಸೆ ನೀಡಲಿದೆಯೇ ಸರ್ಕಾರ?

06:00 AM Jul 02, 2018 | |

ಬೆಂಗಳೂರು: ಮೈತ್ರಿ ಗೊಂದಲ ಮುಂದುವರಿದಿರುವ ನಡುವೆಯೇ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪೂರ್ಣ ಪ್ರಮಾಣದ ಚೊಚ್ಚಲ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ರಾಜ್ಯಪಾಲರು ಚಾಲನೆ ನೀಡಲಿದ್ದಾರೆ. ಪ್ರಥಮ ಅಧಿವೇಶನದಲ್ಲಿ ಒಟ್ಟು 9 ದಿನ ಕಲಾಪಗಳು ನಡೆಯಲಿವೆ.

Advertisement

ಸೋಮವಾರ ಮಧ್ಯಾಹ್ನ 12.30ಕ್ಕೆ ವಿಧಾನಸಭೆ ಸಭಾಂಗಣದಲ್ಲಿ ರಾಜ್ಯಪಾಲ ವಿ.ಆರ್‌.ವಾಲಾ ಅವರು ಎರಡೂ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಬಜೆಟ್‌ ಮಂಡನೆ ಇರುವುದರಿಂದ ಮತ್ತು ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲವೆಂಬ ಅನುಮಾನ ವ್ಯಕ್ತವಾಗುತ್ತಿರುವುದರಿಂದ ಮುಂದಿನ ಐದು ವರ್ಷದ ಅವಧಿಗೆ ಸ್ಥಿರ ಸರ್ಕಾರ ಮತ್ತು ಅಭಿವೃದ್ಧಿಪರ ಆಡಳಿತದ ಸಂದೇಶವನ್ನು ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ನೀಡಲಿದೆ.

ಇದಲ್ಲದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನೀರು ನಿಯಂತ್ರಣ ಸಮಿತಿ ರಚನೆ ಕಾರಣದಿಂದ ಉದ್ಭವವಾಗಿರುವ ಗೊಂದಲ ಸೇರಿ ಮಹದಾಯಿ ವಿವಾದ, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಬದ್ಧತೆ, ಸಮ್ಮಿಶ್ರ ಸರ್ಕಾರದ ಮುಂದಿನ ಗುರಿ ಮತ್ತಿತರ ವಿಚಾರಗಳ ಬಗ್ಗೆ ರಾಜ್ಯಪಾಲರ ಭಾಷಣದ ಮೂಲಕ ಜನತೆಗೆ ತಿಳಿಸುವ ಪ್ರಯತ್ನ ಮಾಡಲಿದೆ. ಹೊಸ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಬಜೆಟ್‌ ಕೂಡ ಇದೇ ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ರೈತರ ಬೆಳೆ ಸಾಲ ಮನ್ನಾ ಸೇರಿ ಹಲವು ಹೊಸ ಘೋಷಣೆಗಳು ಹೊರಬೀಳಲಿದೆ.

ಪ್ರಬಲ ಪ್ರತಿಪಕ್ಷ: ಈ ಬಾರಿ ಪ್ರಬಲ ಪ್ರತಿಪಕ್ಷವೇ ಸಮ್ಮಿಶ್ರ ಸರ್ಕಾರದ ಪಾಲಿಗೆ ಕಬ್ಬಿಣದ ಕಡಲೆಯಾಗುವ ಸಾಧ್ಯತೆಯಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ 104 ಸ್ಥಾನಗಳೊಂದಿಗೆ ಅತಿ ಹೆಚ್ಚು ಸ್ಥಾನ ಪಡೆದಿದ್ದರೂ ಸರ್ಕಾರ ರಚನೆಗೆ ಅವಕಾಶ ನೀಡದೆ, ಅಪವಿತ್ರ ಮೈತ್ರಿಯೊಂದಿಗೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚಿಸಿರುವ ಬಗ್ಗೆ ಆರಂಭದಿಂದಲೂ ಕಿಡಿಕಾರುತ್ತಿರುವ ಬಿಜೆಪಿ ಸದನದಲ್ಲಿ ಸರ್ಕಾರದ ವಿರುದ್ಧ ಸಿಗುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲಿದ್ದು, ಮಿತ್ರ ಪಕ್ಷಗಳು ಸ್ವಲ್ಪ ಎಡವಿದರೂ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಹೀಗಾಗಿ ಎರಡೂ ಪಕ್ಷಗಳು ಎಚ್ಚರಿಕೆಯಿಂದಲೇ ಸದನದಲ್ಲಿ ಪಾಲ್ಗೊಳ್ಳಬೇಕಾಗಿದೆ.

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಸಂಪುಟ ವಿಸ್ತರಣೆ ವಿಚಾರದಲ್ಲಿ ಅಸಮಾಧಾನ ಸ್ಫೋಟ, ಸರ್ಕಾರದ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೇಳಿಕೆಗಳು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾಗಿರುವ ಹಾನಿ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುವುದು ಖಚಿತ. ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಪ್ರತಿಪಕ್ಷಕ್ಕೆ ಉತ್ತರಿಸಬೇಕಾದ ಅನಿವಾರ್ಯತೆ ಮಿತ್ರಪಕ್ಷಗಳಿಗೆ ಇದೆ. ಆದರೆ, ಸಂಪುಟ ರಚನೆ ಗೊಂದಲದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಎರಡೂ ಪಕ್ಷಗಳು ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕು.

Advertisement

ಬಜೆಟ್‌ ಬಗ್ಗೆಯೇ ಗಮನ: ಸೋಮವಾರದಿಂದ ವಿಧಾನ ಮಂಡಲ ಕಲಾಪ ಆರಂಭವಾಗುತ್ತಿದೆಯಾದರೂ ಆಡಳಿತ ಮತ್ತು ಪ್ರತಿಪಕ್ಷಗಳ ಗಮನ ಗುರುವಾರ (ಜು. 5) ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಂಡಿಸುವ ಬಜೆಟ್‌ ಮೇಲಿದೆ. ಅಧಿಕಾರಕ್ಕೆ ಬರುವ ಮುನ್ನ ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ, ಇದೀಗ ಜೆಡಿಎಸ್‌ಗೆ ಪೂರ್ಣ ಅಧಿಕಾರ ನೀಡಿಲ್ಲ ಎಂದು ಹೇಳಿಕೊಂಡು ಬಜೆಟ್‌ನಲ್ಲಿ ಬೆಳೆಸಾಲ ಮಾತ್ರ ಮನ್ನಾ ಮಾಡಲಿದ್ದಾರೆ. ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸುವುದರೊಂದಿಗೆ ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನೂ ಮುಂದುವರಿಸಬೇಕಾಗಿರುವುದರಿಂದ ಮತ್ತು ನೀರಾವರಿಗೆ ಹೆಚ್ಚಿನ ಅನುದಾನ ಒದಗಿಸಬೇಕಾಗಿರುವುದರಿಂದ ಆರ್ಥಿಕ ನಿರ್ವಹಣೆ ಯಾವ ರೀತಿಯಲ್ಲಿರುತ್ತದೆ ಎಂಬ ಕುತೂಹಲವೂ ಇದೆ.

ಸದನದಲ್ಲಿ ಇಂದೇನು?
ಸೋಮವಾರ ಬೆಳಗ್ಗೆ 12.25ಕ್ಕೆ ರಾಜ್ಯಪಾಲರು ವಿಧಾನಸೌಧಕ್ಕೆ ಆಗಮಿಸಲಿದ್ದು, ಸಭಾಪತಿ, ಸ್ಪೀಕರ್‌, ಮುಖ್ಯಮಂತ್ರಿಗಳು ಅವರನ್ನು ವಿಧಾನಸಭೆ ಸಭಾಂಗಣಕ್ಕೆ ಕರೆತರಲಿದ್ದಾರೆ. 12.30ಕ್ಕೆ ಸರಿಯಾಗಿ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣ ಮುಗಿದು ಅವರು ವಾಪಸಾದ ನಂತರ ಮತ್ತೆ ಸದನ ಸೇರಲಿದ್ದು, ವರದಿಗಳ ಮಂಡನೆ ಮತ್ತು ಸಂತಾಪ ಸೂಚನೆ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಇನ್ನೊಂದೆಡೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣವನ್ನು ಬಳಿಕ ವಿಧಾನ ಪರಿಷತ್ತಿನಲ್ಲೂ ಮಂಡಿಸಲಾಗುತ್ತದೆ. ಇದಾದ ಬಳಿಕ ಅಲ್ಲಿಯೂ ಸಂತಾಪ ಸೂಚನೆ ನಿರ್ಣಯದ ಮೇಲೆ ಚರ್ಚೆ ನಡೆದು ನಿರ್ಣಯ ಅಂಗೀಕರಿಸಲಾಗುತ್ತದೆ.

ನಾಲ್ಕೇ ದಿನ ಪ್ರಶ್ನೋತ್ತರ
ಈ ಬಾರಿ 9 ದಿನ ಅಧಿವೇಶನ ನಡೆಯುತ್ತದೆಯಾದರೂ ಪ್ರಶ್ನೋತ್ತರ ನಾಲ್ಕು ದಿನ ಮಾತ್ರ ಇರುತ್ತದೆ. ಸಾಮಾನ್ಯವಾಗಿ ಅಧಿವೇಶನ ನಡೆದಾಗ ಜಂಟಿ ಅಧಿವೇಶನ ಮತ್ತು ಬಜೆಟ್‌ ಅಧಿವೇಶನದ ದಿನ ಮಾತ್ರ ಪ್ರಶ್ನೋತ್ತರ ಇರುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಅಧಿವೇಶನ ಕರೆಯಲು ಕಡಿಮೆ ಕಾಲಾವಕಾಶ ಇದ್ದುದರಿಂದ ಮತ್ತು 9 ದಿನಗಳಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕೈಗೊಳ್ಳುವುದು ಮತ್ತು ಬಜೆಟ್‌ಗೆ ಒಪ್ಪಿಗೆ ಪಡೆಯಬೇಕಾಗಿರುವುದರಿಂದ ಉಭಯ ಸದನಗಳಲ್ಲಿ ಪ್ರಶ್ನೋತ್ತರ ಕಲಾಪವನ್ನು ಕೊನೆಯ ನಾಲ್ಕು ದಿನ (ಜು. 9ರಿಂದ 12) ಮಾತ್ರ ನಡೆಸಲಾಗುತ್ತದೆ. ಈಗಾಗಲೇ ಈ ಕುರಿತು ಸದಸ್ಯರಿಗೂ ಮಾಹಿತಿ ನೀಡಲಾಗಿದೆ.

ಏಕೈಕ ಪ್ರತಿಪಕ್ಷ
ಇತ್ತೀಚಿನ ವರ್ಷಗಳಲ್ಲಿ ಏಕೈಕ ಪ್ರತಿಪಕ್ಷ ಇರುವ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವುದು ಈ ಬಾರಿಯ ವಿಶೇಷತೆಗಳಲ್ಲಿ ಒಂದು. 223 ಸದಸ್ಯರ ಪೈಕಿ 104 ಸದಸ್ಯಬಲ ಹೊಂದಿರುವ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿದೆ. 36 ಸ್ಥಾನ ಹೊಂದಿರುವ ಜೆಡಿಎಸ್‌, 79 ಸ್ಥಾನ ಹೊಂದಿರುವ ಕಾಂಗ್ರೆಸ್‌, ತಲಾ ಒಂದು ಸ್ಥಾನ ಹೊಂದಿರುವ ಬಿಎಸ್‌ಪಿ, ಕೆಪಿಜೆಪಿ ಮತ್ತು ಪಕ್ಷೇತರರ ಸಹಕಾರದೊಂದಿಗೆ ಸರ್ಕಾರ ನಡೆಸುತ್ತಿದೆ. ಹೀಗಾಗಿ ಪ್ರತಿಪಕ್ಷ ಸಾಲಿನಲ್ಲಿ ಬಿಜೆಪಿ ಒಂದೇ ಉಳಿದುಕೊಂಡಿದೆ. ಆದರೆ, ಪ್ರತಿಪಕ್ಷ ಸದಸ್ಯ ಬಲ ಹೆಚ್ಚಾಗಿರುವುದರಿಂದ ಸರ್ಕಾರ ಸದಾ ಎಚ್ಚರಿಕೆಯಿಂದಲೇ ಅಧಿವೇಶನ ನಡೆಸಬೇಕಾದ ಅನಿವಾರ್ಯತೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next