Advertisement

ಸರ್ಕಾರ ನನ್ನ ಕೈಯಲ್ಲಿದೆ, ಏನು ಬೇಕಾದ್ರೂ ಮಾಡ್ತೇನೆ

06:25 AM Sep 21, 2018 | Team Udayavani |

ಹಾಸನ/ಬೆಂಗಳೂರು: “ಯಡಿಯೂರಪ್ಪ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಲಿ. ಇಲ್ಲದಿದ್ದರೆ ರಾಜ್ಯ ಸರ್ಕಾರ ನನ್ನ ಕೈಯಲ್ಲಿದೆ, ಒಂದು ದಿನದಲ್ಲಿ ಏನನ್ನು ಬೇಕಾದರೂ ಮಾಡಬಹುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆಯ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿ, ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಷನ್‌ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಏನು ಹೇಳಿದೆ ಎಂಬುದು ಗೊತ್ತಿದೆ. ಇಕ್ಕಟ್ಟಿಗೆ ಒಳಗಾಗಬೇಡಿ, ನಿಮ್ಮ ಇತಿಹಾಸ ಬಿಚ್ಚಿಡಬೇಕಾಗುತ್ತದೆ. ರಾಜ್ಯದಲ್ಲಿ ಮಾಡಬಾರದ್ದನ್ನು ಮಾಡಿ ಗಾಜಿನ ಮನೆಯಲ್ಲಿ ಇರುವುದು ನೀವು. ಸರಿಯಾಗಿ ಮಾತನಾಡುವುದನ್ನು ಕಲಿಯಿರಿ. ನೀವು ಏನು ಮಾಡಿದ್ದೀರಿ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಿ. ನಾನು ಇಲ್ಲಿವರೆಗೂ ಬಹಳ ತಾಳ್ಮೆಯಿಂದ ಹೋಗುತ್ತಿದ್ದೇನೆ. ಕೆದಕಿದರೆ ಹಲವಾರು ವಿಷಯ ಇದೆ, ಸರ್ಕಾರ ನನ್ನ ಕೈಯಲ್ಲಿದೆ ಹುಷಾರ್‌ ಎಂದರು.

ಅಪ್ಪ-ಮಕ್ಕಳು ಲೂಟಿಕೋರರು, ರಾಜ್ಯದ ಖಜಾನೆ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದು ಯಾವ ತರ ಎಂದು ಹೇಳಬೇಕಲ್ಲವೇ? ನಮ್ಮ ಕುಟುಂಬ ಎಲ್ಲೆಲ್ಲಿ, ಯಾವುದನ್ನು ಲೂಟಿ ಮಾಡಿದೆ ಎಂಬುದನ್ನು ಯಡಿಯೂರಪ್ಪ ಸಾಬೀತುಪಡಿಸಲಿ ನೋಡೋಣ ಎಂದು ಸವಾಲು ಹಾಕಿದರು. ಈ ರಾಜ್ಯಕ್ಕೆ ಪರ್ಸೆಂಟೇಜ್‌ ವ್ಯವಹಾರ ತಂದದ್ದೇ ಯಡಿಯೂರಪ್ಪನವರು. ನಾವು ಇಷ್ಟು ವರ್ಷದ ರಾಜಕಾರಣದಲ್ಲಿ ರಾಜ್ಯದ ಸಂಪತ್ತನ್ನು ಉಳಿಸಲು ಪ್ರಯತ್ನಿಸಿದ್ದೇವೆ ಎಂದರು.

ರಾಜಕೀಯ, ವಯಸ್ಸು, ಅನುಭವದಲ್ಲಿ ಯಡಿಯೂರಪ್ಪ ಹಿರಿಯರು. ಅವರು ಪದ ಬಳಕೆ ಬಗ್ಗೆ ಹಿಡಿತ ಇಟ್ಟುಕೊಳ್ಳಲಿ. ಹಿಂದೇ ಇದೇ ರೀತಿ ಮಾತಿನಲ್ಲಿ ಹಿಡಿತ ಕಳೆದುಕೊಂಡು ಹುಬ್ಬಳ್ಳಿಯಲ್ಲಿ ಅಪ್ಪ-ಮಕ್ಕಳನ್ನು ಮುಗಿಸೋದೇ, ಜೈಲಿಗೆ ಕಳಿಸೋದೇ ನನ್ನ ಗುರಿ ಎಂದು ಹೇಳಿ ಕೊನೆಗೆ ಅವರೇ ಜೈಲು ಪಾಲಾದರು. ಅದನ್ನು ನೆನಪಿಸಿಕೊಳ್ಳಲಿ ಎಂದರು. ಜೆಡಿಎಸ್‌ ಶಾಸಕ ಸುರೇಶ್‌ಗೌಡ ಹಾಗೂ ಕಾಂಗ್ರೆಸ್‌ ಶಾಸಕ ಶಿವಳ್ಳಿ ಜತೆ ಬಿಜೆಪಿಯವರು ಏನು ಮಾತನಾಡಿದ್ದಾರೆ. ಬೌರಿಂಗ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಏನು ಮೀಟಿಂಗ್‌ ನಡೀತಿದೆ ಎಲ್ಲವೂ ಗೊತ್ತಿದೆ. ಪಾಪ, ಯಡಿಯೂರಪ್ಪಗೆ ಏನೂ ಗೊತ್ತಿಲ್ಲ. ಅದಾಗಿಯೇ ಬಿದ್ದು ಹೋದರೆ ಸರ್ಕಾರ ರಚನೆಯಂತೆ ಎಂದು ಲೇವಡಿ ಮಾಡಿದರು.

ಡಿಕೆಶಿಗೆ ಧೈರ್ಯ ಹೇಳಿದ ಎಚ್‌ಡಿಕೆ
ಜಾರಿ ನಿರ್ದೇಶನಾಲಯದ ಎಫ್ಐಆರ್‌ ವಿಚಾರದಲ್ಲಿ ಯಾವುದೇ ಆತಂಕ ಬೇಡ. ನಾನು ನಿಮ್ಮೊಂದಿಗಿದ್ದೇನೆ ಎಂದು ಆಸ್ಪತ್ರೆಯಲ್ಲಿ ಡಿ.ಕೆ.ಶಿವಕುಮಾರ್‌ಗೆ ಧೈರ್ಯ ತುಂಬಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಯಾವುದಕ್ಕೂ ಹೆದರಬೇಡಿ. ರಾಜ್ಯ ಸರ್ಕಾರ ನಿಮ್ಮ ಜತೆ ನಿಲ್ಲಲಿದೆ ಎಂದು ಹೇಳಿದರು. ಜತೆಗೆ, ಬಿಜೆಪಿಯಿಂದ ಆಪರೇಷನ್‌ ಕಮಲ ಕಾರ್ಯಾಚರಣೆ ಪ್ರಯತ್ನ ಮುಂದುವರಿದಿರುವ ಬಗ್ಗೆಯೂ ಚರ್ಚಿಸಿ ಅದನ್ನು ತಡೆಯಲು ಏನೇನು ಮಾಡಬಹುದು ಎಂಬ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಿದರು. ಅಲ್ಲಿಂದಲೇ ಕೆಲವು ಶಾಸಕರನ್ನು ಸಂಪರ್ಕಿಸಿ ಮಾತನಾಡಿದರು ಎಂದು ಹೇಳಲಾಗಿದೆ.

Advertisement

ಮತ್ತೂಮ್ಮೆ ರಮೇಶ್‌ ಜಾರಕಿಹೊಳಿ ಚರ್ಚೆ: ಡಿ.ಕೆ.ಶಿವಕುಮಾರ್‌ ಅವರ ಜತೆ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಸಮಾಲೋಚನೆ ನಡೆಸಿದ್ದ ಸಚಿವ ರಮೇಶ್‌ ಜಾರಕಿಹೊಳಿ, ಗುರುವಾರ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಜತೆ ಆಗಮಿಸಿ ಸುಮಾರು ಹೊತ್ತು ಚರ್ಚಿಸಿದರು. ಸಂಪುಟ ವಿಸ್ತರಣೆಯಲ್ಲಿ ನಾಗೇಂದ್ರಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಇತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿದು ಬಂದಿದೆ

ಸರ್ಕಾರ ಟೇಕಾಫ್ ಆಗಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರೇ, ಸರ್ಕಾರ ಟೇಕಾಫ್ ಆಗಲಿ ಬಿಡ್ರಪ್ಪ ನೀವು. ನಾನು ಮಜಾ ಮಾಡಲಿಕ್ಕೆ ಮುಖ್ಯಮಂತ್ರಿಯಾಗಿಲ್ಲ. ರೈತರು, ಅಂಗವಿಕಲರು, ನಿರ್ಗತಿಕರು ಹಾಗೂ ಶೋಷಿತರ ಕಣ್ಣೀರು ಒರೆಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಅದು ನಿಮಗೆ ಕಾಣಿಸುತ್ತಿಲ್ಲವೇ?
– ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next