ಬೆಂಗಳೂರು: “ಸರ್ಕಾರ ಮಾಡಬೇಕಾದ ಕೆಲಸ ಕಾನೂನು ಸೇವಾ ಪ್ರಾಧಿಕಾರ ಮಾಡುತ್ತಿದೆ. ಒಂದೊಮ್ಮೆ ಸರ್ಕಾರ ಸರಿಯಾಗಿ ಕೆಲಸ ಮಾಡಿದಿದ್ದರೆ ಇಷ್ಟೊಂದು ಕೇಸ್‌ಗಳು ಕೋರ್ಟ್ ಮುಂದೆ ಬರುತ್ತಿರಲಿಲ್ಲ’, ಎಂದು ಹೈಕೋರ್ಟ್ ತೀಕ್ಷ್ಣ ಮಾತುಗಳಲ್ಲಿ ಹೇಳಿದೆ.
ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಲೆಟ್ಜ್ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ಕೆ.ಎಸ್. ಹೇಮಲೇಖ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಈ ರೀತಿ ಹೇಳಿತು.
ವಿಚಾರಣೆ ವೇಳೆ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲೆ ಬಿ.ವಿ. ವಿದ್ಯುಲ್ಲತಾ ಅವರ ವಾದ ಮಂಡಿಸಿ, ಶೌಚಾಲಯಗಳ ಸ್ಥಿತಿಗತಿ ಮತ್ತು ನಿರ್ವಹಣೆ ಕುರಿತು ಪ್ರಾಧಿಕಾರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ.
ಈ ಕೆಲಸ ಮುಂದುವರಿಸಲು ಪ್ರಾಧಿಕಾರದ ಬಳಿ ಸಮರ್ಪಕ ಸಿಬ್ಬಂದಿ ಇಲ್ಲ. ಅರೆ ನ್ಯಾಯಿಕ (ಪ್ಯಾರಾ ಲೀಗಲ್) ಸ್ವಯಂ ಸೇವಾ ಕಾರ್ಯಕರ್ತರನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು. ಅವರಿಗೆ ಬಿಬಿಎಂಪಿ ವತಿಯಿಂದ ಸಂಭಾವನೆ ಕೊಡಿಸಬೇಕು. ಏಕೆಂದರೆ, ಬಿಬಿಎಂಪಿ ಮಾಡಬೇಕಾದ ಕೆಲಸ ಪ್ರಾಧಿಕಾರ ಮಾಡುತ್ತಿದೆ. ಬಿಬಿಎಂಪಿಗೆ ದಂಡ ವಿಧಿಸಿದರೆ ಆ ಹಣವನ್ನು ಸಂಭಾವನೆಗೆ ಬಳಸಿಕೊಳ್ಳಬಹುದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಎಲ್ಲಾ ಕೆಲಸ ಪ್ರಾಧಿಕಾರವೇ ಮಾಡಿದೆ. ಸರ್ಕಾರ ಕೆಲಸ ಮಾಡುತ್ತಿಲ್ಲ. ಸರ್ಕಾರ ಒಂದೊಮ್ಮೆ ಕೆಲಸ ಮಾಡಿರುತ್ತಿದ್ದರೆ, ಇಷ್ಟೊಂದು ಕೇಸ್‌ಗಳು ಕೋರ್ಟ್ ಮುಂದೆ ಬರುತ್ತಿರಲಿಲ್ಲ. ಸರ್ಕಾರ ಮಾಡಬೇಕಾದ ಕೆಲಸ ಪ್ರಾಧಿಕಾರ ಮತ್ತು ಕೋರ್ಟ್ ಮಾಡಬೇಕಾಗಿದೆ. ಸಮರ್ಪಕ ಸಿಬ್ಬಂದಿ ಇಲ್ಲದೆ ಕಾನೂನು ಸೇವಾ ಪ್ರಾಧಿಕಾರ “ಸಂಘರ್ಷ’ ನಡೆಸುತ್ತಿದೆ. ಶೀಘ್ರದಲ್ಲೇ ಅದಕ್ಕೆ ಪರಿಹಾರ ಸಿಗಲಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾ. ಬಿ.ವೀರಪ್ಪ ಅವರು ತಿಳಿಸಿದರು.
ಇದನ್ನೂ ಓದಿ:ಬಂಡವಾಳ ಆಕರ್ಷಿಸಲು ಬೆಂಗಳೂರಿನಲ್ಲಿ ಮೊರಾಕ್ಕೊ ರೋಡ್-ಶೋ
ಮೂರು ವಾರ ಕಾಲಾವಕಾಶ:
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ವಾದ ಮಂಡಿಸಿ, ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಆಘಾತಕಾರಿ ಅಂಶಗಳು ಇವೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿ, ಮಹಿಳಾ ಶೌಚಾಲಯಕ್ಕೆ ಕಿಟಕಿ ಬಿಟ್ಟಿರುವುದು, ಸಾರ್ವಜನಿಕ ಶೌಚಾಲಯವನ್ನು ಅಡುಗೆ ಕೋಣೆ ಮಾಡಿರುವ ಫೋಟೋಗಳನ್ನು ನ್ಯಾಯಪೀಠಕ್ಕೆ ನೀಡಿದರು. ಇದಕ್ಕೆ ನ್ಯಾಯಪೀಠ ಬಿಬಿಎಂಪಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿತು.ಇದಕ್ಕೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ, ಕಾನೂನು ಸೇವಾ ಪ್ರಾಧಿಕಾರದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು ಮೂರು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಬಿಬಿಎಂಪಿಗೆ ಮೂರು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ, ಶೌಚಾಲಯಗಳನ್ನು ಮೇಲ್ದರ್ಜೆಗೇರಿಸುವ ಬಿಬಿಎಂಪಿ ಕಾರ್ಯವನ್ನು ಪರಿಶೀಲಿಸುವಂತೆ ಕಾನೂನು ಸೇವಾ ಪ್ರಾಧಿಕಾರದ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.