ಬೆಂಗಳೂರು: ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಕಾಂಗ್ರೆಸ್, ಜೆಡಿಎಸ್ ಕುತಂತ್ರ ಫಲಿಸುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಅವರಿಗೆ ಬಲ ತುಂಬಲು ಗೃಹಲಕ್ಷ್ಮೀ ಬಡಾವಣೆಯ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಅಪವಿತ್ರ ಮೈತ್ರಿ ಸರ್ಕಾರದಿಂದ ಹೊರಬಂದ ಶಾಸಕರನ್ನು ಸೋಲಿಸಲು ಕಾಂಗ್ರೆಸ್, ಜೆಡಿಎಸ್‌ಗಳು ಕುತಂತ್ರ ನಡೆಸಿವೆ. ಇದರೊಂದಿಗೆ ಬಿಜೆಪಿ ಸರ್ಕಾರ ಅಸ್ಥಿರಗೊಳಿಸುವುದಕ್ಕೆ ಕೈ ಹಾಕಿವೆ. ಅವರ ಪ್ರಯತ್ನ ವಿಫಲವಾಗುವಂತೆ ಮೈಮರೆಯದೇ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಮಾತನಾಡಿ, ಕ್ಷೇತ್ರದ ನಿವಾಸಿಗಳೊಂದಿಗೆ ಉತ್ತಮ ಒಡನಾಟ ಹೊಂದಲು ಹಾಗೂ ಸಂಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುವ ದೃಷ್ಟಿಯಿಂದ ಕಚೇರಿ ತೆರಯಲಾಗಿದೆ. ಸ್ವಾರ್ಥ ಸಾಧನೆಗಾಗಿ ನಾನು ರಾಜೀನಾಮೆ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಸಿಗದ ಹಿನ್ನಲೆಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದು ಹೊರಬಂದಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕ ಉತ್ತರ ನೀಡಿ ಎಂದು ಹೇಳಿದರು.
ಕ್ಷೇತ್ರದಲ್ಲಿ ಬಡವರು ಜೀವನ ಕಟ್ಟಿಕೊಳ್ಳಲು ಅಗತ್ಯವಿರುವ ಸಹಾಯ ಸಹಕಾರ ನೀಡುವುದು ನನ್ನ ಮಹದಾಸೆಯಾಗಿದೆ. ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿದರೆ ಅಶಕ್ತರಿಗೆ ಆಸರೆ ಒದಗಿಸಲಾಗುವುದು ಎಂದು ಹೇಳಿದರು. ಕಮಲಾನಗರ, ಬಸವೇಶ್ವರನಗರ, ಇತರೆಡೆಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ ಮಾಜಿ ಶಾಸಕ ಜಗ್ಗೇಶ್ ಮಾತನಾಡಿ, ಸ್ನಾನಕ್ಕೆ ನದಿ ನೀರು ಶ್ರೇಷ್ಠ. ಅದರಲ್ಲೂ ಎರಡು ನದಿಗಳು ಕೂಡುವ ಸಂಗಮ ಸ್ಥಳದಲ್ಲಿ ಸ್ನಾನ ಮಾಡುವುದು ಪವಿತ್ರ ಎಂಬ ಭಾವನೆಯಿದೆ. ಜೆಡಿಎಸ್‌ನ ಗೋಪಾಲಯ್ಯ ಎಂಬ ನದಿ ಬಿಜೆಪಿಯ ನದಿಯೊಂದಿಗೆ ಸಮ್ಮಿಲನವಾಗಿರುವುದರಿಂದ ಶ್ರೇಷ್ಠತೆ ಹೆಚ್ಚಿದೆ.
ಗೋಪಾಲಯ್ಯರನ್ನು ವಿಜಯಶಾಲಿಯನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಸಚಿವ ಸುರೇಶ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಪಾಲಿಕೆ ಮಾಜಿ ಉಪಮೇಯರ್ ಎಸ್.ಹರೀಶ್, ನಗರ ಬಿಜೆಪಿ ಹೋಟೆಲ್ ಮಾಲೀಕರ ಪ್ರಕೋಷ್ಠದ ಸಂಚಾಲಕ ರಾಘವೇಂದ್ರ ಶೆಟ್ಟಿ ಪ್ರಚಾರ ನಡೆಸಿದರು.