ಬೆಂಗಳೂರು: ಆರು ತಿಂಗಳು ಯಶಸ್ವಿಯಾಗಿ ಅಧಿಕಾರಾವಧಿ ಪೂರೈಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಲೋಕಾಯುಕ್ತ ಸಂಸ್ಥೆ ಬಲಪಡಿಸುವ ಕಾರ್ಯವನ್ನು ಬಹುತೇಕ ಮರೆತುಬಿಟ್ಟಿದೆ. ಕಳೆದ ಏಳು ತಿಂಗಳುಗಳಿಂದ ಖಾಲಿ ಉಳಿದಿರುವ ಉಪಲೋಕಾಯುಕ್ತ-2 ಸ್ಥಾನವನ್ನು ಭರ್ತಿ ಮಾಡುವ ಕುರಿತು ರಾಜ್ಯ ಸರಕಾರ ಇದುವರೆಗೂ ಯಾವುದೇ ಪ್ರಯತ್ನ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ. ಪರಿಣಾಮ ಉಪಲೋಕಾಯುಕ್ತರು-2 ವಿಚಾರಣೆ ನಡೆಸ ಬೇಕಿದ್ದ ಸರಕಾರಿ ಅಧಿಕಾರಿಗಳ ವಿರುದ್ಧದ 2,500ಕ್ಕೂ ಅಧಿಕ ದೂರುಗಳ ವಿಚಾರಣೆ ಮೇಲೆ ಕರಿನೆರಳು ಆವರಿಸಿದೆ.
ಈ ಹಿಂದೆ ಉಪಲೋಕಾಯುಕ್ತ-2 ಆಗಿದ್ದ ನ್ಯಾ| ಸುಭಾಷ್ ಬಿ. ಅಡಿ ಅವರು ಮಾರ್ಚ್‌ನಲ್ಲಿ ಸೇವೆಯಿಂದ ನಿವೃತ್ತರಾದರು. ಅವರ ಸ್ಥಾನ ತುಂಬಲು ಹಿಂದಿನ ಕಾಂಗ್ರೆಸ್ ಸರಕಾರ ಮುಂದಾಗಿತ್ತು. ಈ ವೇಳೆ ನಿವೃತ್ತ ನ್ಯಾಯಮೂರ್ತಿಗಳಾದ ಅಶೋಕ್ ಬಿ. ಹಿಂಚಿಗೇರಿ, ನ್ಯಾಯಮೂರ್ತಿ ಅಜಿತ್ ಜೆ. ಗುಂಜಾಳ್ ಅವರ ಹೆಸರೂ ಕೇಳಿಬಂದಿತ್ತು. ಆದರೆ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಮೂಲ ವೇತನ 40,050 ರೂ. ಪಡೆಯುವ ಸರಕಾರಿ ನೌಕರರ ವಿರುದ್ಧದ ಕರ್ತವ್ಯ ಲೋಪ, ಅಧಿಕಾರ ದುರ್ಬಳಕೆ ಸಹಿತ ಇನ್ನಿತರ ದೂರುಗಳನ್ನು ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಉಪಲೋಕಾಯುಕ್ತರಿಗಿದೆ. ಈ ಕುರಿತ ದೂರುಗಳ ವಿಚಾರಣೆಯನ್ನು ಇಬ್ಬರು ಉಪಲೋಕಾಯುಕ್ತರು ನಡೆಸಲಿದ್ದಾರೆ.ಸುಮಾರು 2,500ಕ್ಕೂ ಅಧಿಕ ದೂರುಗಳು ವಿಚಾರಣೆ ವಿಳಂಬವಾಗುತ್ತಿದೆ. ನೇಮಕ ಪ್ರಕ್ರಿಯೆಯ ಬಳಿಕವಷ್ಟೇ ಇದು ವೇಗ ಪಡೆಯುವ ನಿರೀಕ್ಷೆ ಇದೆ.
ಲೋಕಾಯುಕ್ತ ಸಂಸ್ಥೆಯಲ್ಲಿ ಎಂದಿನಂತೆ ಬಹಳಷ್ಟು ಕಾರ್ಯತತ್ಪರತೆಯ ಕೆಲಸ ನಡೆಯುತ್ತಿದೆ.ಉಪಲೋಕಾಯುಕ್ತರ ನೇಮಕಾತಿ ಬಗ್ಗೆ ಸರಕಾರ ಸ್ಪಂದಿಸುವ ವಿಶ್ವಾಸವಿದೆ.
– ನ್ಯಾ|ಪಿ. ವಿಶ್ವನಾಥ ಶೆಟ್ಟಿ ಲೋಕಾಯುಕ್ತರು
ಮಂಜುನಾಥ್ ಲಘುಮೇನಹಳ್ಳಿ