Advertisement

Politics: ಸರಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ ; ಆರಗ ಜ್ಞಾನೇಂದ್ರ

11:46 PM Feb 13, 2024 | Pranav MS |

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಸರಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ ಎಂದು ವಿಪಕ್ಷ ಬಿಜೆಪಿಯ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಆರೋಪಿಸಿದರು.

Advertisement

ಮಂಗಳವಾರ ಪ್ರಶ್ನೋತ್ತರ ಕಲಾಪಕ್ಕೂ ಮುನ್ನ ಕಾನೂನು ಸುವ್ಯವಸ್ಥೆ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ವಿಪಕ್ಷ ಸದಸ್ಯರು ಪಟ್ಟು ಹಿಡಿದರು. ಕಳೆದ ಅಧಿವೇಶನದ ಸಂದರ್ಭದಲ್ಲೇ ಕಾನೂನು-ಸುವ್ಯವಸ್ಥೆ ಕುರಿತು ಚರ್ಚೆಗೆ ಕೇಳಿದ್ದೆವು. ಈಗ ನಿಲುವಳಿ ಸೂಚನೆಗಾಗಿ ಬೆಳಗ್ಗೆಯೇ ನೋಟಿಸ್‌ ಕೊಟ್ಟಿದ್ದೇವೆ. ಪ್ರಶ್ನೋತ್ತರ ಬದಿಗೊತ್ತಿ ಇದಕ್ಕೆ ಅವಕಾಶ ಕೊಡಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಹಾಗೂ ವಿ. ಸುನೀಲ್‌ ಕುಮಾರ್‌ ಆಗ್ರಹಿಸಿದರು.

ಸ್ಪೀಕರ್‌ ಖಾದರ್‌ ಮಧ್ಯಪ್ರವೇಶಿಸಿ, ಕೊಬ್ಬರಿ ಬೆಂಬಲ ಬೆಲೆ ವಿಚಾರವಾಗಿ ಜೆಡಿಎಸ್‌ನವರು ನಿಲುವಳಿ ಸೂಚನೆ ಕೊಟ್ಟಿದ್ದಾರೆ ಎನ್ನುತ್ತಿದ್ದಂತೆ, ನಿಯಮದ ಪ್ರಕಾರ ಅಧಿಕೃತ ವಿರೋಧ ಪಕ್ಷ ನಾವು. ನಮಗೆ ಅವಕಾಶ ಕೊಡಿ ಎಂದು ವಿಪಕ್ಷ ನಾಯಕ ಅಶೋಕ್‌ ಹೇಳಿದರು. ಮಾತು ಮುಂದುವರಿಸಿದ ಸ್ಪೀಕರ್‌, ಮೊದಲು ಕೊಟ್ಟವರಿಗೆ ಆದ್ಯತೆ. ನಾಳೆ ನೋಟಿಸ್‌ ಕೊಡಿ. ಶೂನ್ಯವೇಳೆಯಲ್ಲಿ ಅವಕಾಶ ಕೊಡುತ್ತೇನೆ ಎಂದರು. ಆಶೋಕ್‌ ಮಾತನಾಡುತ್ತ, ಜೆಡಿಎಸ್‌ನವರಿಗೆ ಕೊಡಬೇಡಿ ಎನ್ನುತ್ತಿಲ್ಲ. ಅವರೂ ನಮ್ಮ ಜತೆಗಾರರು. ನಾವು ಇದನ್ನು ಬೆಳಗಾವಿ ಅಧಿವೇಶನದಲ್ಲಿಯೇ ಕೊಟ್ಟಿದ್ದೆವು ಎಂದರು.
ಸುನೀಲ್‌ ಕುಮಾರ್‌ ಮಾತನಾಡಿ, ಒಂದಕ್ಕಿಂತ ಹೆಚ್ಚು ನಿಲುವಳಿ ಬಂದಾಗ ಅಧಿಕೃತ ವಿಪಕ್ಷಕ್ಕೆ ಕೊಡಬೇಕೆಂದು ನಿಯಮದಲ್ಲೇ ಇದೆ ನೋಡಿ ಎಂದರು. ಕಾನೂನು ಸುವ್ಯವಸ್ಥೆ ವಿಚಾರವನ್ನು ನಿಲುವಳಿ ಸೂಚನೆ ಅಡಿಯಲ್ಲಿ ಚರ್ಚಿಸಲು ಬರುವುದೇ ಇಲ್ಲ ಎಂದು ಸಚಿವ ಪರಮೇಶ್ವರ್‌ ಆಕ್ಷೇಪಿಸಿದರು.

ಪ್ರಿಯಾಂಕ್‌ ಖರ್ಗೆ ವಿರುದ್ಧ ಮುಗಿಬಿದ್ದ ಬಿಜೆಪಿ
ಚರ್ಚೆ ನಡುವೆ ಮಾತಿಗಿಳಿದ ಸಚಿವ ಪ್ರಿಯಾಂಕ್‌ ಖರ್ಗೆ, ಇವರೇ ಕಾನೂನು ಭಂಗ ಮಾಡಿ, ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎನ್ನುತ್ತಿದ್ದಾರೆ. ಕಲಾಪದ ಕಾರ್ಯಸೂಚಿ ಪಟ್ಟಿಯಲ್ಲಿರುವಂತೆ ಹೋಗೋಣ. ಅನಂತರ ಪರಶುರಾಮ ಪ್ರತಿಮೆಯಿಂದ ಹಿಡಿದು ನ್ಯಾ| ವೀರಪ್ಪ ಸಮಿತಿವರೆಗೂ ಚರ್ಚಿಸೋಣ. ಮಂಡ್ಯದ ವಿಚಾರವನ್ನೂ ಚರ್ಚಿಸಿ, ಬಿಟ್‌ಕಾಯಿನ್‌ ಎಫ್ಐಆರ್‌ ಆಗಿದೆ ಅದನ್ನೂ ಮಾಡೋಣ ಎಂದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು, ಪ್ರಿಯಾಂಕ್‌ ವಿರುದ್ಧ ಮುಗಿಬಿದ್ದರು. ಯಾವ ವಿಚಾರ ಚರ್ಚಿಸಬೇಕೆಂಬುದು ನಿಮ್ಮ ಹತ್ತಿರ ಹೇಳಿಸಿಕೊಳ್ಳಬೇಕಿಲ್ಲ ಎಂದು ಸುನೀಲ್‌ ಕುಮಾರ್‌ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next