Advertisement

Kannada: ಪ್ರಶಸ್ತಿ ಪುರಸ್ಕೃತರನ್ನು ಸಮ್ಮಾನಿಸುವುದನ್ನೇ ಮರೆತ ಸರಕಾರ!

11:49 PM Oct 31, 2023 | Team Udayavani |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಹಿಂದೆ ವಿವಿಧ ಕ್ಷೇತ್ರದ ಸಾಧಕರನ್ನು ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ. ಆದರೆ ಆ ಸಾಧಕರನ್ನು ಸಮ್ಮಾನಿಸುವುದನ್ನೇ ಮರೆತು ಬಿಟ್ಟಿದೆ!

Advertisement

ಇಲಾಖೆಯು 2020-21 ಮತ್ತು 2021-22ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಈಗಾಗಲೇ ಘೋಷಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರನ್ನು ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ಸಂತ ಶಿಶುನಾಳ ಶರೀಫರ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಶಾಂತಲಾ ನಾಟ್ಯರಾಣಿ ಪ್ರಶಸ್ತಿ, ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗೆ ಆಯ್ಕೆ ಮಾಡಿದ್ದರೂ ಇದುವರೆಗೂ ಆ ಸಾಧಕರನ್ನು ಸಮ್ಮಾನಿಸಿಲ್ಲ.

ಈ ಹಿಂದೆ ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ ಈ ಎಲ್ಲ ಪ್ರಶಸ್ತಿಗಳನ್ನು ಇಲಾಖೆ ಪ್ರಕಟಿಸಿತ್ತು. ಚುನಾವಣ ನೀತಿ ಸಂಹಿತೆ, ಅಂದಿನ ಮುಖ್ಯಮಂತ್ರಿಗಳ ದಿನಾಂಕ ಹೊಂದಾಣಿಕೆ ಮತ್ತಿತರ ತಾಂತ್ರಿಕ ಕಾರಣಗಳಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭವೇ ನಡೆಯಲಿಲ್ಲ. ಪ್ರಶಸ್ತಿ ಘೋಷಣೆ ಆಗಿರುವ ಸಾಧಕರು ಕೂಡ ಸರಕಾರ ಸಮಾರಂಭ ಆಯೋಜಿಸಿ ಸಮ್ಮಾನಿಸಲಿದೆ ಎಂಬ ಭರವಸೆಯಲ್ಲೇ ಕಾಯುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಸರು ಹೇಳಲು ಇಚ್ಛಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ಈ ಹಿಂದಿನ ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ ಜಕಣಾಚಾರಿ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಈವರೆಗೂ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿಲ್ಲ ಎಂದು ಹೇಳಿದ್ದಾರೆ.

ಸಿಎಂ ದಿನಾಂಕ ಹೊಂದಾಣಿಕೆ ಆಗಿರಲಿಲ್ಲ
ಈ ಎರಡು ಸಾಲಿನ ವಿವಿಧ ಪ್ರಶಸ್ತಿಗಳ ಘೋಷಣೆ ಸಮಿತಿಯಲ್ಲಿ ನಾನು ಕೂಡ ಸದಸ್ಯನಾಗಿದ್ದೆ. ವಿವಿಧ ವಲಯದ ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಚುನಾವಣ ನೀತಿ ಸಂಹಿತೆ ಸೇರಿ ವಿವಿಧ ಕಾರಣಗಳಿಂದಾಗಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಆಗಲೇ ಇಲ್ಲ. ಈಗಲಾದರೂ ನಾಡಿನ ಹಿರಿಯ ಸಾಧಕರಿಗೆ ಆ ಪ್ರಶಸ್ತಿಗಳನ್ನು ಸರಕಾರ ಪ್ರದಾನ ಮಾಡಲಿ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಹೇಳುತ್ತಾರೆ. ಆಗಿನ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಪ್ರಶಸ್ತಿ ಪ್ರದಾನ ಮಾಡಬೇಕೆಂಬ ಆಲೋಚನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರದ್ದಾಗಿತ್ತು. ಆದರೆ ಸಿಎಂ ದಿನಾಂಕ ಹೊಂದಾಣಿಕೆ ಮತ್ತಿತರ ಕಾರಣಗಳಿಂದಾಗಿ ಸಮಾರಂಭ ಮುಂದಕ್ಕೆ ಹೋಯಿತು. ಈಗಲಾದರೂ ಸರಕಾರ ಆಯಾ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಿ ಎನ್ನುತ್ತಾರೆ.

Advertisement

“ಶಾಂತಲಾ ನಾಟ್ಯರಾಣಿ ಪ್ರಶಸ್ತಿ’ಗೆ ಬೆಂಗಳೂರಿನ ಹೆಸರಾಂತ ಕೂಚುಪುಡಿ ಕಲಾವಿದೆ ಬಿ.ಎಸ್‌. ಸುನಂದಾದೇವಿ ಅವರನ್ನು ಆಯ್ಕೆ ಮಾಡಲಾಗಿದ್ದು, ಇನ್ನೂ ಪ್ರಶಸ್ತಿ ಪ್ರದಾನ ಮಾಡಿಲ್ಲ ಎಂದು ಕರ್ನಾಟಕ ಸಂಗೀತ ಮತ್ತು ನೃತ್ಯಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಅನೂರು ಅನಂತ ಕೃಷ್ಣಶರ್ಮ ಹೇಳುತ್ತಾರೆ.

ಹಿಂದಿನ ಸರಕಾರದ ಅವಧಿಯಲ್ಲಿ “ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ ನನ್ನ ಹೆಸರು ಘೋಷಣೆ ಮಾಡಲಾಗಿತ್ತು. ಆದರೆ ಈವರೆಗೂ ಆ ಪ್ರಶಸ್ತಿ ಪ್ರದಾನ ಮಾಡಿಲ್ಲ. ಹೊಸ ಸರಕಾರ ಬಂದಿದೆ. ಪ್ರಶಸ್ತಿ ಪ್ರದಾನ ಯಾವಾಗ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ.

– ಗಾಯಿತ್ರಿ ದೇಸಾಯಿ, ಹಿರಿಯ ಚಿತ್ರಕಲಾವಿದೆ, ಧಾರವಾಡ

2021-22ನೇ ಸಾಲಿನ “ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ಗೆ ಆಯ್ಕೆ ಆಗಿದ್ದೆ.ಆದರೆ ಈವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿ ಪ್ರದಾನ ಮಾಡಿಲ್ಲ. ಇಲಾಖೆ ಅಧಿಕಾರಿಗಳಿಂದಲೂ ಯಾವ ಮಾಹಿತಿಯಿಲ್ಲ. ನಾನು ಕೂಡ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
– ಮಾಲತಿ ಪಟ್ಟಣ ಶೆಟ್ಟಿ, ಲೇಖಕಿ

 ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next