ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಮಕ್ಕಳಂತೆ ಆಟವಾಡಿ ನಾಟಕ ಮಾಡುತ್ತಿದ್ದಾರೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ನಗರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಯಾವ ರೀತಿಯಲ್ಲಿ ಆಡಳಿತ ಮಾಡಬೇಕೆಂದು ಪ್ರಾಮಾಣಿಕವಾಗಿ ಗೊತ್ತಿಲ್ಲ, ಕೊರೊನಾ ತಡೆಹಿಡಿಯುವ ಬಗ್ಗೆ ಎಷ್ಟು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕೋ ಅದನ್ನಾ ಕೈಗೊಳ್ಳುತ್ತಿಲ್ಲ, ಸ್ಪಷ್ಪವಾದ ನೀತಿ-ನಿಯಮವಿಲ್ಲ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನರ ಆರೋಗ್ಯದ ಬಗ್ಗೆ ಆಟವಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಈ ಹಿಂದೆ ಖರೀದಿ ಮಾಡಿದ್ದ ಹಾಸಿಗೆಗಳು, ಮಂಚಗಳು, ವೆಂಟಿಲೇಟರ್ ಎಷ್ಟು ಅವೆಲ್ಲವೂ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಥಳವಿಲ್ಲ ಪರಿಸ್ಥಿತಿ ಭಯಂಕರವಾಗಿದೆ ಸರ್ಕಾರ ನಾಟಕ ಮಾಡುತ್ತಿದೆ ಯಾರಿಗೂ ಜವಾಬ್ದಾರಿಯಿಲ್ಲ ಒಂದು ಚಿಂತನೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಕೊರೊನಾ ಹೋಗಲಾಡಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಕೊರೊನಾ ಸೋಂಕಿನ ಬಗ್ಗೆ ಸ್ಪಷ್ಟವಾದ ನಿಲುವು ಸರ್ಕಾರಕ್ಕಿಲ್ಲ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲವಾಗಿದೆಯೆಂದು ದೂರಿದ ಅವರು ಸೋಂಕು ನಿಯಂತ್ರಿಸಲು ರಾಜಧಾನಿ ಬೆಂಗಳೂರಿನಲ್ಲಿ,ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಏನು ವ್ಯವಸ್ಥೆ ಮಾಡಿದ್ದೀರಿ ಎಂಬುದರ ಬಗ್ಗೆ ಕೇವಲ ಅಂಕಿ ಅಂಶಗಳಿಂದ ಏನು ಪ್ರಯೋಜನವಿಲ್ಲ.
ಯಾವ ರೀತಿಯ ಅನುಷ್ಠಾನ ಮಾಡಿದ್ದೀರಿ ಎಂಬುದು ಮುಖ್ಯ ಪರಿಸ್ಥಿತಿ ಗಂಭೀರವಾಗಿದೆ ಲಘುವಾಗಿ ಪರಿಗಣಿಸುವುದು ಸೂಕ್ತವಲ್ಲ. ಆರೋಗ್ಯ, ಗೃಹ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ನಿಮ್ಮ ಬೇಜವಾಬ್ದಾರಿಯಿಂದ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಬಂದಿದೆ ಎಂದು ಆರೋಪಿಸಿದರು.