Advertisement
ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರೇ ಜೆಡಿಎಸ್‌ನೊಂದಿಗಿನ ಸಂಬಂಧ ಕಳಚಿಕೊಳ್ಳಬೇಕು ಎಂದು ಬೀದಿಗಿಳಿದಿದ್ದು, ರಾಜಕೀಯದಲ್ಲಿ ಏನು ಬೇಕಾದರೂ ಏರುಪೇರಾಗಬಹುದು. ನಾವು ಪಕ್ಷ ಸಂಘಟನೆ ಬಲಪಡಿಸುವ ಜತೆಗೆ ಪಕ್ಷ ಬಲವರ್ಧನೆಗೆ ಒತ್ತು ನೀಡಬೇಕು ಎಂದು ಹೇಳಿದರು.
Related Articles
Advertisement
ಪಕ್ಷದಿಂದ 5 ತಂಡಗಳು 20 ಜಿಲ್ಲೆಗಳಲ್ಲಿ ಬರಪೀಡಿತ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದು, ಎಲ್ಲಿಯೂ ಸರ್ಕಾರ ಬರ ನಿರ್ವಹಣೆಗೆ ಕ್ರಮ ಕೈಗೊಂಡಿರುವುದು ಕಂಡುಬಂದಿಲ್ಲ. 155 ತಾಲೂಕು ಬರ ಪೀಡಿತವಾಗಿದ್ದು, ಪರಿಹಾರ ಕಾರ್ಯಗಳಿಗೆ ಸರ್ಕಾರ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಮೊದಲು ಕೊಟ್ಟ ಹಣ ಖರ್ಚು ಮಾಡಲಿ: ಕೇಂದ್ರ ಸರ್ಕಾರವು ರಾಜ್ಯಕ್ಕೆ 950 ಕೋಟಿ ರೂ. ಬರ ಪರಿಹಾರ ವಿತರಿಸಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಳಕೆ ಪ್ರಮಾಣ ಪತ್ರಗಳು ಸಮರ್ಪಕವಾಗಿ ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿಲ್ಲ. ಸದ್ಯ ಕೇಂದ್ರ ಸರ್ಕಾರ ಘೋಷಿಸಿರುವ 950 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಲಿ. ನಂತರ ಹೆಚ್ಚುವರಿ ಪರಿಹಾರ ಕೇಳಿದರೆ ಕೇಂದ್ರ ಸ್ಪಂದಿಸಲಿದೆ ಎಂದು ಹೇಳಿದರು.
ಬೀದಿಗಿಳಿದು ಹೋರಾಟಕ್ಕೆ ಕರೆ: ಕಾಂಗ್ರೆಸ್- ಜೆಡಿಎಸ್ ನಾಯಕರ ಕಚ್ಚಾಟದಿಂದ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದೆ. ನೀರಾವರಿ ಯೋಜನೆಗಳು ಸ್ಥಗಿತವಾಗಿವೆ. 1000 ಅಡಿ ಆಳದಲ್ಲೂ ಅಂತರ್ಜಲ ಸಿಗುತ್ತಿಲ್ಲ. ಬರದಿಂದಾಗಿ ಜನರ ಸ್ಥಿತಿ ಶೋಚನೀಯವಾಗಿದ್ದು, ಸರ್ಕಾರ ಅವರ ಬಗ್ಗೆ ಕಾಳಜಿ ತೋರುತ್ತಿಲ್ಲ. ಹಾಗಾಗಿ ತಾಲ್ಲೂಕು ಮಟ್ಟದಲ್ಲಿ ಬೀದಿಗಿಳಿದು ಹೋರಾಟ ನಡೆಸಿ ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರವನ್ನು ಎಚ್ಚರಿಸಬೇಕಿದೆ ಎಂದು ಕರೆ ನೀಡಿದರು.
ಬಜೆಟ್ ವೇಳೆ ಬಣ್ಣ ಬಯಲಾಗಲಿದೆ: ಫೆ.6ರಂದು ರಾಜ್ಯಪಾಲರು ಜಂಟಿ ಅಧಿವೇಶನ ಭಾಷಣ ಮಾಡಲಿದ್ದಾರೆ. ಫೆ.8ರಂದು ರಾಜ್ಯ ಬಜೆಟ್ ಮಂಡನೆಗೆ ಸರ್ಕಾರ ಮುಂದಾಗಿದ್ದು, ಬಣ್ಣ ಬಯಲಾಗಲಿದೆ. ತೆರಿಗೆದಾರರ ಹಣ ಸದ್ಬಳಕೆಯಾಗುತ್ತಿಲ್ಲ. ಸಮಾಜದಲ್ಲಿ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕೆ ಸರ್ಕಾರ ಗಮನ ನೀಡುತ್ತಿಲ್ಲ.
ಹಾಗಾಗಿ ಒಂದೆಡೆ ಲೋಕಸಭಾ ಚುನಾವಣೆಗೆ ಸಜ್ಜಾಗುವ ಜತೆಗೆ ಮತ್ತೂಂದೆಡೆ ಬರದಿಂದ ತತ್ತರಿಸಿರುವ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಲು ನೆರವಾಗಬೇಕು. ನಾವು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾರಂಭಿಸಿದ ಬಳಿಕ ಸಚಿವರು ಬರ ಪ್ರದೇಶಗಳತ್ತ ಮುಖ ಮಾಡಿದ್ದಾರೆ. ಆಗ ಜನರು ಸಚಿವರಿಗೆ ಛೀಮಾರಿ ಹಾಕಿ ಊರಿನೊಳಗೆ ಸೇರಿಸದೆ ವಾಪಸ್ ಕಳಿಸಿರುವುದು ಸರ್ಕಾರದ ಬಗೆಗಿನ ಜನರ ಆಕ್ರೋಶ ತೋರಿಸುತ್ತದೆ ಎಂದು ತಿಳಿಸಿದರು.