Advertisement

Government; ‘ಬಾಗಿಲಿಗೆ ಬಂತು ಸರಕಾರ’ಪರಿಣಾಮಕಾರಿಯಾಗಲಿ

11:57 PM Jan 03, 2024 | Team Udayavani |

ಬೆಂಗಳೂರಿನ ನಾಗರಿಕರು ಅಹವಾಲು ಹೊತ್ತು ಸಚಿವರ ಮನೆ ಬಾಗಿಲಿಗೆ ಅಲೆಯುವುದನ್ನು ತಪ್ಪಿಸಲು ಪ್ರಾರಂಭಿಸಿರುವ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಜನಸ್ನೇಹಿ ಆಡಳಿತ ದೃಷ್ಟಿಯಿಂದ ಸದಾಶಯದ ನಡೆಯಾಗಿದೆ. ಭಾರಿ ಬೆಂಬಲದೊಂದಿಗೆ ಆಯ್ಕೆಯಾದ ಸರಕಾರ ತನ್ನ ಆಡಳಿತ ವೈಖರಿ ಹೇಗಿದೆ ಎಂಬುದನ್ನು ಸ್ವಯಂ ಅರ್ಥೈಸಿಕೊಳ್ಳಲು ಮುಂದಾಗಿರುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯ ನಡೆಯಾದರೂ ಅದು ಘೋಷಣೆಗೆ ಮಾತ್ರ ಸೀಮಿತವಾಗದೇ ನಿಜಾರ್ಥದಲ್ಲಿ ಜಾರಿಯಾಗಬೇಕಿದೆ.

Advertisement

ಬೆಂಗಳೂರಿನಲ್ಲಿ ಪ್ರಾರಂಭಗೊಂಡಿರುವ ಈ ಸೇವೆ ಈ ಮಾಸಾಂತ್ಯದವರೆಗೆ ಒಟ್ಟು ಹತ್ತು ದಿನಗಳ ಕಾಲ ನಡೆಯಲಿದೆ. ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಟಿಸಿ, ಕಂದಾಯ ಸೇರಿದಂತೆ ಹಲವು ಇಲಾಖೆಗಳಲ್ಲಿನ ಸಮಸ್ಯೆ ಬಗ್ಗೆ ನಾಗರಿಕರಿಂದ ಖುದ್ದು ಅಹವಾಲು ಪಡೆಯಲಾಗುತ್ತದೆ. 8 ವಲಯಗಳಲ್ಲಿ ತಲಾ ಒಂದು ದಿನ ಈ ಕಾರ್ಯಕ್ರಮ ನಡೆಯುತ್ತದೆ. ಈಗಾಗಲೇ ರಾಜ್ಯಾದ್ಯಂತ ಆಗಾಗ ನಡೆಯುತ್ತಿರುವ ಜನಸ್ಪಂದನದ ಮಾದರಿಯಲ್ಲೇ ಇದು ನಡೆಯಲಿದೆಯಾದರೂ ನಗರದ ಸಮಸ್ಯೆ ಗಳ ಆಳ-ಅಗಲದ ಮೂಲ ಹುಡುಕುವುದು ಹೇಳಿಕೊಳ್ಳುವಷ್ಟು ಸರಳವಲ್ಲ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾಲದಿಂದ ಇಲ್ಲಿಯವರೆಗೂ ಪ್ರಚಾರ ದಲ್ಲಿರುವ ಜನಸ್ಪಂದನ ಕಾರ್ಯಕ್ರಮ ಎಷ್ಟರಮಟ್ಟಿಗೆ ಸಾರ್ಥಕವಾಗಿದೆ ಎಂಬುದು ಪ್ರತ್ಯೇಕ ಅಧ್ಯಯನದ ಸರಕಾದರೂ ಆ ಕ್ಷಣಕ್ಕೆ ಆಡಳಿತ ಯಂತ್ರಕ್ಕೆ ಚುರುಕು ನೀಡುವುದಂತೂ ಸುಳ್ಳಲ್ಲ. ಖುದ್ದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಡಳಿತ ಕೇಂದ್ರದಲ್ಲಿ ಕುಳಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದಾಗ ಜಡ್ಡುಗಟ್ಟಿದ ಆಡಳಿತ ತುಸು ಮಟ್ಟಕ್ಕಾದರೂ ಸ್ಪಂದನ ಶೀಲವಾಗುತ್ತದೆ. ತಮ್ಮನ್ನು ಪ್ರಶ್ನಿಸುವವರು ಇದ್ದಾರೆ ಎಂಬ ಭಾವ ಅಧಿಕಾರಿ ವಲಯದಲ್ಲಿ ಬೆಳೆಯುತ್ತದೆ. ವಿಧಾನಸೌಧದಿಂದ ದೂರ ಇರುವ ಜಿಲ್ಲಾ ಕೇಂದ್ರ ಗಳಲ್ಲಿ ನಡೆಯುವ ಈ ಬೆಳವಣಿಗೆಗಳನ್ನು ಮಾತ್ರ ಆಡಳಿತಾತ್ಮಕ ಚಲನಶೀಲತೆ ಎಂದು ಪರಿಗಣಿಸಬಹುದಾಗಿದೆ. ಹೀಗಾಗಿ “ಬಾಗಿಲಿಗೆ ಬಂತು ಸರಕಾರ ಸೇವೆಗೆ ಇರಲಿ ಸಹಕಾರ’ ಮಾದರಿಯ ಕಾರ್ಯಕ್ರಮಗಳನ್ನು ಜನರು ನಿರೀಕ್ಷೆಯ ಕಣ್ಣುಗಳಿಂದ ಗಮನಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಅನಿವಾರ್ಯತೆ ಇದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲ ಜಿಲ್ಲೆಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಿದ್ದು, ಮೊದಲ ಹಂತದಲ್ಲಿ ನಡೆದಿದೆ ಕೂಡ. ಆದರೆ ಅವುಗಳ ಫ‌ಲಶ್ರುತಿ ಬಗ್ಗೆಯೂ ಸರಕಾರ ಗಂಭೀರವಾಗಿ ಗಮನಹರಿ ಸಬೇಕು. ಇಂಥ ಅಭಿಯಾನಗಳಿಗೆ ಬಂದು ಮನವಿ ನೀಡುವವರು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕಾಗಿ ತಬರನಂತೆ ಅಲೆದಿರುತ್ತಾರೆ. ಕಚೇರಿಯಿಂದ ಕಚೇರಿಗೆ ದೂರು ಹೊತ್ತು ಸುತ್ತಾಡಿ ಚಪ್ಪಲಿ ಸವೆಸಿರುತ್ತಾರೆ. ಇನ್ನು ತಮ್ಮ ನೋವಿಗೆ ಬೆಲೆಯೇ ಇಲ್ಲ ಎಂಬ ಸ್ಥಿತಿಗೆ ಬಂದವರು ಕೊನೆಯ ಪ್ರಯತ್ನವಾಗಿ ಸರಕಾರದ ಇಂಥ ಅಭಿ ಯಾನದತ್ತ ಧಾವಿಸುತ್ತಾರೆ. ಇಂಥವರೇ ಸಮಾಜದ ಕಟ್ಟಕಡೆಯ ವ್ಯಕ್ತಿ. ಹೀಗಾಗಿ ಇವರ ನೋವಿಗೆ ಧ್ವನಿಯಾಗುವುದು ಸರಕಾರದ ಆದ್ಯ ಕರ್ತವ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಿರುವ ಈ ಕಾರ್ಯಕ್ರಮ ಅತ್ಯಂತ ಸಕಾಲಿಕ. ಇದುವರೆಗೆ ಎಷ್ಟು ದೂರು ಸಲ್ಲಿಸಲಾಗಿದೆ, ಎಷ್ಟನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಎಂದು ಷರಾ ಬರೆಯುವುದಕ್ಕೆ ಇಂಥ ಕಾರ್ಯಕ್ರಮಗಳು ಸೀಮಿತವಾಗಕೂಡದು. ಬೆಂಗಳೂರಿನಂಥ ಮಹಾನಗರದಲ್ಲಿ ಖಾತಾ, ಕಂದಾಯ, ಕಸದ ಸಮಸ್ಯೆ ನೀಗಿಸಲಾರದ ಬವಣೆಯಾಗಿದ್ದು, ಇದು ವ್ಯಕ್ತಿಗತವಷ್ಟೇ ಅಲ್ಲದೇ ನಗರ ಸಮಸ್ಯೆಯಾಗಿಯೂ ಪರಿಣಮಿಸಿದೆ. ಇದೆಲ್ಲದಕ್ಕೂ ಪರಿಹಾರ ನೀಡುವ ಸಮಷ್ಠಿ ಕಾರ್ಯಕ್ರಮವಾಗಿ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ನಿಲ್ಲಬೇಕಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next