ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಬಳಿಕ ರಾಜ್ಯ ಸರಕಾರ ಸರ್ವಪಕ್ಷ ಸಭೆ ಕರೆದಿದೆ. ಆದರೂ ನಾವು ಬಹಿಷ್ಕರಿಸುವುದಿಲ್ಲ. ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಿ, ನಮ್ಮ ನಿಲುವು ತಿಳಿಸುತ್ತೇವೆ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವರಾದ ಆರ್. ಅಶೋಕ್, ಸಿ.ಟಿ. ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ಅಶ್ವತ್ಥನಾರಾಯಣ ಸೇರಿ ಹಲವು ನಾಯಕರು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಯಾವುದೇ ಕಾರಣಕ್ಕೂ ನಾವು ಸರ್ವಪಕ್ಷ ಸಭೆಯನ್ನು ಬಹಿಷ್ಕಾರ ಮಾಡುವುದಿಲ್ಲ. ಸಭೆಯಲ್ಲಿ ಪಾಲ್ಗೊಂಡು ನಮ್ಮ ನಿಲುವು ತಿಳಿಸುತ್ತೇವೆ ಎಂದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ರಾಜ್ಯ ಸರಕಾರ ಪೂರ್ವಾಪರ ವಿವೇಚನೆ ಇಲ್ಲದೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಮಂಡ್ಯ ಭಾಗದ ರೈತರಿಗೆ ಅನ್ಯಾಯ ಮಾಡಲಾಗಿದೆ. ರಾಜ್ಯದ ನೀರಾವರಿ ಸಚಿವರು ಮತ್ತು ಕೃಷಿ ಸಚಿವರಿಗೆ ರಾಜ್ಯದ ರೈತರ ಕುರಿತು ಕಾಳಜಿ ಇಲ್ಲ. ತಮಿಳುನಾಡು ಸರಕಾರ ರಿಟ್ ಅರ್ಜಿ ದಾಖಲಿಸಿದ ತತ್‌ಕ್ಷಣವೇ ಯಥೇತ್ಛವಾಗಿ ನೀರು ಬಿಟ್ಟಿ¨ªಾರೆ. ಸುಮಾರು 12-13 ಟಿಎಂಸಿ ನೀರನ್ನು ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕುರುವೈ ಬೆಳೆಗೆ 32 ಟಿಎಂಸಿ ಮಾತ್ರ ನೀರನ್ನು ಕೊಡಬೇಕಿದೆ. 1.8 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬೆಳೆ ಬೆಳೆಯಬೇಕೆಂದು ಸೂಚಿಸಿದೆ. ಆದರೆ, ಅರ್ಜಿ ಹಾಕುವುದಕ್ಕೆ ಮೊದಲು 7.4 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದು ತಮಿಳುನಾಡಿನ ಡ್ಯಾಂನಲ್ಲಿದ್ದ 30-32 ಟಿಎಂಸಿ ನೀರನ್ನು ಖಾಲಿ ಮಾಡಿ, ಸುಪ್ರೀಂ ಕೋರ್ಟ್‌ಗೆ ನೀರಿಗಾಗಿ ಅರ್ಜಿ ಸಲ್ಲಿಸಿದ್ಧಾರೆ ಎಂದು ಆರೋಪಿಸಿದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜತೆ ಒಳ ಒಪ್ಪಂದ ಮಾಡಿಕೊಂಡು ನಮ್ಮ ರೈತರಿಗೆ ದ್ರೋಹ ಬಗೆಯಬೇಡಿ. ಡಿ.ಕೆ. ಶಿವಕುಮಾರ್ ಅವರು ಬ್ರಾÂಂಡ್ ಬೆಂಗಳೂರು ಎಂದು ಹೇಳಿಕೊಂಡು ನೀರಾವರಿ ಇಲಾಖೆಯನ್ನು ಮರೆಯಬಾರದು ಎಂದೂ ಆಗ್ರಹಿಸಿದರು.
ಅಧಿಕಾರಕ್ಕೆ ಬರುವ ಮುನ್ನ ಮೇಕೆದಾಟು ಎಂದವರೀಗ ಮೇಕೆಯೂ ಇಲ್ಲ, ದಾಟೂ ಇಲ್ಲ. ಕೈಗೆ ಅಧಿಕಾರ ಬಂದ ಮೇಲೆ ಕಾವೇರಿನೂ ಇಲ್ಲ, ಮೇಕೆದಾಟೂ ಇಲ್ಲ. ನೀರು ಬಿಟ್ಟು ಕರ್ನಾಟಕದ ರೈತರಿಗೆ ಸರಕಾರ ಅನ್ಯಾಯ ಮಾಡಿದೆ. ಈಗ ಸರ್ವಪಕ್ಷ ಸಭೆ ಕರೆದಿದೆ. ಆದರೂ ನಾವು ಹೋಗುತ್ತೇವೆ. ನಮ್ಮ ನಿಲುವನ್ನು ಅಲ್ಲೇ ತಿಳಿಸುತ್ತೇವೆ.
– ಆರ್. ಅಶೋಕ್,ಮಾಜಿ ಡಿಸಿಎಂ
ಐಎನ್‌ಡಿಐಎ ಸಲುವಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ. ಸ್ಟಾಲಿನ್ ಸ್ನೇಹಕ್ಕೆ ನಾಡಿನ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮಂಡ್ಯದ ಜನರ ಪಾಲಿಗೆ ಶಾಪವಾಗಿರುವ ಕಾಂಗ್ರೆಸ್, ತಮಿಳುನಾಡಿಗೆ ವರವಾಗಿದೆ. ನೀರು ಬಿಟ್ಟ ಮೇಲೆ ಇವರು ಸರ್ವಪಕ್ಷ ಸಭೆ ನಡೆಸಿ ಏನು ಪ್ರಯೋಜನ?
– ಸಿ.ಟಿ. ರವಿ, ಮಾಜಿ ಸಚಿವ