ಬಹುದೊಡ್ಡ ಸೂಫಿ ಸಂತ ಇಬ್ರಾಹಿಂ ಹಿಂದೆ ರಾಜನಾಗಿದ್ದವ. ಒಮ್ಮೆ ಆತ ತನ್ನ ಸೇವಕರು, ಆಪ್ತರೊಂದಿಗೆ ತೀರ್ಥಯಾತ್ರೆ ಹೊರಟಿದ್ದ. ಅವನ ಕ್ಯಾರವಾನ್ ಆ ಕಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ಉನ್ನತ ಮಟ್ಟದ ಸಿರಿವಂತಿಕೆ ಯನ್ನು ಹೊಂದಿತ್ತು. ರಾತ್ರಿ ತಂಗುವುದಕ್ಕಾಗಿ ಅತ್ಯಂತ ವಿಲಾಸಿ ಗುಡಾರಗಳಿದ್ದವು, ಅವುಗಳ ಗೂಟಗಳಿಗೆ ಬಂಗಾರವನ್ನೇ ಹೊದೆಸಲಾಗಿತ್ತು. ಅವರು ಪ್ರಯಾಣಿಸುವ ಒಂಟೆಗಳ ಮೇಲೆ ಚಿನ್ನದ ರೇಖೆಗಳುಳ್ಳ ರೇಶಿಮೆಯ ಹಚ್ಚಡ ಗಳನ್ನು ಹಾಸಲಾಗಿತ್ತು. ಇಬ್ರಾಹಿಂ ಅತ್ಯಂತ ಬೆಲೆಬಾಳುವ ಉಡುಗೆಗಳನ್ನು ಧರಿಸಿದ್ದ. ಉಣ್ಣಲು ಬಂಗಾರದ ತಾಟು, ಚಮಚಗಳಿದ್ದವು.
ತೀರ್ಥಯಾತ್ರೆ ಮುಂದುವರಿಯುತ್ತಿದ್ದಾಗ ಇನ್ನೊಬ್ಬ ಸೂಫಿ ಸಂತ ಅದೇ ದಾರಿ ಯಾಗಿ ಬಂದ. ಇಬ್ರಾಹಿಂನ ಸಿರಿವಂತಿಕೆ ಯನ್ನು ಕಂಡ ಆತ ಇವನೆಂಥ ಸೂಫಿ ಸಂತ ಎಂದುಕೊಂಡ. ಅದನ್ನೇ ಇಬ್ರಾಹಿಂ ಬಳಿ ಹೇಳಿದ ಕೂಡ. ಪ್ರತಿಯಾಡಿದ ಇಬ್ರಾಹಿಂ, “ಈಗ ನೀವು ವಿಶ್ರಾಂತಿ ತೆಗೆದುಕೊಳ್ಳಿ. ನಾಳೆ ಬೆಳಗ್ಗೆ ನಾವಿಬ್ಬರೂ ಜತೆ ಯಾಗಿ ಯಾತ್ರೆ ಮುಂದು ವರಿಸೋಣ’ ಎಂದ.
ಮರುದಿನ ಬೆಳಗ್ಗೆ ಕ್ಯಾರವಾನ್, ಸೇವಕರು, ಆಪ್ತರ ಬಳಗವನ್ನು ಹಿಂದೆ ಬಿಟ್ಟು ಅವರಿಬ್ಬರೇ ತೀರ್ಥಯಾತ್ರೆ ಮುಂದು ವರಿಸಿದರು. ಮರುಭೂಮಿ ಯಲ್ಲಿ ಸಾಕಷ್ಟು ದೂರ ನಡೆದ ಬಳಿಕ ಇನ್ನೊಬ್ಬ ಸೂಫಿ ಸಂತನಿಗೆ ತಾನು ಬಿಕ್ಷಾಟನೆಯ ಬಟ್ಟಲನ್ನು ಗುಡಾರದಲ್ಲಿಯೇ ಮರೆತು ಬಂದಿರುವುದು ನೆನಪಾಯಿತು. “ನನ್ನ ಬಟ್ಟಲು ಅಲ್ಲೇ ಉಳಿದಿದೆ. ಹೋಗಿ ತರುವೆ’ ಎಂದು ಆತ ಇಬ್ರಾಹಿಂ ಬಳಿ ಹೇಳಿದ.
“ಗೆಳೆಯನೇ, ನಾನು ನನ್ನದಾದ ಎಲ್ಲವನ್ನೂ ಅಲ್ಲೇ ಬಿಟ್ಟು ಬಂದಿದ್ದೇನೆ. ಸಿರಿವಂತಿಕೆ, ಬಂಧುಬಳಗ ಎಲ್ಲವೂ ಅಲ್ಲೇ ಇವೆ. ನೀನು ಬಿಕ್ಷಾಟನೆಯ ಬಟ್ಟಲಿಗಾಗಿ ಮರುಗುತ್ತಿ ದ್ದೀಯಲ್ಲ! ನನ್ನ ಗುಡಾರದ ಗೂಟಗಳಿಗೆ ಚಿನ್ನ ಹೊದೆಸಲಾಗಿತ್ತು ನಿಜ. ಆದರೆ ಅವು ಮರಳಿನಲ್ಲಿ ಹೂತಿದ್ದವು, ನನ್ನ ಹೃದಯದಲ್ಲಿ ಅಲ್ಲ’ ಎಂದು ಉತ್ತರಿಸಿದ ಇಬ್ರಾಹಿಂ ಮುಂದುವರಿದ.
ನಮ್ಮ ಬಳಿ ಏನಿದೆ- ಏನಿಲ್ಲ, ನಾವೇನು ಉಣ್ಣುತ್ತೇವೆ-ತಿನ್ನುತ್ತೇವೆ, ಎಂಥ ಬಟ್ಟೆ ಹಾಕಿಕೊಳ್ಳುತ್ತೇವೆ, ನಮ್ಮ ಬಂಗಲೆ, ಕಾರು, ವಾಚು- ಇತ್ಯಾದಿಗಳು ಆಂತರಿಕವಾಗಿ ನಾವು ಏನು ಎಂಬುದನ್ನು ನಿರ್ಧರಿಸಬಾರದು. ಬಾಹ್ಯವಾಗಿ ನಾವು ಹೇಗೂ ಇರಬಹುದು. ಆದರೆ ನಾವು ಅಂತರಂಗದಲ್ಲಿ ಏನು ಎಂಬುದು ಬಹಳ ಮುಖ್ಯ. ನಮ್ಮ ಒಳಗನ್ನು ಸ್ವಸ್ಥವಾಗಿ, ಸುಶೀಲವಾಗಿ ಇರಿಸಿಕೊಳ್ಳುವುದು, ಸಹಾನುಭೂತಿಯನ್ನು ಕಾಯ್ದುಕೊಳ್ಳುವುದು, ಸತ್ಯಪರವಾಗಿರುವುದು ಅತ್ಯಂತ ಮುಖ್ಯ.
ಆದಿಮ ಮನುಷ್ಯನ ಕಾಲದಿಂದಲೂ ಸಂಗ್ರಹಿಸುವುದು ಮನುಷ್ಯನ ಮೂಲ ಗುಣಗಳಲ್ಲಿ ಒಂದಾಗಿದೆ. ಈಗಲೂ ಅದು ಮುಂದುವರಿದಿದೆ. ಸಣ್ಣವರಿದ್ದಾಗ ನಾವು ಅಂಚೆಚೀಟಿ ಸಂಗ್ರಹಿಸಿಕೊಳ್ಳುತ್ತಿದ್ದೆವು. ಈಗ ಬಂಗಾರ, ಹಣ ಅಷ್ಟೇ ವ್ಯತ್ಯಾಸ. ಆದರೆ ನಾವು ಏನನ್ನು ಶೇಖರಿಸಿದ್ದೇ ವೆಯೋ ಅದೇ ಬದುಕಲ್ಲ. ಸಂಬಂಧಗಳು, ಕುಟುಂಬ, ಸಂಪತ್ತು, ಜ್ಞಾನ – ಇವೆಲ್ಲ ಬದುಕನ್ನು ಶೃಂಗರಿಸುವ ಸಾಧನಗಳು ಮಾತ್ರ.
ಆದರೆ ಸಂಗ್ರಹಿಸಿದ ಶೃಂಗಾರಗಳೇ ಬದುಕು ಎಂದುಕೊಂಡಿದ್ದೇವೆ. ಸಂಗ್ರಹಗಳಿಂದಲೂ ಪೂರ್ಣತೆ ಪಡೆದು ಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಶೇಖರಿಸಿದವು ಗಳಿಂದ ಸಂತೃಪ್ತರಾಗಲು ಹೆಣಗಾಡುತ್ತಿ ದ್ದೇವೆ. ಖಾಲಿಯಲ್ಲ ಎಂದು ತೋರಿಸಿ ಕೊಳ್ಳಲು ನಾವು ಪಡುವ ಪಾಡು ಅದು.
ನೆನಪಿಡಿ, ಬದುಕಿನ ಅತ್ಯಂತ ಸುಂದರ ವಾದ ಕ್ಷಣಗಳು ಸಂಭವಿಸುವುದು ನಾವು ಖಾಲಿಯಾಗಿದ್ದಾಗ. ಅಂದರೆ ನಮ್ಮ ಬಹಿರಂಗದ ಶೇಖರಣೆ- ಶೃಂಗಾರಗಳಿಗೂ ಆಂತರ್ಯಕ್ಕೂ ಸಂಬಂಧ ಇಲ್ಲದೆ ಆಂತರ್ಯವು ಶೂನ್ಯವಾಗಿದ್ದಾಗ. ಆಗ ಮಾತ್ರ ಸುಖ, ಸಂತೋಷ, ಮುಗ್ಧತೆ, ಲವಲವಿಕೆ, ವಿಸ್ಮಯ, ಕುತೂಹಲಗಳು ತುಂಬಿಕೊಳ್ಳಲು ಅಲ್ಲಿ ಸದಾ ಸ್ಥಳಾವಕಾಶ ಇರುತ್ತದೆ.