ಬೆಂಗಳೂರು: ಚಿನ್ನಾಭರಣಗಳ ವಿನ್ಯಾಸ ನೋಡುವ ನೆಪದಲ್ಲಿ ಸ್ನೇಹಿತೆಯ ಮನೆಯಲ್ಲೇ ಮಲಗಿ, ಮುಂಜಾನೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ನಿವಾಸಿ ಪಿ.ಜಿ.ಗೀತಾ(32) ಬಂಧಿತೆ. ಆಕೆಯಿಂದ 9.84 ಲಕ್ಷ ರೂ. ಮೌಲ್ಯದ 216 ಗ್ರಾಂ ಚಿನ್ನಾಭರಣ, 231 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತೆ ಗುರುದರ್ಶನ ಬಡಾವಣೆ ನಿವಾಸಿ ಲಕ್ಷ್ಮೀ ಎಂಬುವರ ಮನೆಯಲ್ಲಿ ಆ.16ರಂದು ಚಿನ್ನಾಭರಣ ಕಳವು ಮಾಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಲಕ್ಷ್ಮೀ ಹಾಗೂ ಆರೋಪಿತೆ ಗೀತಾ ಮೈಸೂರು ಮೂಲದವರಾಗಿದ್ದು, ಅಕ್ಕ-ಪಕ್ಕದ ಮನೆಯಲ್ಲೇ ವಾಸವಾಗಿದ್ದಾರೆ. ಹೀಗಾಗಿ ಹತ್ತು ವರ್ಷಗಳಿಂದ ಸ್ನೇಹಿತರು. ಇಬ್ಬರು ಮದುವೆ ಬಳಿಕ ಬೆಂಗಳೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಹೀಗಾಗಿ ಆಗಾಗ್ಗೆ ಗೀತಾ, ಲಕ್ಷ್ಮೀ ನಿವಾಸಕ್ಕೆ ಬರುತ್ತಿದ್ದಳು. ಆ.16ರಂದು ಶಾಪಿಂಗ್ ಮಾಡಲು ಕೆಂಗೇರಿಯಿಂದ ಸಿಟಿಗೆ ಬಂದಿದ್ದಾರೆ. ಸಂಜೆಯಾಗಿದ್ದರಿಂದ ಲಕ್ಷ್ಮೀ, ಸ್ನೇಹಿತೆಯನ್ನು ಮನೆಯಲ್ಲಿ ಉಳಿದುಕೊಂಡು, ಬೆಳಗ್ಗೆ ಹೋಗುವಂತೆ ಸೂಚಿಸಿದ್ದರು. ರಾತ್ರಿ ಇಬ್ಬರು ಚಿನ್ನಾಭರಣಗಳ ವಿನ್ಯಾಸದ ಬಗ್ಗೆ ಚರ್ಚಿಸಿದ್ದಾರೆ. ತಡರಾತ್ರಿ ಲಕ್ಷ್ಮೀಯ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಗೀತಾ, ಮರು ದಿನ ಮುಂಜಾನೆ ಎದ್ದು ಕೆಂಗೇರಿಯ ಮನೆಗೆ ಹೋಗಿದ್ದಳು. ಮೂರು ದಿನಗಳ ಬಳಿಕ ಲಕ್ಷ್ಮೀ ಚಿನ್ನಾಭರಣದ ಬಾಕ್ಸ್ ನೋಡಿಕೊಂಡಾಗ ಕಳವು ಗೊತ್ತಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಳಿಕ ಅನುಮಾನದ ಮೇರೆಗೆ ಗೀತಾಳನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. ಗೀತಾಳ ವಿಚಾರಣೆ ವೇಳೆ, ಮರು ದಿನ ಬೆಳಗ್ಗೆ ಮನೆಗೆ ಹೋಗುವಾಗ, ಬಟ್ಟೆ ಬದಲಿಸಲು ಕೊಠಡಿಯ ಬಾಗಿಲು ಲಾಕ್ ಮಾಡಿಕೊಂಡು, ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ತನ್ನ ಬ್ಯಾಗ್‌ಗೆ ಹಾಕಿಕೊಂಡು ಪರಾರಿಯಾಗಿದ್ದಳು. ಅದೇ ಚಿನ್ನಾಭರಣವನ್ನು ಮೈಸೂರಿಗೆ ಕೊಂಡೊಯ್ದು ಗಿರವಿ ಇಟ್ಟು ಹಣ ಪಡೆದುಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.