ಪಿಯುಸಿ ತನಕವೂ ಅಮ್ಮನೇ ನನ್ನ ಫಿಜು ಕಟ್ಟುತ್ತಿದ್ದಳು. ಆಗ ಮನಸ್ಸು ಹಿಂಡಿದಂತಾಗಿ, ಜೀವನದಲ್ಲಿ ಏನು ಮಾಡ್ತೀನೋ ಇಲ್ಲವೋ, ಆದರೆ, ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು ಅಂದುಕೊಳ್ಳುತ್ತಿದ್ದೆ.
ಬದುಕಲ್ಲಿ ಏನು ಮಾಡಬೇಕು, ಏನು ಓದಬೇಕು, ಏನು ಓದಿದರೆ ಒಳ್ಳೆ ಕೆಲಸ ಸಿಗುತ್ತದೆ ಎಂಬುದನ್ನೆಲ್ಲ ಹೇಳಿಕೊಡಲು ನಮ್ಮ ಮನೆಯಲ್ಲಿ ಅಕ್ಷರಸ್ಥರು ಇರಲಿಲ್ಲ. ಅಪ್ಪ ಓದಿದ್ದರೂ ಒಂಥರಾ ಅನಕ್ಷರಸ್ಥರೇ. ಅವರಿಗೆ ಎರಡು ಮದುವೆ. ಎರಡನೇ ಹೆಂಡತಿಯ ಮಗ ನಾನು. ಮೊದಲನೆ ಹೆಂಡತಿಯ ಮಕ್ಕಳೆಲ್ಲಾ ವ್ಯವಸಾಯದಲ್ಲಿ ತೊಡಗಿಕೊಂಡಿದ್ದರು. ಅಪ್ಪನೊಂದಿಗೆ ಅಂಥಾ ಮಧುರ ಬಾಂಧವ್ಯ ಇರಲಿಲ್ಲ. ಪಿಯುಸಿ ತನಕವೂ ಅಮ್ಮನೇ ನನ್ನ ಫಿಜು ಕಟ್ಟುತ್ತಿದ್ದಳು. ಆಗ ಮನಸ್ಸು ಹಿಂಡಿದಂತಾಗಿ, ಜೀವನದಲ್ಲಿ ಏನು ಮಾಡ್ತಿನೋ ಇಲ್ಲವೋ, ಆದರೆ, ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು ಅಂದುಕೊಳ್ಳುತ್ತಿದ್ದೆ.
ಪಿಯುಸಿ ಮುಗಿದ ತಕ್ಷಣ, ನಮ್ಮೂರಿನ ಹತ್ತಿರದ ದಿನಸಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದೆ. ಕೈಗೆ ಒಂದಷ್ಟು ಹಣ ಬರೋದು. ವರ್ಷದಲ್ಲಿ ಮೂರು ತಿಂಗಳು ಎರಡು, ಮೂರು ಸಾವಿರ ದುಡಿದುಕೊಂಡು ಬಿಡುತ್ತಿದ್ದೆ. ಅದು, ಮುಂದಿನ ಕಾಲೇಜಿನ ಫಿಸ್‌ಗೆ ಆಗೋದು. ಹಾಗೇ, ಡಿಗ್ರಿ ಮುಗಿಸಿದೆ. ಎಂ.ಎ.ನಲ್ಲಿ ಕನ್ನಡ ಮೇಜರ್ ಮಾಡಲು ಬೆಂಗಳೂರಿಗೆ ಹೋದೆ. ನಂತರ, ಏನೇನೋ ಮಾಡಿ, ನಮ್ಮ ಲೆಕ್ಚರರ್ ಅನ್ನು ಕಾಡಿ ಬೇಡಿ, ಒಂದು ಪ್ರತಿಷ್ಠಿತ ಕಾಲೇಜಿನ ಕನ್ನಡ ಪ್ರಾಧ್ಯಾಪಕನೂ ಆದೆ. ಕೈಗೆ 10 ಸಾವಿರ ಸಂಬಳ ಸಿಗೋದು. ಆತನಕ ಗೆಳೆಯನ ರೂಮಿನಲ್ಲಿ ಇದ್ದವನು, ನಂತರ ನಾನೇ ಬಾಡಿಗೆ ರೂಮು ಮಾಡಿಕೊಂಡೆ. ಅದೃಷ್ಟ ಎನ್ನುವಂತೆ, ಬೆಂಗಳೂರಿನ ಹೊರವಲಯದಲ್ಲಿ ಒಂದು ಕಾಲೇಜು ಶುರುವಾಯಿತು. ಈ ಸುದ್ದಿ ತಿಳಿದು, ತಡಮಾಡದೇ ಆ ಕಾಲೇಜಿಗೆ ಹೋಗಿ ಸೇರಿದೆ.
ಆ ಶಿಕ್ಷಣ ಸಂಸ್ಥೆಯ ಮಾಲೀಕರು, ಆರಂಭದ ಉತ್ಸಾಹದಲ್ಲಿ 15 ಸಾವಿರ ಕೊಟ್ಟರು. ಕಾಲೇಜಿನ ಕಟ್ಟುವಿಕೆಯಲ್ಲಿ ನನ್ನನ್ನು ತೊಡಗಿಸಿಕೊಂಡೆ. ಮಾಲೀಕರಿಗೆ ಇಷ್ಟವಾದೆ. ಅವರು ರಿಯಲ್ ಎಸ್ಟೇಟ್ ಬೇರೆ ನಡೆಸುತ್ತಿದ್ದರು. ಅಲ್ಲೂ ಒಂದಷ್ಟು ಐಡಿಯಾ ಕೊಟ್ಟೆ. ಬಳುವಳಿಯಾಗಿ, ಸಾಲದ ರೀತಿ ನನಗೆ ಒಂದು ಸೈಟು ಕೊಟ್ಟರು. ಎಲ್ಲವೂ ಸರಿ ಇದೆ ಅನಿಸುತ್ತಿರುವಾಗಲೇ, ಮಾಲೀಕರು ಮತ್ತು ನನ್ನ ನಡುವೆ ವೈಮನಸ್ಯ ಬಂತು. ನಾನು, ಕಾಲೇಜು ಬಿಟ್ಟು ಬಂದೆ. ಖಾಸಗಿ ಟ್ಯೂಷನ್ ಸೆಂಟರ್‌ನಲ್ಲಿ ಪಾಠ ಮಾಡಲು ಹೋದೆ. ಅಲ್ಲಿಯೂ ಕೆಲವು ವರ್ಷ ನಿಷ್ಠೆಯಿಂದ ದುಡಿದು, ಕಡೆಗೊಮ್ಮೆ ನನ್ನದೇ ಟ್ಯೂಷನ್ ಸೆಂಟರ್ ತೆರೆದೆ. ಈಗ, ನಾಲ್ಕೈದು ಕಡೆ ಬ್ರಾಂಚ್‌ಗಳನ್ನು ತೆರೆದಿದ್ದೇನೆ. ಇದರ ಜೊತೆಗೆ, ಖಾಸಗಿ ಕಾಲೇಜಲ್ಲಿ ದೊಡ್ಡ ಹುದ್ದೆಯೊಂದನ್ನು ಹಿಡಿದಿದ್ದೇನೆ. ಇದಕ್ಕಿಂತ ಪರ್ಫೆಕ್ಟ್ ಪ್ರೊಫೆಷನ್ ಬೇಕಾ ಹೇಳಿ…
ಸೌಮಶ್ರೀ ಸುದರ್ಶನ್ ಹಿರೇಮಠ