ತುಮಕೂರು: ಪರಿಸರ ದಿನಾಚರಣೆ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಮ್ಮ ಉಸಿರಾಟಕ್ಕೆ ಅನುಕೂಲವಾಗಲು ಹೆಚ್ಚೆಚ್ಚು ಗಿಡ ಮರ ಬೆಳೆಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ನಗರದ 15ನೇ ವಾರ್ಡ್‌ನ ಸಿಎಸ್‌ಐ ಬಡಾವಣೆಯಲ್ಲಿ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರದಾದ್ಯಂತ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಸುಮಾರು 2 ಲಕ್ಷ ಗಿಡ ನೆಡುವ ಗುರಿ ಹೊಂದಿದ್ದೇವೆ. ಇದೀಗ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ನಗರದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಗಿಡ ನೆಡಲಾಗಿದೆ ಎಂದರು.
ಹಣ್ಣಿ ಗಿಡ ಬೆಳೆಸಿ: ನಗರದಲ್ಲಿ ವಿವಿಧ ರೀತಿಯ ಹಣ್ಣಿ ಗಿಡಗಳನ್ನು ಬೆಳೆಸಬೇಕು. ಅರಣ್ಯ ಇಲಾಖೆಯವರು ಗಮನಹರಿಸಿ ಸಾರ್ವಜನಿಕರಿಗೆ ಸಹಕರಿಸಬೇಕು. ಹತ್ತಿಗಿಡ, ನೇರಳೆಗಿಡ, ಅರಳೇಮರ, ಹೊಂಗೆಮರದ ಗಿಡಗಳನ್ನು ನೆಟ್ಟರೆ ಅವು ಹೆಮ್ಮರವಾಗಿ ಬೆಳೆದಾಗ ಪರಿಸರ ಸಮತೋಲನ ಉತ್ತಮವಾಗುತ್ತದೆ. ಇವುಗಳಿಂದ ಉತ್ತಮ ಗಾಳಿ, ಉತ್ತಮ ಮಳೆ ಬರುವುದಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವೃಕ್ಷಮಿತ್ರ ಸಿದ್ದಪ್ಪನವರು ತಮ್ಮ ಖರ್ಚಿನಲ್ಲಿ ಬೇವಿನ ಮರದ ಗಿಡಗಳನ್ನು ನೆಟ್ಟು ದಿನಂಪ್ರತಿ ಅವರೇ ನೀರು ಹಾಕುವ ಮೂಲಕ ಪರಿಸರ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಗಿಡಮರಗಳನ್ನು ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಮನವಿ ಮಾಡಿದರು.
ಗಿಡ ನಟ್ಟರೆ ಸಾಲದು: 15ನೇ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾ ಕುಮಾರ್ ಮಾತನಾಡಿ, 15ನೇ ವಾರ್ಡ್‌ನಲ್ಲಿ 2000ಗಿಡಗಳನ್ನು ನೆಡುವ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಗಿಡಗಳನ್ನು ನೆಟ್ಟು ಬಿಟ್ಟರೆ ಸಾಲದು ಅದನ್ನು ಪೋಷಣೆ ಮಾಡಬೇಕು. ಆ ಜವಾಬ್ದಾರಿಯನ್ನು ಸ್ಥಳೀಯ ನಾಗರಿಕರೆ ವಹಿಸಿಕೊಳ್ಳಬೇಕು. ಆಗ ಮಾತ್ರ ಪರಿಸರ ರಕ್ಷಣೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಸಂಸದರನ್ನು ಸ್ಥಳೀಯ ನಾಗರಿಕರು ಸನ್ಮಾನ ಮಾಡಿ ಗೌರವಿಸಿದರು. ವಾರ್ಡ್‌ನ ಮುಖಂಡರಾದ ಧನಿಯಾ ಕುಮಾರ್, ಭರತೇಶ್ ಜೈನ್, ಕಿರಣ್, ಹೊನ್ನುಡಿಕೆ ಲೋಕೇಶ್, ಅರಳೂರು ಕುಮಾರ್, ಜಗನ್‌ಜ್ಯೋತಿ ಸಿದ್ದರಾಮಣ್ಣ ಮತ್ತಿತರರು ಇದ್ದರು.