ಬೆಂಗಳೂರು: “ರಾಜ್ಯ ಒಡೆಯುವ ದನಿಗಳನ್ನು ಸಂಪೂರ್ಣವಾಗಿ ಧಿಕ್ಕರಿಸಿ. ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಉತ್ತರ, ದಕ್ಷಿಣ, ಕರಾವಳಿ ಎಂಬ ಭೇದಭಾವ ಇಲ್ಲದೆ, ಒಂದೇ ತಾಯಿಯ ಮಕ್ಕಳಂತೆ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಿ…’ ಇದು 63ನೇ ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಡಿನ ಜನತೆಗೆ ನೀಡಿದ ಸಂದೇಶ. ಈ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ತಿರುಗೇಟು ನೀಡಿದರು.
ಛಿದ್ರವಾಗಿದ್ದ ನಾಡನ್ನು ಒಗ್ಗೂಡಿಸಿ ಕರ್ನಾಟಕದ ಗತ ವೈಭವವನ್ನು ಕಂಡುಕೊಳ್ಳಲು ನಡೆದ ಏಕೀಕರಣ ಚಳವಳಿ ಫಲವಾಗಿ ಕರ್ನಾಟಕ ರೂಪುಗೊಂಡಿದೆ. ಆದರೆ, ಇಂದು ನಾಡನ್ನು ಒಡೆಯುವ ದನಿಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು. ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸುವುದು ನಮ್ಮ ಗುರಿ. ಆದ್ದರಿಂದ ಉತ್ತರ, ದಕ್ಷಿಣ, ಕರಾವಳಿ, ಮಧ್ಯ ಮತ್ತು ಹಳೆಯ ಕರ್ನಾಟಕ ಎಂಬ ಭೇದಭಾವಗಳಿಲ್ಲದೆ, ರಾಜ್ಯದ ಸರ್ವತೋಮುಖ ಅಭಿವೃದಿಟಛಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
1ನೇ ತರಗತಿಯಿಂದ ಇಂಗ್ಲಿಷ್; ಸಮರ್ಥನೆ: ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸುವ ನಿರ್ಧಾರಕ್ಕೆ ಅಲ್ಲಲ್ಲಿ ಅಪಸ್ವರಗಳು ಬರುತ್ತಿರುವುದನ್ನು ಗಮನಿಸಿದ್ದೇನೆ. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ನಮಗೆ ಮುಖ್ಯ. ಗ್ರಾಮೀಣ ಭಾಗದ ಮಕ್ಕಳು ಕೀಳರಿಮೆಯಿಂದ ಹೊರಬಂದು ಎಲ್ಲರಂತೆ ಜೀವನ ಎದುರಿಸಬೇಕು ಎನ್ನುವುದು ಇದರ ಹಿಂದಿನ ಆಶಯ. ಇಂಗ್ಲಿಷ್ ಕಲಿಕೆಯು ಕನ್ನಡದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡಲು ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಶಿಕ್ಷಕರು ಇನ್ನಷ್ಟು ಶ್ರಮ ಹಾಕಬೇಕು: ಕರ್ನಾಟಕದ ಗುರು ಪರಂಪರೆಗೆ ತನ್ನದೇ ಆದ ಔನ್ನತ್ಯವಿದೆ. ಸರ್ಕಾರಿ ಶಿಕ್ಷಕ ವೃತ್ತಿ ಜೀವನ ಮಾರ್ಗವಾಗಲ್ಲದೆ, ಅತ್ಯುತ್ತಮ ವ್ಯಕ್ತಿತ್ವಗಳನ್ನು ಬೆಳೆಸುವ ಅರ್ಥಪೂರ್ಣ ಸಾಧನವಾಗಿ ಪರಿಗಣಿಸಿದ ಅನೇಕ ಅದ್ಭುತ ಶಿಕ್ಷಕರನ್ನು ನಾನು ನೋಡಿದ್ದೇನೆ. ಧನ್ಯಭಾವ ಅನುಭವಿಸಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿ ತಮ್ಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಅಗಣಿತ ಸಾಧಕರ ಮೇಲ್ಪಂಕ್ತಿಯೇ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಭಾರತರತ್ನ ಪ್ರೊ.ಸಿ.ಎನ್. ಆರ್.ರಾವ್ ಒಂದು ಉದಾಹರಣೆ. ಆದರೆ, ಈಗ ನಮ್ಮ ಶಿಕ್ಷಕ ವೃಂದ ಇನ್ನಷ್ಟು ಶ್ರಮ ಹಾಕುವ ಅವಶ್ಯಕತೆ ಇದೆ ಎಂದರು.
ಶಿರಸಿಯ ಮಾರಿಕಾಂಬಾ ಸರ್ಕಾರಿ ಶಾಲೆಯ ಸಾಧನೆ ಉಲ್ಲೇಖೀಸಿದ ಎಚ್.ಡಿ. ಕುಮಾರಸ್ವಾಮಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯನ್ನು ಹಿಂದಿಕ್ಕಿ ದಾಖಲೆ ಎನಿಸುವಂತೆ ತನ್ನ ವಿದ್ಯಾರ್ಥಿ ಸಂಖ್ಯೆಯನ್ನು ಏರಿಸಿಕೊಂಡಿರುವ ಈ ಶಾಲೆಯ ಪ್ರಗತಿಗೆ ಅಲ್ಲಿನ
ಶಿಕ್ಷಕವರ್ಗದ ಕೊಡುಗೆ ಶ್ಲಾಘನೀಯ ಎಂದರು. ಕ್ಷೀರಭಾಗ್ಯ ಯೋಜನೆ ಅಡಿ ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಒಟ್ಟು 153 ವಿಶೇಷ ಚೇತನ ಮಕ್ಕಳ ಶಾಲೆಗಳಲ್ಲಿ ಕಲಿಯುತ್ತಿರುವ 10,567 ಮಕ್ಕಳಿಗೆ ಬಿಸಿಹಾಲು ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು. ಒಟ್ಟಾರೆ 58.30 ಲಕ್ಷಕ್ಕೂ ಹೆಚ್ಚು ಮಕ್ಕಳು ಬಿಸಿಹಾಲು ವಿತರಿಸುವ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದಾರೆ.
ಮೂರು ಕೌಶಲ್ಯಾಧಾರಿತ
ವಿವಿ ಸ್ಥಾಪನೆ ಯುವಜನರ ಪ್ರತಿಭೆಗೆ ಅನುಕೂಲವಾಗಲು ಮೂರು ಕೌಶಲ್ಯಾಧಾರಿತ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದರು. ಅಲ್ಲದೆ, ಜಾನಪದ ಜಾತ್ರೆ ನಿರಂತರವಾಗಿ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಮೂಲಕ ನಗರ ಹಾಗೂ ಗ್ರಾಮೀಣ ಜಾನಪದ ಸಂಸ್ಕೃತಿಗಳ ನಡುವೆ ಸ್ನೇಹದ ಸೇತುವೆ ಬೆಸೆಯಲಿದೆ. ಜತೆಗೆ ಜಾನಪದ ಕಲಾವಿದರ ಪ್ರತಿಭೆಯನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಲು ಅತ್ಯುತ್ತಮ ಅವಕಾಶ ಒದಗಿಸಲಿದೆ ಎಂದು ಹೇಳಿದರು.