ಪಾನೀರು: ಆತ್ಮಶಕ್ತಿ ಇದ್ದಲ್ಲಿ ಗುರಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳು ಸಕಾರಾತ್ಮಕ ಗುಣಗಳನ್ನು ಬೆಳೆಸುವುದರ ಜತೆಗೆ ಸ್ಪಷ್ಟ ಗುರಿ ಹೊಂದಿ ಮುಂದುವರಿದರೆ ಭವಿಷ್ಯದಲ್ಲಿ ಉತ್ತಮ ಹೆಜ್ಜೆ ಇಡಲು ಸಾಧ್ಯ ಎಂದು ಸಹಾಯಕ ಪೊಲೀಸ್ ಆಯುಕ್ತೆ ಶ್ರುತಿ ಎನ್. ಆರ್. ಹೇಳಿದರು.
ಅವರು ಮಂಗಳೂರಿನ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ರವಿವಾರ ದೇರಳಕಟ್ಟೆ ದೇಮರ್ಸಿಯಮ್ಮನವರ ಮಕ್ಕಳ ಆಶ್ರಮದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳಿಗೆ ನೂತನ ಬಟ್ಟೆಗಳ ವಿತರಣೆ ಕಾರ್ಯಕ್ರಮವಾದ “ಪ್ರೀತಿ ವಂಚಿತ ಕಂದಮ್ಮಗಳಿಗೆ ವಾತ್ಸಲ್ಯದ ಅಪ್ಪು³ಗೆ’ಯಲ್ಲಿ ಭಾಗವಹಿಸಿ ಮಾತನಾಡಿದರು.
ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವ ವೇದಿಕೆಯ ಕಾರ್ಯ ಶ್ಲಾಘನೀಯ. ಈ ಮುಖೇನ ಸಂಬಂಧಿಕರ ಪ್ರೀತಿಯಿಂದ ವಂಚಿತ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯ ಆಗಿದೆ ಎಂದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮಂಗಳೂರು ಇದರ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೊ ಅಧ್ಯಕ್ಷತೆವಹಿಸಿ ಮಾತನಾಡಿ, ರಾಷ್ಟ್ರೀಯತೆ ಚಿಂತನೆಯ ಉದ್ದೀಪನ ಆಗುವ ದೃಷ್ಟಿಯಿಂದ ವೇದಿಕೆಯನ್ನು ಸ್ಥಾಪಿಸಲಾಗಿದೆ. ಸಮಾಜದಲ್ಲಿ ಹೊಂದಾಣಿಕೆ, ಸೌಹಾರ್ದದ ಭಾವನೆಗಳನ್ನು ಬೆಳೆಸುವ ಕಾರ್ಯ ಆಗಬೇಕಿದೆ. ಇಂತಹ ಉದ್ದೇಶಗಳನ್ನು ಮುಂದಿಟ್ಟುಕೊಂಡು ವೇದಿಕೆ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು.
ತನ್ನ ತಾಯಿಯ ಶ್ರವಣದೋಷ ಚಿಕಿತ್ಸೆಗೆಂದು ಯುವಕನೋರ್ವ ಸಂಗ್ರಹಿಸಿಟ್ಟಿದ್ದ ಹಣವನ್ನು ಕಳ್ಳರು ಕಳವುಗೈದ ಸಂದರ್ಭದಲ್ಲಿ ಆತನಿಗೆ ಸಹಾಯಧನ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಕುಟುಂಬದ ಯುವತಿಯರ ಮದುವೆಗೆ ಆರ್ಥಿಕ ಸಹಾಯ ಒದಗಿಸುವ ಯೋಜನೆ ಇದೆ ಎಂದರು.