Advertisement

ಭೋಗನಂದೀಶ್ವರ ಬ್ರಹ್ಮರಥೋತ್ಸವದ ವೈಭವ

07:28 AM Mar 06, 2019 | Team Udayavani |

ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿಯೆಂದು ಪ್ರಸಿದ್ಧಿಯಾಗಿರುವ ಚಿಕ್ಕಬಳ್ಳಾಪುರ ತಾಲೂಕಿನ ಐತಿಹಾಸಿಕ ನಂದಿಯಲ್ಲಿ ಮಂಗಳವಾರ ಭಕ್ತಿಭಾವದ ಜೊತೆಗೆ ಅದ್ದೂರಿಯಾಗಿ ನಡೆದ ನಂದಿ ಶ್ರೀ ಭೋಗನಂದೀಶ್ವರಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ಭಕ್ತರ ಜನಸಾಗರವೇ ಹರಿದು ಬಂದಿತ್ತು. 

Advertisement

ದಿನವಿಡೀ ಸರದಿ ಸಾಲು: ಭಕ್ತಿಯ ತುಡಿತಕ್ಕೆ ಅಲ್ಲಿ ಹೆಜ್ಜೆ ಹೆಜ್ಜೆಗೂ ಕಾಲಿಡದಷ್ಟು ಜನ ಸಾಗರ ನೆರೆದು ಜೋಡಿ ರಥೋತ್ಸವ  ಎಳೆದು ಪುಳಕಿತರಾದರು. ರಥೋತ್ಸವದ ವೇಳೆ ಗೋವಿಂದ ನಾಮಸ್ಮರಣೆಯ ನೀನಾದ ಮುಗಿಲು ಮುಟ್ಟಿದರೆ, ಭೋಗನಂದೀಶ್ವರನ ದರ್ಶನಕ್ಕೆ ದಿನವಿಡೀ ಭಕ್ತರು ಸರದಿ ಸಾಲಿನಲ್ಲಿ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. 

ಮಹಾ ಶಿವರಾತ್ರಿಯ ಮರು ದಿನವೇ ನಡೆಯುವ ವೈಭವದ ರಥೋತ್ಸವ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸಿ ರಥೋತ್ಸವಕ್ಕೆ ಸಾಕ್ಷಿಯಾದರು. ಭೋಗನಂದೀಶ್ವರನಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಕ್ಷೀರಾಭಿಷೇಕ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು.

ಬೆಳಗ್ಗೆ 11:40ರ ವೇಳೆ ಆರಂಭಗೊಂಡ ರಥೋತ್ಸವ ಸಂಜೆಯವರೆಗೂ ಸಾಂಗವಾಗಿ ನಡೆಯಿತು. ರಥೋತ್ಸವ ಸಾಗಿದ ನಂದಿ ರಾಜ ಬೀದಿಗಳನ್ನು ಮೊದಲೇ ಸ್ವತ್ಛಗೊಳಿಸಿ ರಂಗೋಲಿ  ಬಿಡಿಸಲಾಗಿತ್ತು. ಅವಘಡಗಳು ಸಂಭವಿಸಿದಂತೆ ರಥದ ಸುತ್ತಲೂ ಭದ್ರತಾ ಸಿಬ್ಬಂದಿ ಹಗ್ಗಗಳನ್ನು ಹಿಡಿದು ಸುತ್ತವರಿದ್ದರು.

ಎಲ್ಲಿ ನೋಡಿದರೂ ಜನಸಾಗರ: ಹೆಜ್ಜೆ ಹೆಜ್ಜೆಗೂ ಕಾಲಿಡದಷ್ಟು ಭಕ್ತರು ನಂದಿಯಲ್ಲಿ ಬೀಡು ಬಿಟ್ಟು ಐತಿಹಾಸಿಕ ರಥೋತ್ಸವವನ್ನು ವೀಕ್ಷಿಸಿ ಪುಳಕಿತರಾದರು. ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪೈಕಿ ಅತಿ ದೊಡ್ಡ ಜಾತ್ರೆಯೆಂದು ಬಿಂಬಿತವಾಗಿರುವ ನಂದಿ ಭೋಗನಂದೀಶ್ವರನ ಜಾತ್ರೆಯಲ್ಲಿ ನೋಡದಷ್ಟು ಜನ ಸಾಗರ ಕಂಡು ಬಂತು. 

Advertisement

ನೆರೆಯ ಆಂಧ್ರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿ, ಹರಿಕೆ ಸಲ್ಲಿಸಿದರು. ರಥಕ್ಕೆ ತೇರು ಬಾಳೆ ಹಣ್ಣು ಎಸೆದು ಪುನೀತರಾದರೆ, ಕೆಲವರು ಮುಡಿ ಕೊಟ್ಟು ಹರಿಕೆ ತೀರಿಸಿದರು.

ರಥೋತ್ಸವಕ್ಕೆ ಚಾಲನೆ: ಭೋಗನಂದೀಶ್ವರ ಹಾಗೂ ಯೋಗ ನಂದೀಶ್ವರ ಬ್ರಹ್ಮರಥೋತ್ಸವಕ್ಕೆ ಸಂಸದ ಎಂ.ವೀರಪ್ಪ ಮೊಯ್ಲಿ, ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಚಾಲನೆ ನೀಡಿದರು. ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್‌, ಹಾಪ್‌ಕಾಮ್ಸ್‌ ಮಾಜಿ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸ್‌,

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ತಾಪಂ ಇಒ ಸಂಜೀವಪ್ಪ, ಸೇರಿದಂತೆ ರಾಜಕೀಯ ಪಕ್ಷಗಳ ಧುರೀಣರು, ಮುಖಂಡರು ಮತ್ತಿತರ ಗಣ್ಯರು ಪಾಲ್ಗೊಂಡು ಭೋಗನಂದೀಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದರು.

ನಿಯಂತ್ರಣಕ್ಕೆ ತಡೆಗೋಡೆ ನಿರ್ಮಾಣ: ಭಕ್ತರಿಗೆ ನಂದಿ ಭೋಗನಂದೀಶ್ವರನ ದರ್ಶನಕ್ಕೆ ಅನುಕೂಲವಾಗುವಂತೆ ಹಾಗೂ ಭಕ್ತರ ನಡುವೆ ನೂಕುನುಗ್ಗಲು ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಒಳಗೆ, ಹೊರಗೆ ತಡೆಗೋಡೆ ನಿರ್ಮಿಸಿ ಅನುವು ಮಾಡಿಕೊಡಲಾಯಿತು. 

ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರು, ಅನ್ನದಾನ ಕಲ್ಪಿಸಿದ್ದು, ನಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಆರೈಕೆ ಕೂಡ ಸಿಕು¤. ರಥೋತ್ಸವದ ಪ್ರಯುಕ್ತ ಪಶು ವೈದ್ಯ ಇಲಾಖೆಯಿಂದ ರಾಸುಗಳ ಪ್ರದರ್ಶನ ನಡೆಸಿ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಯಿತು.

ಭಾರೀ ಭದ್ರತೆ: ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಮುಂಜಾಗ್ರತವಾಗಿ 600 ಕ್ಕೂ ಹೆಚ್ಚು ಪೊಲೀಸರನ್ನು  ಭದ್ರತೆಗೆ ನಿಯೋಜಿಸಿತ್ತು. ಜಾತ್ರೆಗೆ 20 ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಕಣ್ಗಾವಲು ಇತ್ತು. ರಥದ ಬಳಿ ಜನ ಹೋಗದಂತೆ ತಡೆಯಲು ಪ್ರತ್ಯೇಕವಾಗಿ ಸಮವಸ್ತ್ರ ಧರಿಸಿದ್ದ ಪೊಲೀಸರನ್ನು ನಿಯೋಜಿಸಲಾಗಿತ್ತು.

ವಾಹನ ಸಂಚಾರವನ್ನು ಸುಗಮಗೊಳಿಸಲು ಅನೇಕ ಕಡೆ ಮಾರ್ಗಗಳನ್ನು ಬದಲಿಸಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ಒದಗಿಸಲಾಗಿತ್ತು. ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್‌, ಆರಕ್ಷಕ ವೃತ್ತ ನಿರೀಕ್ಷಕ ಸುದರ್ಶನ್‌,  ನೇತೃತ್ವದಲ್ಲಿ ನಂದಿ ಠಾಣೆ ಸಿಬ್ಬಂದಿ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.

150 ಕ್ಕೂ ಬಸ್‌ ವ್ಯವಸ್ಥೆ: ನಂದಿಯ ಭೋಗನಂದೀಶ್ವರ ಹಾಗೂ ಯೋಗ ನಂದೀಶ್ವರಸ್ವಾಮಿ ರಥೋತ್ಸವಗಳನ್ನು ಜೊತೆ ಜೊತೆಯಾಗಿ ನಡೆಸಲಾಯಿತು. ನಂದಿ ಜಾತ್ರೆಗೆ ಬರಲು ಜಿಲ್ಲೆಯ ವಿವಿಧ ತಾಲೂಕುಗಳಿಂದ ನಂದಿಗೆ ನೇರವಾಗಿ 150 ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯ ಕಲ್ಪಿಸಲಾಗಿತ್ತು.

ರಥೋತ್ಸವದ ಬಳಿಕ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಸ್ಕೃತಿ ಸೌರಭ ಕಾರ್ಯಕ್ರಮ ಹಾಗೂ ಜಾತ್ರೆ ಪ್ರಮುಖ ಆಕರ್ಷಣೆಯಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳು ಜನಾಕರ್ಷಣೀಯವಾಗಿದ್ದವು. ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಜನ ಎತ್ತಿನ ಬಂಡಿಗಳಲ್ಲಿ ಬಂದು ಪಾನಕ, ಮಜ್ಜಿಗೆ ವಿತರಿಸಿದರು. 

ಪ್ಲಾಸ್ಟಿಕ್‌ ನಿಷೇಧ ಮರೆತ ಆಡಳಿತ: ಕಳೆದ ವರ್ಷ ನಂದಿ ಜಾತ್ರೆಯಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿ ಜಾತ್ರೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದ ಜಿಲ್ಲಾಡಳಿತ ಈ ಬಾರಿ ಪ್ಲಾಸ್ಟಿಕ್‌ ನಿಷೇಧ ಬಗ್ಗೆ ಕಾಳಜಿ ತೋರದ ಕಾರಣ ಪ್ಲಾಸ್ಟಿಕ್‌ ಅಬ್ಬರ ಎಲ್ಲಿ ನೋಡಿದರೂ ಎದ್ದು ಕಾಣುತ್ತಿತ್ತು.

ಇನ್ನೂ ಸಂಪ್ರದಾಯದಂತೆ ಭೋಗನಂದೀಶ್ವರ ರಥೋತ್ಸವಕ್ಕೆ ಜಿಲ್ಲಾಧಿಕಾರಿಗಳು ಬಂದು ದೇವರ ದರ್ಶನ ಪಡೆಯುತ್ತಿದ್ದರು. ಆದರೆ ಜಿಲ್ಲೆಯ ಚುನಾವಣಾ ಅಧಿಕಾರಿ ಅನಿರುದ್ಧ್ ಶ್ರವಣ್‌ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಚುನಾವಣಾ ಒತ್ತಡತದಿಂದ ರಥೋತ್ಸವದಿಂದ ದೂರ ಉಳಿದಿದ್ದರು.

ಬಚ್ಚೇಗೌಡರಿಂದ ಮಜ್ಜಿಗೆ, ನೀರು ವಿತರಣೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎಂದು ಹೇಳಲಾಗುತ್ತಿರುವ ಮಾಜಿ ಸಚಿವ ಹೊಸಕೋಟೆಯ ಬಿ.ಎನ್‌.ಬಚ್ಚೇಗೌಡ ನಂದಿ ಜಾತ್ರೆಯಲ್ಲಿ ಭಕ್ತರಿಗೆ ಉಚಿತವಾಗಿ ಕುಡಿಯುವ ನೀರು ಹಾಗೂ ಮಜ್ಜಿಗೆ ವಿತರಿಸಿ ಗಮನ ಸೆಳೆದರು. ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಜಾತ್ರೆಗೆ ಬಂದಿದ್ದ ಭಕ್ತರನ್ನು ಕರೆದು ಮಜ್ಜಿಗೆ ವಿತರಿಸಿದರು. ಬಚ್ಚೇಗೌಡರು ಭೋಗನಂದೀಶ್ವರನಿಗೆ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next