Advertisement

ಬಣ್ಣದ ವೈಭವ-3: ರಾವಣ, ಘಟೋತ್ಕಚನಂತಹ ಪಾತ್ರಗಳೂ ಬಣ್ಣದ ವೇಷದ ಸ್ಥಾನಮಾನ ಕಳೆದುಕೊಂಡಿವೆ…

05:44 PM Sep 21, 2022 | Team Udayavani |

ಬಡಗು ತಿಟ್ಟು ಯಕ್ಷಗಾನ ರಂಗದಲ್ಲಿ “ಬಣ್ಣದ ವೇಷ” ನೈಜತೆ ಕಳೆದುಕೊಳ್ಳುತ್ತಿರುವುದೇಕೆ? ಎನ್ನುವ ಪ್ರಶ್ನೆ ಮುಂದಿಟ್ಟಾಗ ಪ್ರಸಿದ್ಧ, ಹಿರಿಯ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರು ತನ್ನ ನಿವೃತ್ತಿಯ ಹಿಂದಿನ ಹಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ. ”ಪೂರ್ಣ ಪ್ರಮಾಣದಲ್ಲಿ ಬದಲಾವಣೆಯ ಗಾಳಿ ಬೀಸುವ ಮುನ್ನವೇ ಯಕ್ಷರಂಗದಲ್ಲಿ ಅನಿವಾರ್ಯತೆಗೆ ಕಟ್ಟು ಬಿದ್ದು ರಾಕ್ಷಸ ವೇಷಗಳು ತನ್ನ ಮೂಲ ಸ್ವರೂಪವನ್ನು ಕಳೆದು ಕೊಳ್ಳಬೇಕಾಯಿತು. ನೈಜ ಮತ್ತು ರಂಗಕ್ಕೆ ಅನಿವಾರ್ಯವಾಗಿದ್ದ ಬಣ್ಣದ ವೇಷಗಳು ಮರೆಯಾಗಲು ಕಾರಣಗಳು ಹಲವಿದ್ದರೂ ಪ್ರಮುಖವಾಗಿ ಇತರ ಪಾತ್ರಗಳಿಗೆ ಅನಗತ್ಯ ಪ್ರಾಧಾನ್ಯತೆ ಹೆಚ್ಚಿರುವುದು ಪ್ರಮುಖ ಕಾರಣವಾಗಿ ಕೇವಲ ನಾಮಕಾವಸ್ತೆಗಾಗಿ ಬಣ್ಣದ ವೇಷಗಳು ರಂಗಸ್ಥಳಕ್ಕೆ ಬಂದು ಹೋಗುವ ಪಾತ್ರಗಳಾಗಿ ಬಿಟ್ಟವು” ಎಂದು ನೋವು ತೋಡಿಕೊಂಡರು.

Advertisement

ಇದನ್ನೂ ಓದಿ: ಬಣ್ಣದ ವೈಭವ-2; ವಿದೇಶಿಗರಿಗೂ ಮೆಚ್ಚಿನದ್ದಾಗಿದ್ದವು ಬಡಗು ತಿಟ್ಟಿನ ರಾಕ್ಷಸ ವೇಷಗಳು!

ಬಹುಪಾಲು ಹೆಚ್ಚಿನ ಬಣ್ಣದ ವೇಷಗಳಿಗೆ ರಂಗಪ್ರವೇಶಕ್ಕೆ ಒಡ್ಡೋಲಗ, ರಂಗದ ಹಿಂದಿನ ಕೂಗು ಪ್ರಮುಖ ಅಂಶವಾಗಿತ್ತು. ಈಗ ಅದೆಲ್ಲ ಅನಿವಾರ್ಯವೇ ಅಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು ವೈಭವವನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಸೀತಾಪಹರಣದ ಘೋರ ರಾವಣನಂತಹ ಪಾತ್ರ ಈಗ ಬಣ್ಣದ ವೇಷದ ಸ್ಥಾನ ಮಾನ ಕಳೆದುಕೊಂಡು ಇತರ ಪ್ರಮುಖ ವೇಷಧಾರಿಗಳೇ ಆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಣ್ಣದ ವೇಷಧಾರಿಗಳು ಮಾಡಬೇಕಾಗಿದ್ದ ಅನೇಕ ಪಾತ್ರಗಳು ಇಂದು ನಾಟಕೀಯವೋ ಅಥವ ಇತರ ಪ್ರಧಾನ ವೇಷಧಾರಿಗಳು ನಿರ್ವಹಿಸುವ ಪಾತ್ರಗಳಾಗಿ ಬದಲಾಗಿವೆ. ಅದರಲ್ಲಿ ಪ್ರಮುಖವಾಗಿ ಘಟೋತ್ಕಚನ ಪಾತ್ರ. ಭೀಮ ಮತ್ತು ಹಿಡಿಂಬೆಯರ ಮಗನಾದ ಘಟೋತ್ಕಚನ ಪಾತ್ರದ ಕಲ್ಪನೆ ಅದ್ಭುತವಾಗಿದ್ದು, ತಾಯಿಯ ಕಡೆಯಿಂದ ಅನೇಕ ರಾಕ್ಷಸ ಶಕ್ತಿಗಳು ಆತನಿಗೆ ಬಂದಿದ್ದವು. ಕುರುಕ್ಷೇತ್ರ ಯುದ್ಧದಲ್ಲೂ ಅವನು ಪ್ರಮುಖ ಪಾತ್ರವಹಿಸಿದ್ದನು.ಆ ಪಾತ್ರ ಈಗ ಬಣ್ಣದ ವೇಷದ ಸ್ಥಾನಮಾನ ಕಳೆದುಕೊಂಡಿದೆ.

”ಹಿಂದೆ ಬಡಗಿನಲ್ಲಿ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರು ಈ ಪಾತ್ರದ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. ನಾನು ಅವರನ್ನೇ ಅನುಸರಿಸಿ ಹಲವು ಬಾರಿ ಘಟೋತ್ಕಚನ ಪಾತ್ರವನ್ನು ನಿರ್ವಹಿಸಿದ್ದೆ. ಪ್ರಮುಖವಾಗಿ ಹೆಚ್ಚು ಬಳಕೆಯಲ್ಲಿರುವ ಕನಕಾಂಗಿ ಕಲ್ಯಾಣದ ಘಟೋತ್ಕಚನ ಪಾತ್ರ ಈಗ ಬಣ್ಣದ ವೇಷದ ಸ್ಥಾನಮಾನ ಕಳೆದುಕೊಂಡಿದೆ. ಈಗ ಹೆಚ್ಚು ಬಳಕೆಯಲ್ಲಿರುವ ಚಕ್ರ ಚಂಡಿಕೆ ಪ್ರಸಂಗದಲ್ಲಿ ಘಟೋತ್ಕಚನ ಪಾತ್ರ ಬಣ್ಣದ ವೇಷಧಾರಿ ನಿರ್ವಹಿಸಿದರೆ ಬಣ್ಣದ ವೇಷದ ಉಳಿಸುವಿಕೆಗೆ ಒಂದು ಕೊಡುಗೆಯಾಗಬಹುದು. ವಿಭಿನ್ನತೆಯನ್ನು, ವೈಶಿಷ್ಠ್ಯತೆ ಯನ್ನು ಉಳಿಸಲು ಸಾಧ್ಯವಿದೆ. ಈಗ ಪ್ರಧಾನ ವೇಷಧಾರಿಗಳು ಆ ಪಾತ್ರ ನಿರ್ವಹಿಸುತ್ತಾರೆ, ಹಿಂದೆ ಬಣ್ಣದ ವೇಷದ ಆಹಾರ್ಯ ಧರಿಸಿ ಪ್ರಧಾನ ವೇಷಧಾರಿಗಳು ಪ್ರಮುಖ ಪಾತ್ರಗಳನ್ನೂ ನಿರ್ವಹಿಸಿದ ಉದಾಹರಣೆಗಳು ಅನೇಕ ಇವೆ” ಎಂದರು.

”ಬಣ್ಣದ ವೇಷ ವೈಭವ ಕಳೆದುಕೊಳ್ಳಲು ಅನೇಕ ಕಾರಣಗಳಿದ್ದರೂ, ಮೂಲ ಸ್ವರೂಪದ ವೇಷ ಭೂಷಣದ ಪರಿಕರಗಳು ಮೇಳಗಳಲ್ಲಿ ಇಲ್ಲದೇ ಇರುವುದು, ಯುವ ಕಲಾವಿದರಲ್ಲಿ ಬಣ್ಣದ ವೇಷ ಮಾಡುವ ಆಸಕ್ತಿ ಇಲ್ಲದೆ ಇರುವುದು, ಈಗೀಗ ಕೇವಲ ಮಹಿಷಾಸುರನ ಪಾತ್ರ ಮಾತ್ರ ನಿರ್ವಹಿಸುವ ಆಸಕ್ತಿ ಹೆಚ್ಚುತ್ತಿರುವುದು ಒಂದು ಕಾರಣವಾದರೆ, ಹಿಮ್ಮೇಳದವರ ಅಸಹಕಾರವೂ ಒಂದು ಪ್ರಮುಖ ಕಾರಣ ಎಂದರು. ಬಣ್ಣದ ವೇಷಗಳ ಪಾರಂಪರಿಕ ಒಡ್ಡೋಲಗ , ರಂಗ ಪ್ರವೇಶ ಮಾಡಿಸಲು ಸಮಯಾವಕಾಶ ಇದ್ದರೂ ಆ ಬಗ್ಗೆ ಬಡಗುತಿಟ್ಟಿನ ಹಿಮ್ಮೇಳ ಕಲಾವಿದರಲ್ಲಿ ಉತ್ಸಾಹ ಕಳೆಗುಂದಿರುವುದು ಪ್ರಮುಖ ಕಾರಣ”ವೆಂದು ಎಳ್ಳಂಪಳ್ಳಿಯವರು ತಮ್ಮ ಬಣ್ಣದ ಲೋಕದ ಮಾತು ಮುಂದುವರಿಸಿದರು…

Advertisement

ಮುಂದುವರಿಯುವುದು..

ವಿಷ್ಣುದಾಸ್ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next