Advertisement

ಕುರುವತ್ತಿಯಲ್ಲಿ ವೈಭವದ ರಥೋತ್ಸವ

09:38 AM Mar 07, 2019 | |

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Advertisement

ತುಂಗಭದ್ರಾ ನದಿ ತಟದಲ್ಲಿರುವ ಕುರುವತ್ತಿ ಸುಕ್ಷೇತ್ರದಲ್ಲಿ ನೆಲೆಸಿರುವ ಶ್ರೀಬಸವೇಶ್ವರ, ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಶಿವರಾತ್ರಿ ಆಮಾವಾಸ್ಯೆ ದಿವಸದಂದು ಸಂಭ್ರಮದಿಂದ ಜರುಗಿತು. ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು, ವಿಶೇಷ ರುದ್ರಾಭಿಷೇಕ ನಡೆದವು. 

ಈ ಸಂದರ್ಭದಲ್ಲಿ ಭಕ್ತರು ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿಗೆ ದೀಡ್‌ ನಮಸ್ಕಾರ ಸೇರಿದಂತೆ ವಿವಿಧ ರೀತಿಯ ಹರಕೆ ತೀರಿಸಿದರು. ಅಲ್ಲದೆ, ನದಿಯಿಂದ ಎತ್ತುಗಳ ಮೆರವಣಿಗೆ ಮುಂತಾದ ಧಾರ್ಮಿಕ ಪರಂಪರೆಗಳನ್ನು ನೆರವೇರಿಸಲಾಯಿತು.

ಸಾಯಂಕಾಲ ಸುಮಾರು 5.30ಕ್ಕೆ ಶ್ರೀಸ್ವಾಮಿಯ ರಥೋತ್ಸವ ಪ್ರಾರಂಭವಾಗಿದ್ದು, ರಥೋತ್ಸವಕ್ಕೂ ಮುನ್ನ ಶ್ರೀಸ್ವಾಮಿಯನ್ನು ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಸಿ ರಥೋತ್ಸವಕ್ಕೆ ಕರೆ ತರಲಾಯಿತು. ನಂತರ ಸಂಪ್ರದಾಯದಂತೆ ರಥೋತ್ಸವವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು. ಬಳಿಕ ಪಟಾಕ್ಷಿ ಹರಾಜು ಪ್ರಕ್ರಿಯೆ ಜರುಗಿತು. ಈ ಬಾರಿ ರೋಣ ಗ್ರಾಮದ ಭಕ್ತರಾದ ವೀರಪ್ಪ ಫಕ್ಕೀರಪ್ಪ ಎಂಬುವರು 2.50 ಲಕ್ಷ ರೂ.ಗೆ ಪಟಾಕ್ಷಿ ಹರಾಜು ಪಡೆದರು.

ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು. ಮುಂದಕ್ಕೆ ರಥೋತ್ಸವ ಸಾಗುತ್ತಿದ್ದಂತೆ ನೆರೆದಿದ್ದ ಸಹ್ರಾರು ಭಕ್ತರು ಹರ ಹರ ಮಹಾದೇವ್‌ ಎಂಬ ಜಯಘೋಷ ಕೂಗುವ ಮೂಲಕ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. 

Advertisement

ಬಿಗಿ ಪೊಲೀಸ್‌ ಭದ್ರತೆ: ರಥೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಥೋತ್ಸವದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಥ ಸಾಗುವ ಮಾರ್ಗದಲ್ಲಿ ರಥದ ಬಳಿ ಭಕ್ತರು ಧಾವಿಸದಂತೆ ಬ್ಯಾರಿಕೇಟ್‌ ನಿರ್ಮಿಸಲಾಗಿತ್ತು.

ರಥೋತ್ಸವದಲ್ಲಿ ತಹಶೀಲ್ದಾರ್‌ ಕೆ. ರಾಘವೇಂದ್ರರಾವ್‌, ತಾಪಂ ಇಒ ಯು.ಎಚ್‌. ಸೋಮಶೇಖರ್‌, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ರಾಜ್ಯ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next