ಬೆಂಗಳೂರು: ರಾಜಧಾನಿಯಲ್ಲಿ ಗಣೇಶ ಹಬ್ಬಕ್ಕೆ ಭರದ ಸಿದ್ಧತೆ ನಡೆದಿದ್ದು, ನೂರಾರು ಕೋಟಿ ಹಣದ ಹೊಳೆಯೇ ಹರಿಯಲಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಸಾರ್ವಜನಿಕವಾಗಿ ಹಾಗೂ ಮನೆಗಳಲ್ಲಿ ಸೇರಿ 12 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಾಗಿದ್ದು, ಅವುಗಳಲ್ಲಿ ಶೇ.30 ರಷ್ಟು ಪಿಒಪಿ ಮೂರ್ತಿಗಳಿದ್ದವು! ವರ್ಷದಿಂದ ವರ್ಷಕ್ಕೆ ನಗರದಲ್ಲಿ ಜನಸಂಖ್ಯೆಯು ಏರಿಕೆಯಾಗುತ್ತಿದ್ದು, ಈ ಬಾರಿಯೂ ಮೂರ್ತಿಗಳ ಪ್ರತಿಷ್ಠಾಪನೆ ಸಂಖ್ಯೆಯು ಇನ್ನಷ್ಟು ಹೆಚ್ಚುವ ನೀರಿಕ್ಷೆಯಿದೆ.
ನಗರದ ಜನಸಂಖ್ಯೆ 1.20 ಕೋಟಿ ದಾಟುತ್ತಿದ್ದು, ಮನೆಗಳ ಸಂಖ್ಯೆ 20 ಲಕ್ಷ. ಕಳೆದ ವರ್ಷ ಬಿಬಿಎಂಪಿ ಕಲ್ಯಾಣಿಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆಯಾಗಿದ್ದು, ಒಂದು ಮೂರ್ತಿಗೆ ಕನಿಷ್ಠ 5 ಸಾವಿರ ರೂ. ಎಂದಾದರೂ, ಅಂದಾಜು 150 ಕೋಟಿ ರೂ. ಖರ್ಚು ಮಾಡಲಾಗಿತ್ತು ಎಂದು ಅಂದಾಜಿಸಲಾಗಿದೆ. ಇನ್ನು ಮೊಬೈಲ್ ಟ್ಯಾಂಕ್‌ಗಳಲ್ಲಿ ಹಾಗೂ ಮನೆಗಳಲ್ಲಿ ಬಕೆಟ್‌ಗಳಲ್ಲಿಯೇ ಲೆಕ್ಕಕ್ಕೆ ಸಿಗದಷ್ಟು ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಮೂರ್ತಿಗೆ 150 ಕೋಟಿಗೂ ಅಧಿಕ ಹಣ ವ್ಯಯ: ಈ ಬಾರಿಯೂ ನಗರದಲ್ಲಿ ಅದ್ಧೂರಿ ಗಣೇಶೋತ್ಸವ ಕಂಡು ಬಂದಿದ್ದು, ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣೇಶ ಮೂರ್ತಿ ಸಂಖ್ಯೆ ಸುಮಾರು 50 ಸಾವಿರದ ಗಡಿ ದಾಟುತ್ತಿದೆ. ಮಾರುಕಟ್ಟೆಯಲ್ಲಿ 200 ರೂ.ನಿಂದ ಒಂದು ಲಕ್ಷ ರೂ.ವರೆಗೂ ಗಣೇಶ ಮೂರ್ತಿ ಲಭ್ಯ. ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಕನಿಷ್ಠ ಐದು ಅಡಿ ಎತ್ತರದ ಪಿಒಪಿ ಅಥವಾ ಮಣ್ಣಿನ ಮೂರ್ತಿ ಕೂರಿಸುತ್ತಾರೆ. ಐದು ಅಡಿ ಮೂರ್ತಿಗೆ ಸದ್ಯ ಮಾರುಕಟ್ಟೆಯಲ್ಲಿ ಕನಿಷ್ಠ 5,000 ರೂ.ಬೆಲೆ ಇದ್ದು, 30 ಕೋಟಿ ರೂ. ವ್ಯಯಿಸಲಾಗುತ್ತದೆ. ಮನೆಗಳಲ್ಲಿ 12 ಲಕ್ಷಕ್ಕೂ ಅಧಿಕ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತಿದ್ದು, ಒಂದು ಮೂರ್ತಿಗೆ ಕನಿಷ್ಠ 1,000 ರೂ. ಎಂದು ಕೊಂಡರೂ 120 ಕೋಟಿ ರೂ.ಗೂ ಹೆಚ್ಚು ಹಣ ಮೂರ್ತಿಗಾಗಿಯೇ ವ್ಯಯಿಸಲಾಗುತ್ತದೆ.
ಇತರೆ ವಹಿವಾಟು 100 ಕೋಟಿಗೂ ಅಧಿಕ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಷ್ಟೇ ಪ್ರಾಮುಖ್ಯತೆಯನ್ನು ಮಂಟಪದ ಅಲಂಕಾರಕ್ಕೂ ನೀಡಲಾಗುತ್ತದೆ. ಅಲಂಕಾರಿಕ ವಸ್ತು, ಪೆಂಡಾಲ್-ಶಾಮಿಯಾನ, ಪಟಾಕಿ, ಸಂಗೀತ ಕಾರ್ಯಕ್ರಮ ಸೇರಿದಂತೆ ಇತರೆ ಖರ್ಚು ಮೂರ್ತಿ ದರಕ್ಕಿಂತಲೂ ಮೂರುಪಟ್ಟು ಹೆಚ್ಚಿರುತ್ತದೆ. ಇದಕ್ಕಾಗಿಯೇ 100 ಕೋಟಿ ರೂ. ಖರ್ಚು ಮಾಡುತ್ತಾರೆ ಲೆಕ್ಕಾಚಾರವಿದೆ. “ವಿವಿಧ ಬಗೆಯ ಪ್ಲಾಸ್ಟಿಕ್ ಹೂವಿನ, ಮುತ್ತಿನ ಹಾರಗಳು, ಪೇಟಾ, ಛತ್ರಿ, ಮೂರ್ತಿಯ ಹಿಂಬದಿ ಅಲಂಕಾರ ಸಾಮಗ್ರಿ, ವಿದ್ಯುತ್ ದೀಪಾಲಂಕಾರ, ಪಟಾಕಿ ಎಂದು ಕನಿಷ್ಠ 10 ರಿಂದ 15 ಸಾವಿರ ರೂ. ತನಕ ಒಂದು ಗಣೇಶ ಸಂಘವು ವಹಿವಾಟು ನಡೆಸುತ್ತದೆ ಎಂದು ಜಯನಗರದ ವರ್ತಕರೊಬ್ಬರು ತಿಳಿಸಿದರು.
ಖರ್ಚಿಗೆ ಕಡಿವಾಣ ಅಗತ್ಯ: ಉತ್ಸವ ಅದ್ಧೂರಿ ಆದಂತೆ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಸಾವಿರಾರೂ ರೂ. ಖರ್ಚು ಮಾಡಿದರೂ ಅಂತಿಮವಾಗಿ ಗಣೇಶ ಮೂರ್ತಿಯನ್ನು ನೀರಿಗೆ ಹಾಕಲಾಗುತ್ತದೆ. ಅದರ ಬದಲು ಪರಿಸರ ಸ್ನೇಹಿ ಹಬ್ಬಕ್ಕೆ ಆದ್ಯತೆ ನೀಡುವ ಮೂಲಕ ದುಂದು ವೆಚ್ಚವನ್ನು ನಿಯಂತ್ರಣ ಮಾಡಬಹುದಾಗಿದೆ. ಚಿಕ್ಕ ಗಾತ್ರದ ಮಣ್ಣಿನ ಗಣೇಶ ಪ್ರತಿಷ್ಠಾಪನೆ, ಹಸಿರಿನ ವಾತಾವರಣ ಕಲ್ಪಸಿ ಮಾಡಿ ಸರಳ ಕಾರ್ಯಕ್ರಮ ಮಾಡುವ ಸರಳವಾಗಿ ಹಬ್ಬ ಆಚರಿಸಬೇಕು. ದುಂದು ವೆಚ್ಚದ ಮಾಡುವ ಹಣದಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ಕೆ, ನೆರೆ ಸಂತ್ರಸ್ತರಿಗೆ ನೆರವಾಗಲಿ ಎಂಬುದು ಪರಿಸರವಾದಿಗಳ ಅಭಿಮತವಾಗಿದೆ.
ಮಣ್ಣಿನ ಮೂರ್ತಿಗೆ ಮಾತ್ರ ಚಂದಾ ನೀಡಿ: ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವವರಲ್ಲಿಯೇ ಹೆಚ್ಚು ಪಿಒಪಿ ಬಳಸುತ್ತಿರುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಸಾರ್ವಜನಿಕ ಪ್ರತಿಷ್ಠಾಪನೆಗಳು ಭಕ್ತರ ಹಾಗೂ ದಾನಿಗಳ ಹಣದ ಮೇಲೆಯೇ ಅವಲಂಬಿತವಾಗಿರುತ್ತದೆ. ಹೀಗಾಗಿ, ಗಣೇಶ ಪ್ರತಿಷ್ಠೆಗೆ ಚಂದಾ ಕೇಳಲು ಮನೆಗೆ ಬಂದಾಗ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದರೆ ಮಾತ್ರ ಚಂದಾ ನೀಡವುದಾಗಿ ನಿರ್ಧರಿಸಬೇಕು. ಆಗ ಮಾತ್ರ ಪಿಒಪಿ ಮೂರ್ತಿ ನಿರ್ಮೂಲನೆ ಸಾಧ್ಯ. ಇನ್ನು ಜನಪ್ರತಿನಿಧಿಗಳು, ಉದ್ಯಮಿಗಳು ಕೂಡಾ ಸಂಘ, ಉತ್ಸವ ಸಮಿತಿಗೆ ಮೂರ್ತಿ ಕೊಡುಗೆ ನೀಡುವಾಗಲೂ ಮಣ್ಣಿನ ಮೂರ್ತಿಗೆ ಆದ್ಯತೆ ನೀಡಬೇಕಿದೆ.
* ಜಯಪ್ರಕಾಶ್ ಬಿರಾದಾರ್