ಕನಸಿನ ಚೆಲುವೆಯ ಧೇನಿಸುತ್ತಾ, ನಾಳೆಯ ಪ್ರೇಮಿಗಳ ದಿನದ ಅಗ್ನಿಪರೀಕ್ಷೆಗೆ ಹೃದಯವೊಡ್ಡಿ ನಿಂತ ಹುಡುಗರಿಗೆಲ್ಲ ಒಂದು ಕುತೂಹಲವಂತೂ ಇರುತ್ತೆ; ಈ ಚೆಂದುಳ್ಳಿಯರಿಗೆ ಪ್ರೀತಿ ಹೇಗೆ ಹುಟ್ಟುತ್ತೆ? ಅವರ ಹೃದಯ ಚಿಪ್ಪಿನಲ್ಲಿ ಮುತ್ತಾದ ರಾಜಕುಮಾರ ಎಂಥವನು? ಅಂತ. ಹೂವಿನೊಡಲಿನ ಪರಿಮಳದಂತೆ, ಆಕೆಯ ಎದೆಯಾಳದ ಪ್ರೀತಿಯ ಹುಟ್ಟು ಕೂಡ. ಒಬ್ಟಾಕೆ ಇಲ್ಲಿ ತನ್ನ ಮನದಾಳದಲ್ಲಿ ಹುಟ್ಟಿದ ಪ್ರೀತಿಯನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾಳೆ. ಇದು ನಿಮ್ಮನ್ನೂ ಕಾಡೀತು…
ಅಂದು ಬೆಳಗು ಮುಸ್ಸಂಜೆ. ಗಂಟೆಯ ಅರಿವಿಲ್ಲದೇ ಹರಟುತ್ತಾ ಗೆಳತಿಯರ ಜೊತೆ ಹೋಗುತ್ತಿದ್ದಾಗ ಪಕ್ಕದಿಂದ “ಮಗಾ ಆರೂವರೆ ಆಯ್ತಲೇ…’ ಅಂದಾಗಲೇ ನಾನು ಗಡಿಯಾರದ ಮುಳ್ಳಿನ ಚಲನೆ ನೋಡಿದ್ದು. ನಂತರ ಬಸ್ಸಿನ ನೆನಪಾಗಿ ಕಾಲ್ಗಳು ಬೇಗ ಬೇಗ ಹೆಜ್ಜೆಯಿಡಬೇಕೆಂದು ಹೊರಟವು. ಕಣ್ಣಿನ ಕುತೂಹಲವು ಅವನನ್ನು ಒಮ್ಮೆ ನೋಡುವಂತೆ ಮಾಡಿತು ಅಷ್ಟೇ. ಹುಡುಗಿಗೂ ಲವ್ ಆ್ಯಟ್ ಫಸ್ಟ್ ಸೈಟ್ ಆಗಿಹೋಗಿತ್ತು. ಅದೇನೋ, ಅವನನ್ನು ನೋಡಿದ ತಕ್ಷಣ ಬಸ್ ಮರೆತೇ ಹೋಯಿತು! ಅವನನ್ನು ನೋಡ್ತಾ ನೋಡ್ತಾ ಅವತ್ತು ಬಸ್ ತಪ್ಪಿ, ಲಾಸ್ಟ್‌ಬಸ್‌ಗೆ ಹೋಗಿದ್ದೂ ನಿಜ.
ಗಾಳಿಗೆ ಹಾರುತ್ತಿದ್ದ ಅವನ ಕೂದಲಿನಂತೆ ನನ್ನ ಮನಸ್ಸು ಹಗುರಾಗಿತ್ತು. ಅವನ ಗುಳಿಕೆನ್ನೆಯಲ್ಲಿ ಜಾರಿಬಿದ್ದ ಅನುಭವ. ಎಲ್ಲಕ್ಕಿಂತ ಅವನ ಮುಖಕ್ಕೆ ಹೆಚ್ಚು ಅಂದ ನೀಡುತ್ತಿದ್ದುದು ಆ ಕುಡಿಮೀಸೆ. ಅವನ ತುಂಟ ನಗುವು ಆ ಮೀಸೆಯಂಚಲಿ ಅಡಗುತ್ತಿತ್ತು. ಹುಡುಗಿಯಾಗಿ ನಾನು ಅವನನ್ನು ಇಷ್ಟೆಲ್ಲ ಹೊಗಳುವುದು ಸ್ವಲ್ಪ ನಿಷಿದ್ಧ. ಕಾರಣವಿಲ್ಲದೇ, ವಿನಾಕಾರಣ ಅವನ ನೆನಪು ಪದೇಪದೆ ಬರುತ್ತಿತ್ತು. ಅಪರಿಚಿತನೊಬ್ಬ ಹೀಗೆ ನೆನಪಾಗಿ ಕಾಡುತ್ತಿದ್ದಾಗ ಆ ನನ್ನ ಭಾವವೂ ಪ್ರೀತಿಯೇನೋ ಎಂದುಕೊಂಡೆ.
ಅವನು ಕಂಡಂದಿನಿಂದ ಎಷ್ಟೋ ಬಾರಿ ಆ ಹಾದಿಯಲ್ಲಿ ಹೋದೆ. ಅವನು ಮತ್ತೂಮ್ಮೆ ಸಿಗಬಹುದೆಂಬ ಸಣ್ಣ ನಿರೀಕ್ಷೆ ದಿನವೂ ಹುಸಿಯಾಗುತ್ತಿತ್ತು. ಒಂಚೂರು ಅವನ ನೋಡುವ ಕುತೂಹಲ, ಬಯಕೆ ಒಮ್ಮೆಲೇ ಬಂದು, ವಿರಹ ಅಪ್ಪುತ್ತಿತ್ತು. ಒಮ್ಮೆ ನನ್ನ ಮನಸ್ಸನ್ನು ಕೆಡಿಸಿದ ಆಗಂತುಕ ಅವನು. ಓ ಅಪರಿಚಿತ, ಯಾವಾಗ ನನಗೆ ಪರಿಚಿತನಾಗುತ್ತಿಯೋ ಎಂದು ಹಂಬಲಿಸುತ್ತಾ, ಅವನಿಗಾಗಿ ಕಾತರಿಸುತ್ತಿದ್ದೆ. ಇನ್ನು ಅವನು ಸಿಗಲಾರನೇನೋ ಎಂದು ಒಂದು ತಿಂಗಳ ನಂತರ ಮನಸ್ಸಿಗೆ ಅನಿಸತೊಡಗಿತು.
ಮಬ್ಬು ಮೋಡವ ಸರಿಸಿ ಸೂರ್ಯನ ರಶ್ಮಿ ಭೂಮಿಗೆ ಬರುವ ಹೊತ್ತು. ಬೆಳ್ಳಂಬೆಳಗ್ಗೆ ಕ್ಲಾಸ್ ಇಟ್ಟಿದ್ದ ಲೆಕ್ಚರರ್‌ಗೆ ಸ್ವಲ್ಪ ಗೊಣಗುತ್ತಾ ಹೋಗುತ್ತಿದ್ದೆ. ಅವನ ನೆನಪೀಗ ಹಾದಿಯಲ್ಲಿ ಹಾಸಿ ಹೋಗಿತ್ತು. ಅವನು ಸಿಕ್ಕ ಅದೇ ಜಾಗವ ಮತ್ತೆ ಹಾದು ಹೊರಟಿದ್ದೆ. “ಎಕ್ಸ್‌ಕ್ಯೂಸ್ ಮಿ’ ಅದೇ ಮೃದು ಬೆರೆತ ಗಡಸು ದನಿ. ಎಲ್ಲೋ ಕೇಳಿದ್ದೆ ಎನ್ನುತ್ತಲೇ ಮನಸ್ಸು ತಿರುಗಿತು. ಒಂದೂವರೆ ತಿಂಗಳಿಂದ ಕಾಡುತ್ತಿದ್ದವ ಕಣ್ಮುಂದಿದ್ದ. ಮಾತು ಮೌನಕ್ಕಿಳಿಯಿತು. “ಲೈಬ್ರರಿ ಎಲ್ಲಿದೆ?’ ಎಂದು ಕೇಳಿದಾಗ ಉತ್ತರ ಹೇಳಿದವಳ ಸ್ವರ ಕಂಪಿಸಿತು, ಉದ್ವೇಗದಿಂದ. ನನ್ನ ಡಿಪಾರ್ಟ್‌ಮೆಂಟ್‌ಗೆ ಲೈಬ್ರರಿ ದಾಟಿ ಹೋಗಬೇಕಾದ್ದರಿಂದ, ಅವನೂ ನನ್ನ ಜೊತೆಗೆ ಬಂದ. ಪರಿಚಯಕ್ಕೆ ಬೇಕಾದಷ್ಟು ಮಾತು ಇಬ್ಬರಲ್ಲೂ ಆಯಿತು.
ಕಾಲೇಜಿಂದ ಮನೆಗೆ ಬಂದವಳಿಗೆ ಅವನು ಬಿಟ್ಟರೆ ಮತ್ತೇನೇನೂ ನೆನಪಾಗುತ್ತಿರಲಿಲ್ಲ. ಅವನನ್ನು ನಾ ಪ್ರೀತಿಸಲು ಹತ್ತು ಕಾರಣ ಹುಡುಕಿದೆ. ಎಷ್ಟೋ ಕಾರಣಗಳು ಸಿಕ್ಕವು. ಆದರೆ, “ನಾ ಅವನನ್ನು ಪ್ರೀತಿಸುತ್ತೇನೆ ಎಂಬುದಷ್ಟೇ ನಾನವನನ್ನು ಪ್ರೀತಿ ಮಾಡಲು ಕಾರಣ’ ಎಂಬ ನನ್ನ ಉತ್ತರಕ್ಕೆ, ನನಗೇ ನಗುಬಂತು. ಅಷ್ಟರಲ್ಲೇ ಮೊಬೈಲ್ ಕರೆಯಿತು. ನೋಡಿದಾಗ ಅನೌ°ನ್ ನಂಬರ್‌ನಿಂದ “ಹಾಯ…’ ಅಂತ ಮೆಸೇಜು ಬಂದಿತ್ತು. “ಯಾರು?’ ಎಂದು ಕೇಳಿದಾಗ ಅವನೇ! ಖುಷಿಯು, ಅನುಮಾನವು ಒಮ್ಮೆಲೆ ಬಂತಾದರೂ ಮನಸ್ಸು ಅವನಿಗೆ ಉತ್ತರ ಕಳಿಸುತ್ತಲೇ ಇತ್ತು. ಪರಿಚಿತರು ಸ್ನೇಹಿತರಾಗಲು ತುಂಬಾ ದಿನವಾಗಲಿಲ್ಲ. ಮನಸ್ಸು ರೆಕ್ಕೆಯಿಲ್ಲದೇ ಗಗನಕ್ಕೆ ಜಿಗಿದಿತ್ತು.
ಸ್ನೇಹ ಸಂಬಂಧ ಒಂಚೂರು ಮುಂದುವರಿದು, ಯಾವಾಗ ಅವನಿಗೆ ಲವ್ವಾಗುತ್ತೋ ಅಂತ ಕಾಯುತ್ತಿದ್ದೇನೆ. ನಾಳೆ ವ್ಯಾಲೆಂಟೈನ್ಸ್ ಡೇ. ನಿಮಿಷವಲ್ಲ, ಸೆಕೆಂಡುಗಳನ್ನು ಎಣಿಸುತ್ತಿದ್ದೇನೆ.
– ಪ್ರಭಾ ಹೆಗಡೆ ಭರಣಿ ಧಾರವಾಡ