Advertisement
ಹಾಯ್ ಬಸ್ಸಿನ ಗೆಳತಿ,ಎಂದಿನಂತೆ ಸರಿಯಾಗಿ ಬೆಳಗ್ಗೆ ಒಂಬತ್ತು ಗಂಟೆಗೆ ಆಫೀಸಿಗೆ ಹೊರಟವನು ಮತ್ತದೇ ಮಾಮೂಲಿ ಬಸ್ಸು ಹತ್ತಿದ್ದೆ. ನಿನಗೆ ಗೊತ್ತಲ್ಲ? ನಾನು ಹತ್ತುವ ಬಸ್ಸು ಹೆಚ್ಚು ಕಡಿಮೆ ಖಾಲಿಯಾಗಿಯೇ ಇರುತ್ತದೆ. ನನಗಾಗಿಯೇ ಬಿಟ್ಟಿರುವರೇನೋ ಎನ್ನುವಂತೆ ಬಸ್ಸಿನ ಹಿಂಬಾಗಿಲಿನ ಪಕ್ಕದ ಎರಡನೇ ಸೀಟು ಸದಾ ಖಾಲಿಯಾಗಿಯೇ ಇರುತ್ತಿತ್ತು. ಇವತ್ತು ಕೂಡ ಖಾಲಿ ಇತ್ತು. ಸರಕ್ಕನೇ ಅಲ್ಲಿ ಕುಳಿತುಕೊಂಡವನ ಕಣ್ಣುಗಳು ಅಪ್ರಯತ್ನಪೂರ್ವಕವಾಗಿ ಡ್ರೆ„ವರ್‌ನ ಹಿಂಬದಿಯ ಎರಡನೇ ಸೀಟಿನ ಕಿಟಕಿಯ ಪಕ್ಕದ ಸೀಟಿನ ಬಳಿ ನೋಡಿದ್ದವು. ಅಲ್ಲಿ ನೀನು ಕಾಣಿಸಲಿಲ್ಲ..!
Related Articles
Advertisement
ದಿನವೂ ನೀನು, ನನ್ನ ಸ್ಟಾಪ್ ಬರುವ ಮೊದಲೇ ಕೆಳಗಿಳಿಯುತ್ತಿದ್ದೆ. ಮತ್ತೆರಡು ಸ್ಟಾಪು ದಾಟಿದರೆ ನನ್ನ ಆಫೀಸು. ನಿನಗದು ಗೊತ್ತಿದೆಯಾ?.. ನನಗೆ ಗೊತ್ತಿಲ್ಲ. ಆದರೆ ಹಾಗೆ ಪ್ರತೀ ಸಾರಿ ಇಳಿಯುವ ಮುನ್ನ ಮತ್ತದೇ ಮಲ್ಲಿಗೆಯ ನಗೆ ಬೀರಲು ನೀನು ಮರೆಯುತ್ತಿರಲಿಲ್ಲ. ಆಗೆಲ್ಲಾ ನನ್ನಲ್ಲಿ ಅದೆಂಥದೋ ಪುಳಕ. ಅದೊಂದು ನಗು ಸಾಕಿತ್ತು ನನಗೆ. ಅವತ್ತಿಡೀ ನಾನು ಹ್ಯಾಪಿಯೋ ಹ್ಯಾಪಿ. ಆಫೀಸಿನಲ್ಲೂ ನನಗೆ ಅದೇ ಪ್ರಶಂಸೆ. “ಏನು ಮರಾಯೆÅ ಯಾವತ್ತೂ ಖುಷಿಯಾಗಿರಿ¤àರಲ್ಲಾ’ ಅಂತ. ಅದಕ್ಕೆ ಕಾರಣ ಮಾತ್ರ ನೀನೇ ಆಗಿದ್ದೆ ಎನ್ನುವುದನ್ನು ಅವರಿಗೆ ಹೇಗೆ ಹೇಳಲು ಸಾಧ್ಯವಿತ್ತು ಹೇಳು!
ಇವತ್ತು ನೀನು ಕಾಣಿಸುತ್ತಿಲ್ಲ. ನಿನ್ನ ಆ ನಗು ಇಲ್ಲ ಎನ್ನೋ ಕಾರಣಕ್ಕಾಗಿಯೇ ನಾನು ನಾನಾಗಿಲ್ಲ ಎನ್ನಿಸುತ್ತಿದೆ. ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇವತ್ತು ಕೆಲಸಕ್ಕೆ ರಜೆ ಮಾಡಿಬಿಡಲಾ ಎಂದುಕೊಳ್ಳುತ್ತಿದ್ದೇನೆ. ಇಷ್ಟು ದಿನಗಳಲ್ಲಿ ನಿನ್ನನ್ನು ಒಮ್ಮೆಯಾದರೂ ಮಾತನಾಡಿಸಲು ಪ್ರಯತ್ನ ಪಟ್ಟಿದ್ದಿದ್ದರೆ ಈ ಹೊತ್ತು ನಿನ್ನ ಮೊಬೈಲ್ ನಂಬರಾದರೂ ನನ್ನ ಬಳಿ ಇರುತಿತ್ತು. ಫೋನು ಮಾಡಿ ನೀನ್ಯಾಕೆ ಬಂದಿಲ್ಲ ಎಂದು ತಿಳಿದುಕೊಳ್ಳಬಹುದಿತ್ತಲ್ಲಾ ಅಂತನ್ನಿಸುತ್ತಿದೆ. ಯಾರನ್ನಾದರೂ ಕೇಳ್ಳೋಣ ಎಂದರೆ ಯಾರೂ ಗೊತ್ತಿಲ್ಲ. ಅಷ್ಟಕ್ಕೂ ಏನಂತ ಕೇಳಲಿ ಅನ್ನೋದು ತಿಳಿಯುತ್ತಿಲ್ಲ…
ಗೆಳತಿ, ನೀನು ಚೆನ್ನಾಗಿಯೇ ಇದ್ದೀಯ ಎನ್ನೋ ನಂಬಿಕೆ ನನ್ನದು. ನಾಳೆ ಬರುತ್ತೀಯಲ್ಲ? ಆಗ ನಿನ್ನನ್ನು ಖಂಡಿತ ಮಾತನಾಡಿಸುತ್ತೇನೆ. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನನ್ನ ಸ್ನೇಹವನ್ನು ಬಿಚ್ಚಿಡುತ್ತೇನೆ. ಮಾತನಾಡಲು ಬಹಳಷ್ಟು ಇದೆ. ಹಾಗಾಗಿ ಬಾರದೇ ಇರಬೇಡ.
ಇತಿ ನಿನ್ನ ಸಹಪಯಣಿಗ
-ನರೇಂದ್ರ ಎಸ್. ಗಂಗೊಳ್ಳಿ