Advertisement

ಹುಡುಗಿ ಸ್ವಲ್ಪ ಹೈಟು ಕಡಿಮೆ!

12:30 AM Feb 22, 2019 | |

ನನ್ನ ಎತ್ತರ ಐದು ಅಡಿ ಅರ್ಧ ಅಂಗುಲ. ಎತ್ತರ ಕಡಿಮೆ ಇರುವ ಕಾರಣ ಯಾವಾಗಲೂ ನಿಜ ವಯಸ್ಸಿಗಿಂತ ಐದು ವರ್ಷ ಚಿಕ್ಕವಳಾಗೇ ಕಾಣುತ್ತೇನೆ. ಸ್ಕೂಲ್ ದಿನಗಳಲ್ಲೂ ಸಹಪಾಠಿಗಳಿಗಿಂತ ಎತ್ತರದಲ್ಲಿ ಕಡಿಮೆ ಇದ್ದ ಕಾರಣ, ನನ್ನದು ಮೊದಲ ಬೆಂಚಿನಲ್ಲೇ ಜಾಗ ಖಾಯಂ. ಪೀಟಿ ಮತ್ತು ಪ್ರಾರ್ಥನೆಯ ಸಮಯದಲ್ಲಿ ಸಾಲಿನಲ್ಲಿ ಮೂರನೆಯವಳಾಗಿ ನಿಲ್ಲುತ್ತಿದ್ದೆ. ಆಗೆಲ್ಲ ನನ್ನ ಗೆಳತಿ ನೀರಜಾ ಮತ್ತು ಪರಿಮಳಾರ ಮೇಲೆ ನನಗೆ ತುಂಬಾ ಕೋಪ. ಏಕೆಂದರೆ, ಅವರಿಬ್ಬರೂ ನನಗಿಂತ ಕುಳ್ಳಿಯರಾದ ಕಾರಣ ಮೊದಲನೆಯ ಮತ್ತು ಎರಡನೆಯವರಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಮುಂದೆ ನಿಂತವರು ಎಲ್ಲರ ಗಮನ ಸೆಳೆಯುತ್ತಿದ್ದರು. ಆಗಾಗ ಟೀಚರ್‌ಗಳೂ ಅವರನ್ನೇ ಮಾತನಾಡಿಸುತ್ತಿದ್ದರು. ಇತ್ತ ಮುಂದೆಯೂ ಅಲ್ಲದ ಅತ್ತ ಹಿಂದೆಯೂ ಅಲ್ಲದ ನಾನು ಒಳಗೊಳಗೇ ಅದೆಂತಹುದೋ ನೋವಲ್ಲಿ ಬೀಳುತ್ತಿದ್ದೆ. ನನ್ನನ್ನು ಇನ್ನೊಂದು ಸ್ವಲ್ಪ ಕುಳ್ಳಗೆ ಮಾಡುವುದಕ್ಕೇನಾಗಿತ್ತು ದೇವರಿಗೆ ದಾಡಿ ಎಂದು ಶಪಿಸಿದ್ದೂ ಇದೆ. ಪಾಠದ ಸಮಯದಲ್ಲಿ ನಾವು ಮೂರೂ ಜನ ಒಂದೇ ಬೆಂಚಿನಲ್ಲಿ ಕೂರುತ್ತಿದ್ದೆವು ಎನ್ನುವುದೊಂದೇ ಸಮಾಧಾನ ನನಗೆ. ಕಾಲೇಜಿನ ದಿನಗಳಲ್ಲಿ ನನ್ನ ಮಾತುಗಳಿಂದಲೇ ಎಲ್ಲರನ್ನು ಆಕರ್ಷಿಸಿದ್ದರಿಂದ ಆಗ ಎತ್ತರ ಸಮಸ್ಯೆಯೇ ಆಗಲಿಲ್ಲ. ಮನೆಯಲ್ಲಿ ಅಣ್ಣ “ಏ ಕುಳ್ಳಿ ಬಾರೇ ಇಲ್ಲಿ’ ಎಂದು ಕರೆದರೂ ಯಾವತ್ತೂ ಬೇಸರವಾಗಿರಲೇ ಇಲ್ಲ.

Advertisement

ನನ್ನ ಕಾಲೇಜು ದಿನಗಳು, ಕೆಲಸಕ್ಕೆ ಸೇರಿದ ದಿನಗಳು ಅವೆಷ್ಟು ಚೆಂದವಿದ್ದವೆಂದರೆ ಹೇಳಲು ಪದಗಳೇ ಸಾಲದು. ಗೆಳತಿಯರೊಡನೆ ನಿಶ್ಚಿಂತೆಯಿಂದ ಹಕ್ಕಿಯಂತೆ ಹಾರಾಡುತ್ತ ನೆಮ್ಮದಿಯಿಂದಿದ್ದ ದಿನಗಳವು. ನಿಜ ಹೇಳಬೇಕೆಂದರೆ ನನಗೆ ಪ್ರೊಪೋಜ… ಮಾಡಿದ ಹುಡುಗರಿಗೂ ನನ್ನ ಎತ್ತರದ ಬಗ್ಗೆ ಯಾವುದೇ ತಕರಾರಿರಲಿಲ್ಲ. 

ಇಡೀ ಜೀವನದಲ್ಲೇ ಮೊದಲಬಾರಿಗೆ ನನ್ನ ಎತ್ತರದ ಬಗ್ಗೆ ಕೀಳರಿಮೆ ಅಂತ ಆಗಿದ್ದೆೆಂದರೆ ಮದುವೆಗೆ ಹುಡುಗನನ್ನು ಹುಡುಕುವಾಗ. ನಾನು ಒಪ್ಪಿದ ಹುಡುಗನ ದೂರದ ಸಂಬಂಧಿಯೊಬ್ಬರು, “ನಿಮ್ಮ ಹುಡುಗಿ ಸ್ವಲ್ಪ ಹೈಟು ಕಡಿಮೆ. ಇವರಿಬ್ಬರದೂ ಅಮಿತಾಭ್‌ ಬಚ್ಚನ್‌-ಜಯಾ ಬಾಧುರಿಯಂತಹ ಜೋಡಿಯಾಗುತ್ತದೆ. ಇಬ್ಬರನ್ನೂ ಒಟ್ಟಿಗೆ ನೋಡಲು ಲಕ್ಷಣವಾಗಿರುವುದಿಲ್ಲ’ ಎಂದು ತಿರಸ್ಕರಿಸಿದ ಮೇಲೆಯೇ ನಾನು ಕುಗ್ಗಿ ಹೋಗಿದ್ದು. ಮತ್ತೂಬ್ಬರಂತೂ “ಅಯ್ಯೋ! ಹುಡುಗಿ ಐದು ಅಡಿಗಿಂತ ಕಡಿಮೆ ಅನ್ನಿಸುತ್ತೆ. ಸಂಬಂಧ ಮುಂದುವರೆಸಿದರೆ ಹುಟ್ಟುವ ಮಕ್ಕಳ ಬೆಳವಣಿಗೆ ಸರಿಯಾಗಿರದು’ ಎಂದು ಮದುವೆಗಿಂತ ಮುಂಚೆ ಮಕ್ಕಳಿಗೆ ಕುಲಾವಿಯನ್ನೂ ಹೊಲಿಸಿಬಿಟ್ಟಿದ್ದರು.

ನಂತರ ಬಂದವರೇ ನನ್ನವರು. ಮೊದಲಿನೆರಡರಂತೆ ಇದೂ ಒಂದು ಎಂದು ಕಾಟಾಚಾರಕ್ಕೆ ಬಂದು ಮುಖವ ತೋರಿಸಿದ್ದೆ. ನನ್ನ ಅದೃಷ್ಟವೋ ಏನೋ ಎನ್ನುವಂತೆ ಯಾವ ನಿರೀಕ್ಷೆಯೂ ಇಲ್ಲದೆ ಐದು ಅಡಿ ಎಂಟು ಅಂಗುಲದ ಇವರು ನನ್ನನ್ನು ಒಪ್ಪಿಬಿಟ್ಟರು. ಈಗ ಮದುವೆಯಾಗಿ ಇಪ್ಪತ್ತು ವರ್ಷಗಳಾಗಿವೆ. ಹದಿನೈದು ವರ್ಷದ ಮಗ ನನ್ನನ್ನೂ ಮೀರಿ ಬೆಳೆದಿದ್ದಾನೆ. ಇಲ್ಲಿಯವರೆಗೂ ನಮ್ಮಿಬ್ಬರ ನಡುವೆ ಯಾವತ್ತೂ ಎತ್ತರದ ಪ್ರಶ್ನೆಯೇ ಬಂದಿಲ್ಲ.  

ಆದರೆ, ಮದುವೆಯಾದ ಹೊಸದರಲ್ಲಿ ಸಂಬಂಧಿಕರು ಊಟಕ್ಕೆ ಮನೆಗೆ ಆಹ್ವಾನಿಸುತ್ತಾರಲ್ಲ, ಆಗ ನನ್ನ ಗಂಡನ ಚಿಕ್ಕಮ್ಮನ ಮನೆಗೆ ಹೋಗಿದ್ದೆವು. ಮಾತುಮಾತಿನ ನಡುವೆ “ಗೇಣುದ್ದ ಸೂಜಿಗೆ ಮಾರುದ್ದ ದಾರವ ಪೋಣಿಸಿದಂಗಾಯ್ತು ನೋಡು, ಈ ಜೋಡಿ. ಹುಡುಕೀ ಹುಡುಕೀ ಕೊನೆಗೆ ಸರಿಯಾದಕ್ಕೆ ಬಿದ್ದಿದ್ದೀಯ ಕಣೇ ರಾಜಿ’ ಎಂದು ನನ್ನ ಅತ್ತೆಗೆ ಹೇಳಿದಾಗ ಅದರೊಳಗಿನ ಅರ್ಥವ ಅರಿಯಲು ಎರಡು ದಿನವೇ ಬೇಕಾಯ್ತು ನನಗೆ. ಒಮ್ಮೆಯಂತೂ ಅತ್ತೆಯ ಕಿಟ್ಟಿಪಾರ್ಟಿ ಸ್ನೇಹಿತೆಯೊಬ್ಬಳು, “”ಏನೇ ರಾಜಿ, ನಿನ್ನ ಅಡುಗೆ ಮನೆಯ ಅಲಮೇರಾಗಳ ಮೇಲಿನ ಭಾಗದ ಸಾಮಾನುಗಳನ್ನು ಕೆಳಗೆ ಶಿಫ್ಟ್ ಮಾಡಿದೆಯೋ ಇಲ್ಲ , ನಿನ್ನ ಸೊಸೆಗೆ ಒಂದು ಸ್ಟೂಲನ್ನು ಕೊಡಿಸಿದೆಯೋ… ಎರಡರಲ್ಲಿ ಒಂದು ಆಗಲೇ ಬೇಕು. ಇಲ್ಲದಿದ್ದರೆ ನಿನಗೆ ಊಟ ಇಲ್ಲ ಏನಂತೀಯಾ” ಎಂದು ನೆಗಾಡಿದರು. ಜೂಸನ್ನು ಕೊಡಲು ಹೋಗಿದ್ದ ನಾನು ಕೇಳಿಸಿಯೂ ಕೇಳಿಸಿಕೊಳ್ಳದ ಹಾಗೆ ಮುಗುಳುನಕ್ಕು ಸುಮ್ಮನಾದೆ. ಕೆಲವೊಮ್ಮೆ ಮನೆಗೆ ಬಂದು ಹೋಗುವವರೂ ಕೂಡ  “”ಮನೆಯ ಜಂತೆಯ ನಿನ್ನ ಗಂಡನೇ ಕ್ಲೀನ್‌ ಮಾಡಿಬೇಕಲ್ಲವೇ?” ಎಂದು ಕೊಂಕನಾಡುತ್ತಿದ್ದರು. ನಮ್ಮದೇ ಜಾತಿಯಲ್ಲಿ ಹುಡುಗಿ ಸಿಕ್ಕುವುದು ಕಷ್ಟ ಹೇಗೋ ಆಗಿಹೋಯ್ತಲ್ಲ ಅನ್ನುವ ಸಮಾಧಾನ ಅತ್ತೆ ಮನೆಯವರದು.

Advertisement

ಹೀಗೇ ದಿನಗಳು ಕಳೆದವು. ಎಷ್ಟು ಅಂತ ನಾನು ಸುಮ್ಮನಿರಲು ಸಾಧ್ಯ? ಇಂತಹ ಕಿರಿಕಿರಿ ಮಾತುಗಳಿಗೆ, ಕೆದಕಿ ಮುಜುಗರಕ್ಕೀಡು ಮಾಡುವ ನೋಟಗಳಿಗೆ ಬೇಸತ್ತು ನಿಧಾನವಾಗಿ ಮೋಜಿನಿಂದ ಕೂಡಿದ ಅಧಿಕಪ್ರಸಂಗಿ ಉತ್ತರಗಳನ್ನು ಥಟ್ಟನೆ ನೀಡಿ ಪ್ರಶ್ನಿಸಿದವರನ್ನು, ಹಂಗಿಸುವವರನ್ನು ಬೆಸ್ತು ಬೀಳಿಸಿ ಸುಮ್ಮನಿರುವಂತೆ ಮಾಡುವುದಕ್ಕೆ ಶುರುಮಾಡಿದೆ. “”ಹೌದಲ್ಲಾ, ನಿಮ್ಮ ಹುಡುಗನಿಗೆ ಐಶ್ವರ್ಯಾ ರೈ ಕಾಯುತ್ತಿದ್ದಳು ಅಂತ ಅನ್ನಿಸುತ್ತೆ. ಏನ್ಮಾಡೋದು ಆ ಅಭಿಷೇಕ್‌ ಬಚ್ಚನ್‌ ಎಂಬ ಬಡ್ಡಿ ಹೈದ ಬಿಡಲಿಲ್ಲ. ಇಲ್ಲದೆ ಹೋಗಿದ್ರೆ ವಿಶ್ವ ಸುಂದರಿಯೇ ನಿಮ್ಮ ಮನೆಯ ಬೆಳಗುತ್ತಿದ್ದಳು. ಅಲ್ಲವೆ?” ಎಂದು ಕೇಳಿದಾಗ ಮುಂದಿನ ಸಲ ಇಂತಹ ಕೊಂಕು ಮಾತುಗಳ ನನ್ನ ಮುಂದಾಡದೆ ಸುಮ್ಮನಾಗಿಬಿಟ್ಟರು. ಒಮ್ಮೆಯಂತೂ “”ನಾನು ಮರದ ಕಾಲು ಮಾಡಿಸಲಿಕ್ಕೆ ಹಾಕಿದ್ದೀನಿ. ನಾಳೆಯೋ, ನಾಡಿದ್ದೋ ಡೆಲಿವರಿ ಸಿಗುತ್ತದೆ. ಆಗ ನೋಡಿ ನಿಮ್ಮ ಹುಡುಗನಿಗಿಂತ ನಾನೇ ಉದ್ದ ಇರ್ತೀನಿ” ಎಂದಿದ್ದಕ್ಕೆ, “”ಬಾಳಾ ಶಾಣ್ಯಾ ಇದ್ದಾಳೆ ಕಣೆ ನಿನ್ನ ಸೊಸೆ, ಹುಷಾರಾಗಿರು. ಸಿಟಿ ಹುಡುಗಿ ಅಲ್ಲವಾ ದೊಡ್ಡೋರು ಚಿಕ್ಕೋರೂ ಅನ್ನೋದು ಗೊತ್ತಾಗಲ್ಲ . ಮುಂಡೇವಕ್ಕೆ” ಎಂದು ಅತ್ತೆಯ ಕಿವಿಯಲ್ಲಿ ಮಾತುಗಳನ್ನು ಉದುರಿಸಿ ಹೋದರು.

ಇಂದಿಗೂ ಬೆನ್ನಹಿಂದೆ ಮಾತನಾಡುವವರ ಬಗ್ಗೆ ನನಗೆ ಬೇಕಿಲ್ಲ. ಆದರೆ, ನೇರವಾಗಿ ನೋಯಿಸುವವರಿಂದ ತಪ್ಪಿಸಿಕೊಂಡಿದ್ದೇನೆ ಎನ್ನುವ ಸಮಾಧಾನವಿದೆ. ವಯಸ್ಸಿನಲ್ಲಿ ದೊಡ್ಡವರು ಎನ್ನುತ್ತ ಸುಮ್ಮನೆ ಕುಂತಿದ್ದರೆ ಬಹುಶಃ ನಾನು ಇನ್ನೂ ಕೇಳಬೇಕಿತ್ತೇನೋ. ಅತೀ ಬುದ್ಧಿವಂತರಂತೆ ಮಾತನಾಡುತ್ತ ಎದುರಿಗಿದ್ದವರನ್ನು ನೋಯಿಸುವುದು ಸರಿಯಲ್ಲ. ಅಂತಹವರನ್ನು ಬೆಣ್ಣೆ ಮಾತುಗಳಿಂದಲೋ, ನಿರ್ಲಕ್ಷ್ಯದಿಂದಲೋ ಬಗ್ಗಿಸಲಾಗದು. ಸೂಜಿ ಮೊನೆಯಂಥ ಚಾಟಿ ಮಾತುಗಳಿಂದಲೇ ಸಾಧ್ಯ. ತಾನೂ ಹೆಣ್ಣಾಗಿ ಇನ್ನೊಬ್ಬ ಹೆಣ್ಣನ್ನು ಹೀಗೆ ನಗೆಪಾಟಲಿಗೀಡು ಮಾಡುವವರಿಗೆ ಗೌರವ ಕೊಡುವ ಆವಶ್ಯಕತೆ ಇಲ್ಲ ಅನ್ನುವುದು ನನ್ನ ಅನಿಸಿಕೆ. ಅಷ್ಟಕ್ಕೂ ನಮ್ಮ ಅಬ್ದುಲ… ಕಲಾಂ, ಸಚಿನ್‌ ತೆಂಡುಲ್ಕರ್‌… ಅಂತ ದೊಡ್ಡ ವ್ಯಕ್ತಿಗಳು ಕೂಡ ನನ್ನಷ್ಟೇ ಎತ್ತರ ಅಲ್ಲವೆ? ನನ್ನದು ಭಾರತೀಯರ ಸರಾಸರಿ ಎತ್ತರ. ಸ್ವಲ್ಪ ಜಾಸ್ತಿಯೂ ಇಲ್ಲ, ಕಡಿಮೆಯೂ ಇಲ್ಲ ಎನ್ನುವ ಹೆಮ್ಮೆ ನನ್ನದು.

ಜಮುನಾರಾಣಿ ಎಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next