ರಾಯಚೂರು: ಕನ್ನಡವನ್ನು ಉಳಿಸಿ, ಬೆಳೆಸಿ, ಕಲಿಸಿ, ಪಸರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬರುತ್ತಿದೆ. ಸಾಹಿತ್ಯ ಕ್ಷೇತ್ರಕ್ಕೆ ಅದರ ಕೊಡುಗೆ ಅನನ್ಯ ಎಂದು ಶಿಕ್ಷಣ ಇಲಾಖೆ
ವಿಷಯ ಪರಿವೀಕ್ಷಕಿ ಪ್ರವೀಣಾ ಹಲಗಣಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮ್ಯಾದಾರ ಲಲಿತ ಕಲಾ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಚಿತ್ರಕಲಾ ಪ್ರಾತ್ಯಕ್ಷಿಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎಲೆಮರೆ ಕಾಯಿಯಂತೆ ಇರುವ ಶಿಕ್ಷಕರು, ಪ್ರತಿಭಾವಂತ ಮಕ್ಕಳು, ಪ್ರಗತಿಪರ ರೈತರು, ಯುವ ಬರಹಗಾರರು, ಲೇಖಕರು ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ವೇದಿಕೆಯನ್ನು ಒದಗಿಸುವಂಥ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್. ಯುವ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಪುಸ್ತಕಗಳ ಲೋಕಾರ್ಪಣೆ ಮಾಡಿದೆ. ದತ್ತಿ ಕಾರ್ಯಕ್ರಮಗಳ ಮೂಲಕ ಅನೇಕ ಸಾಧಕರನ್ನು ಸ್ಮರಿಸುವ ಕೆಲಸ ಮಾಡುತ್ತಿದೆ. ಕನ್ನಡ ಇಂದಿಗೂ ಭದ್ರವಾಗಿದೆ ಎಂದರೆ ಅದಕ್ಕೆ ಕಸಾಪ ಕಾರ್ಯ ಚಟುವಟಿಕೆಗಳೇ ಕಾರಣ ಎಂದರು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ.
ದೇವದುರ್ಗ ತಾಲೂಕಿನ ಚಿಕ್ಕ ಹಳ್ಳಿಯ ಬಾಲಕಿ ಇಂದು ರಾಜ್ಯಮಟ್ಟದ ಖಾಸಗಿ ವಾಹಿನಿಯಲ್ಲಿ ಗಾಯನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಅಂಥ ಸಾಕಷ್ಟು ಪ್ರತಿಭೆಗಳಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಚನ್ನಪ್ಪ ತುಕ್ಕಾಯಿ ಸ್ಮರಣ ದತ್ತಿ ಪ್ರಶಸ್ತಿಯನ್ನು ನಿವೃತ್ತ ಶಿಕ್ಷಕ ಮುದುಕಪ್ಪ ನಾಯಕರಿಗೆ, ದೋತ್ರಬಂಡಿ ನಾಗಮ್ಮ ಬೆನಕಪ್ಪ ಸ್ಮಾರಕ ಪ್ರಶಸ್ತಿಯನ್ನು ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಜಿ.ಜಗದೀಶ ಗುಪ್ತಾರಿಗೆ ಹಾಗೂ ಹನುಮಂತಪ್ಪ ಸಂಜೀವಪ್ಪ ಮ್ಯಾದಾರ್ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಯುವ ಚಿತ್ರ ಕಲಾವಿದೆ ಉಮಾವತಿ ಅವರಿಗೆ ನೀಡಿ ಗೌರವಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಹುಡಾ, ಮ್ಯಾದಾರ ಲಲಿತಕಲಾ ಪ್ರತಿಷ್ಠಾನ ಅಧ್ಯಕ್ಷ ಎಚ್.ಎಚ್.ಮ್ಯಾದಾರ, ದತ್ತಿ ದಾನಿ ಮಲ್ಲಿಕಾರ್ಜುನ ದೋತ್ರಬಂಡಿ, ಗುರು ಲಲಿತ ಕಲಾ ಪ್ರಾಚಾರ್ಯ ಪಿ.ಚಂದ್ರಶೇಖರ, ಕಸಾಪ ಗೌರವ ಕಾರ್ಯದರ್ಶಿಗಳಾದ ಜೆ.ಎಲ್.ಈರಣ್ಣ, ಭೀಮನಗೌಡ ಇಟಗಿ, ರಾಮಣ್ಣ ಮ್ಯಾದಾರ ಸೇರಿ ಇತರರಿದ್ದರು.