ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆಯಬೇಕಾಗಿದ್ದ ಜಿಪಂ ಮುಂದುವರೆದ ಸಾಮಾನ್ಯ ಸಭೆಯನ್ನು ಕೋರಂ ಕೊರತೆಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇದರಿಂದ ಸತತ ಏಳನೇ ಬಾರಿ ಸಭೆಯನ್ನು ಮುಂದೂಡಿದಂತಾಗಿದೆ.
ಸಾಮಾನ್ಯ ಸಭೆ ನಡೆಸಲು ಒಟ್ಟು ಸದಸ್ಯರ ಅರ್ಧದಷ್ಟು ಅಂದರೆ 26 ಸದಸ್ಯರ ಕೋರಂ ಬೇಕು. ಆದರೆ ಇಂದಿನ ಸಭೆಯಲ್ಲಿ 14 ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಹಾಗಾಗಿ ಸಭೆ ನಡೆಸಲು ಬರುವುದಿಲ್ಲ, ಕೋರಂ ಕೊರತೆಯಿಂದ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.
ಫೆ. 7 ರಂದು ಅವಿಶ್ವಾಸ ನಿರ್ಣಯ ಮಂಡನೆ ವಿಶೇಷ ಸಭೆಯನ್ನು ಕರೆಯಲಾಗಿದೆ. ನಾನು ಇಲ್ಲಿಯ ತನಕ ಜಿಪಂನಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ಮಾಡಿದ್ದೇನೆ. ನನ್ನ ಆಡಳಿತಾವಧಿಯ 32 ತಿಂಗಳಲ್ಲಿ 21 ಬಾರಿ ಸಭೆ ಕರೆದಿದ್ದೇನೆ. ಆದರೆ ಕೆಲವು ಸದಸ್ಯರು ನನ್ನ ಮೇಲೆ ವಿಶ್ವಾಸವಿಲ್ಲ ಎಂದು ದೂರಿ ಪದೇ ಪದೇ ಸಭೆಗೆ ಗೈರಾಗುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಅಭಿವೃದ್ಧಿಗೆ ತೊಂದರೆ ಆಗಬಾರದು, ಬರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕೆಂದು ಪ್ರತಿ ತಿಂಗಳು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಕರೆದು ಜಿಲ್ಲೆಯ ಎಲ್ಲ 37 ಜಿಪಂ ಕ್ಷೇತ್ರಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದೇನೆ. ಜೊತೆಯಲ್ಲಿ ಕಾಲ ಕಾಲಕ್ಕೆ ಸ್ಥಾಯಿ ಸಮಿತಿಗಳ ಸಭೆ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ತ್ತೈಮಾಸಿಕ ಸಭೆ, ಬರ ಅಧ್ಯಯನ ಸಭೆ, ದಿಶಾ ಸಭೆ ಸೇರಿದಂತೆ ಎಲ್ಲ ರೀತಿಯ ಸಭೆಗಳಿಗೆ ಕಡ್ಡಾಯವಾಗಿ ಪಾಲ್ಗೊಂಡು ಜಿಲ್ಲೆಯ ಜನತೆ ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಂದರು.
ಫೆ.7 ರಂದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸಭೆ ಕರೆದಿದ್ದು ಪಕ್ಷ ಭೇದ ಮರೆತು ನನ್ನನ್ನು ಬೆಂಬಲಿಸುವಂತೆ ಎಲ್ಲರಲ್ಲೂ ಕೋರಿಕೊಂಡಿದ್ದೇನೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂದು ನಾನು ಪಕ್ಷ
ಭೇದ ಮಾಡದೆ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದೇನೆ. ನನ್ನ ವಿರುದ್ಧದ ಅವಿಶ್ವಾಸಕ್ಕೆ ನೂರಕ್ಕೆ ನೂರರಷ್ಟು ಸೋಲಾಗಲಿದೆ ಎನ್ನುವ ವಿಶ್ವಾಸ ನನ್ನಲ್ಲಿದೆ. ನನ್ನ ಆಡಳಿತ ನೋಡಿರುವ ಸದಸ್ಯರು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.
ಬಿಜೆಪಿ ಸದಸ್ಯ ಅಜ್ಜಪ್ಪ ಮಾತನಾಡಿ, ಆಡಳಿತ ಪಕ್ಷದ ಸದಸ್ಯರೇ ಸಭೆ ನಡೆಸಲು ಸಹಕಾರ ನೀಡುತ್ತಿಲ್ಲ, ಹಾಗಾಗಿ ಏನು ಮಾಡಬೇಕೋ ಅದನ್ನು ವರಿಷ್ಠರ ತೀರ್ಮಾನದಂತೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ಅಧಿಕಾರ ಹಂಚಿಕೆ ಒಡಂಬಡಿಕೆ ವೈಯಕ್ತಿಕ. ಸದ್ಯಕ್ಕೆ ಸೌಭಾಗ್ಯ ಬಸವರಾಜನ್ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದು ವೇಳೆ ಕಾಂಗ್ರೆಸ್ ಪಕ್ಷದ ಒಡಂಬಡಿಕೆಯಂತೆ ಹೊಸದುರ್ಗ ಕ್ಷೇತ್ರದ ಉಪ್ಪಾರ ಸಮಾಜದ ವಿಶಾಲಾಕ್ಷಿ ನಟರಾಜ್
ಅಧ್ಯಕ್ಷರಾಗಬೇಕು. ಕಾಂಗ್ರೆಸ್‌ನವರು ಅವರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆಂದು ಮೊದಲು ಮಾಧ್ಯಮಗಳ ಎದುರು ಬಹಿರಂಗ ಪಡಿಸಲಿ. ಆಗ ಬಿಜೆಪಿ ತನ್ನ ನಿಲುವನ್ನು ಪ್ರಕಟಿಸಲಿದೆ ಎಂದು ಹೇಳಿದರು.
ಸಭೆಯನ್ನು ಮುಂದೂಡುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಸದಸ್ಯರು ಗುಂಪು ಗುಂಪಾಗಿ ಹೊರ ನಡೆದರು.